ನಕಾರಾತ್ಮಕ ಆಕರ್ಷಣೆಗೆ ಒಳಗಾಗದಿರಿ

7
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಎನ್‍ಎಸ್‍ಎಸ್ ಮತ್ತು ಎನ್‌ಸಿಸಿ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

ನಕಾರಾತ್ಮಕ ಆಕರ್ಷಣೆಗೆ ಒಳಗಾಗದಿರಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿ ಹಂತದಲ್ಲಿ ಸಹಜವಾಗಿಯೇ ಕೆಲವು ಆಕರ್ಷಣೆಗಳು ಬರುತ್ತವೆ. ಅವು ಕೇವಲ ತಾತ್ಕಾಲಿಕ. ಅಂತಹ ನಕಾರಾತ್ಮಕ ಆಕರ್ಷಣೆಗಳಿಗೆ ಒಳಗಾಗಿ ವಿದ್ಯಾರ್ಥಿಗಳು ಬದುಕು ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಎನ್‍ಎಸ್‍ಎಸ್ ಮತ್ತು ಎನ್‌ಸಿಸಿ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ದೊರೆತ ಈ 72 ವರ್ಷಗಳಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಈ ಅವಧಿಯಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದಿರುವುದು ಮಾತ್ರವಲ್ಲದೆ ಉದ್ಯೋಗಗಳನ್ನೂ ಪಡೆದುಕೊಂಡು ಗಮನಸೆಳೆಯುತ್ತಿದ್ದಾರೆ. ಇವತ್ತು ಸಮಾಜ ಮತ್ತು ದೇಶಕ್ಕೆ ಲಭ್ಯವಾಗುತ್ತಿರುವ ಬಹುದೊಡ್ಡ ಕೊಡುಗೆಯ ಹಿಂದೆ ಮಹಿಳೆಯರ ಶಕ್ತಿ ಅಡಗಿದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಸಂಸ್ಕಾರವೂ ಮುಖ್ಯ. ಯೌವ್ವನದಲ್ಲಿ ಕ್ಷುಲ್ಲಕ ವಿಚಾರಗಳಿಗೆ ಮನಸ್ಸನ್ನು ಹರಿಯ ಬಿಡದೆ, ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಗಂಭೀರವಾಗಿ ಚಿಂತನೆಗಳ ಕಡೆಗೆ ಸಾಗಬೇಕು. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯೇ ಮುಖ್ಯ ಧ್ಯೇಯವಾಗಬೇಕು. ಓದಿಗೆ ಯಾವುದೂ ಅಡ್ಡಿಯಾಗಬಾರದು’ ಎಂದರು.

‘ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಶಿಡ್ಲಘಟ್ಟ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 7ರ ಪಕ್ಕದಲ್ಲಿಯೇ ನಿರ್ಮಾಣವಾಗುತ್ತಿದೆ. ಅದಕ್ಕಾಗಿ ಸರ್ಕಾರ ₨2 ಕೋಟಿ ಬಿಡುಗಡೆ ಮಾಡಿದೆ. ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಒಂದು ವರ್ಷದ ಒಳಗೆ ಆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸೇವೆಗೆ ಲಭ್ಯವಾಗಲಿದೆ. ಅದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಹೇಳಿದರು.

ಬಿಎ ಮತ್ತು ಬಿಕಾಂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಟಿ.ನಾಗರಾಜಯ್ಯ, ವಾರ್ತಾ ಇಲಾಖೆಯ ವಾರ್ತಾ ಸಹಾಯಕಿ ಮೈನಾಶ್ರೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣಸ್ವಾಮಿ, ಮರಳುಕುಂಟೆ ಕೃಷ್ಣಮೂರ್ತಿ ಹಾಗೂ ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !