ಮಂಗಳವಾರ, ನವೆಂಬರ್ 12, 2019
24 °C

40ವರ್ಷ ದುಡಿದು ಸೌಲಭ್ಯಕ್ಕಾಗಿ ಅಲೆದ ಅಂಚೆ ನೌಕರ: ‘ಪ್ರಜಾವಾಣಿ’ ವರದಿಗೆ ಸ್ಪಂದನೆ

Published:
Updated:

ಚಿಕ್ಕಬಳ್ಳಾಪುರ: ಅಂಚೆ ಇಲಾಖೆಯಲ್ಲಿ ಸುಮಾರು 40 ವರ್ಷಗಳಷ್ಟು ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತಿ ನಂತರದ ಆರ್ಥಿಕ ಸವಲತ್ತಿಗಾಗಿ ಒಂದು ವರ್ಷದಿಂದ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿದ್ದ ನಿವೃತ್ತ ಗ್ರಾಮೀಣ ಅಂಚೆ ನೌಕರ ಶೇಖ್ ಅಬ್ದುಲ್ ಖಾದರ್ ಅವರ ನೋವಿಗೆ ‘ಪ್ರಜಾವಾಣಿ’ ವರದಿಯ ಪರಿಣಾಮ ಕೊನೆಗೂ ಪರಿಹಾರ ದೊರೆತಿದೆ. 

ತಾಲ್ಲೂಕಿನ ಪೇರೇಸಂದ್ರದ ನಿವಾಸಿ ಶೇಖ್ ಅಬ್ದುಲ್ ಅವರು ಪೇರೇಸಂದ್ರದ ಅಂಚೆ ಕಚೇರಿಯ ಅರೂರು ಶಾಖಾ ಕಚೇರಿಯಲ್ಲಿ ಪೊಸ್ಟ್ ಮಾಸ್ಟರ್, ಪೊಸ್ಟ್‌ಮೆನ್, ಮೇಲ್ ಕ್ಯಾರಿಯರ್‌ ಆಗಿ ದುಡಿದು, 2018ರ ನವೆಂಬರ್‌ 15 ರಂದು ನಿವೃತ್ತಿ ಹೊಂದಿದ್ದರು. ಅಂಚೆ ಇಲಾಖೆಯೇತರ ನೌಕರರಾದ ಇವರಿಗೆ ₨1.50 ಲಕ್ಷ ಇಡುಗಂಟು ಜತೆಗೆ ₨63.50 ಸಾವಿರ ಕರಾರು ಸಮಾಪ್ತಿ (ಸೆವರನ್ಸ್) ವೇತನ ಸೇರಿ ₨2.13 ಲಕ್ಷ ನಿವೃತ್ತಿ ಸೌಲಭ್ಯ ಸೇರಬೇಕಾಗಿತ್ತು. 

ನಾಲ್ಕು ದಶಕಗಳ ಕಾಲ ಸೈಕಲ್ ತುಳಿದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಈ ಹಿರಿಯರು ತಮಗೆ ಬರಬೇಕಾದ ಹಣಕ್ಕಾಗಿ ಕೋಲಾರ, ಬೆಂಗಳೂರು ಕಚೇರಿಗಳಿಗೆ ಅಲೆದ ರೋಸಿ ಹೋಗಿದ್ದರು. ಬೇಸತ್ತು ಕೋಲಾರ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು, ಕರ್ನಾಟಕದ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್‌ ಜನರಲ್‌ ಅವರಿಗೆ ಪತ್ರ ಬರೆದರೂ ಪ್ರಯೋಜನವಾಗಿರಲಿಲ್ಲ. 

ಈ ಕುರಿತು ‘ಪ್ರಜಾವಾಣಿ’ ಅಕ್ಟೋಬರ್ 30 ರಂದು ‘‘ತಬರ’ನಂತಾದ ಗ್ರಾಮೀಣ ಅಂಚೆ ನೌಕರ’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. ಆ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅಂಚೆ ಇಲಾಖೆ ಅಧಿಕಾರಿಗಳ ಧೋರಣೆಗೆ ಎಲ್ಲೆಡೆ ಆಕ್ರೋಶಕ್ಕೆ ಎಡೆಮಾಡಿತ್ತು. 

ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಶೇಖ್ ಅಬ್ದುಲ್ ಖಾದರ್ ಅವರನ್ನು ಬುಧವಾರ (ನ.6) ಚಿಕ್ಕಬಳ್ಳಾಪುರದ ಪ್ರಧಾನ ಅಂಚೆ ಕಚೇರಿಗೆ ಕರೆಯಿಸಿಕೊಂಡು ಅವರ ಸವಲತ್ತಿನ ಹಣದ ಚೆಕ್‌ ಅನ್ನು ನೀಡಿ ಕಳುಹಿಸಿದ್ದಾರೆ.

ಅದರ ಬೆನ್ನಲ್ಲೇ ‘ಪ್ರಜಾವಾಣಿ’ ಸಂಪರ್ಕಿಸಿದ ಶೇಖ್ ಅಬ್ದುಲ್ ಖಾದರ್ ಅವರು, ‘40 ವರ್ಷ ನಿಷ್ಠಾವಂತನಾಗಿ ಕೆಲಸ ಮಾಡಿದವನಿಗೆ ಇಲಾಖೆ ಈ ರೀತಿ ನಡೆಸಿಕೊಂಡಿದ್ದು ತುಂಬಾ ಬೇಸರ ತಂದಿತ್ತು. ಒಂದು ವರ್ಷದಿಂದ ಕಾಯ್ದು, ಕಾಯ್ದು ತುಂಬಾ ಸೋತು ಹೋಗಿದ್ದೆ. ಈಗ ಮನಸ್ಸಿಗೆ ನೆಮ್ಮದಿ ಸಿಕ್ಕಿತು. ತುಂಬಾ ಸಂತೋಷವಾಗಿದೆ’ ಎಂದು ಧನ್ಯವಾದಗಳನ್ನು ಅರ್ಪಿಸಿದರು. 

‘ನಿವೃತ್ತಿ ನಂತರ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು, ಮಗಳ ಮದುವೆಗೆ ಮಾಡಿದ ಸಾಲ ಹೊಣೆ ಆತಂಕ ಮೂಡಿಸಿತ್ತು. ಇದೀಗ ಹಣ ಬಂದಿದೆ ಮೊದಲು ಸಾಲ ತೀರಿಸಿ, ಋಣ ಮುಕ್ತನಾಗುವೆ. ಇಲಾಖೆಯಲ್ಲಿ ನನ್ನಂತೆ ಸುಮಾರು 80 ನೌಕರರ ಸವಲತ್ತು ವಿಳಂಬವಾಗಿದೆ ಎಂಬ ಮಾಹಿತಿ ಇದೆ. ಅಧಿಕಾರಿಗಳು ಈಗ ಎಚ್ಚೆತ್ತುಕೊಂಡು ಎಲ್ಲರ ಕಡತ ವಿಲೇವಾರಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಬ್ಬರಿಗೆ ನನ್ನಂತೆ ಆಗಬಾರದು. ಇದೊಂದು ಪಾಠವಾಯಿತು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)