ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ | ಆಚೇಪಲ್ಲಿ ಸರ್ಕಾರಿ ಶಾಲೆಗೆ ಆಧುನಿಕ ಸ್ಪರ್ಶ

Published 24 ಫೆಬ್ರುವರಿ 2024, 6:56 IST
Last Updated 24 ಫೆಬ್ರುವರಿ 2024, 6:56 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಸರ್ಕಾರಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪೋಷಕರು ಮನಸ್ಸು ಮಾಡಿದರೆ ಶಾಲೆಯನ್ನು ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಮಾದರಿ ಶಾಲೆಯಾಗಿ ರೂಪಿಸಬಹುದು ಎಂಬುದಕ್ಕೆ ತಾಲ್ಲೂಕಿನ ಆಚೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನಿದರ್ಶನವಾಗಿದೆ. 

ಈ ಶಾಲೆಗೆ ದಾನಿಗಳ ನೆರವಿನಿಂದ ಶಾಲಾ ಕಟ್ಟಡ ಕಲ್ಪಿಸಿಕೊಡಲಾಗಿದೆ. ತರಗತಿ ಗೋಡೆಗಳಲ್ಲಿ ಬರೆದ ಆಕೃತಿಗಳು, ಮಾಹಿತಿಗಳು ಆಕರ್ಷೀಣೀಯ ಕೇಂದ್ರವಾಗಿವೆ. ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಕಂಪ್ಯೂಟರ್ ಕಲಿಕೆ, ವಿವಿಧ ಆಟ, ಪಾಠಗಳಿಗೆ ಕಲಿಕಾ ಸಾಮಗ್ರಿಗಳು ವಿದ್ಯಾರ್ಥಿಗಳ ಕಲಿಕೆ ಸಾಮರ್ಥ್ಯವನ್ನು ಹೆಚ್ಚಿಸಿದೆ. 

ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ, ಕ್ಲಸ್ಟರ್ ವ್ಯಾಪ್ತಿಯಲ್ಲಿರುವ ಆಚೇಪಲ್ಲಿ ಗ್ರಾಮದ ಶಾಲೆಯಲ್ಲಿ ಒಂದನೇ ತರಗತಿಯಿಂದ 8ನೇ ತರಗತಿವರೆಗೆ ಒಟ್ಟಾರೆ 147 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂದನೇ ತರಗತಿಯಲ್ಲಿ ಏಳು, ಎರಡನೇ ತರಗತಿಯಲ್ಲಿ 09, ಮೂರನೇ ತರಗತಿಯ 15, ನಾಲ್ಕನೇ ತರಗತಿಯ 20, 5 ನೇ ತರಗತಿಯ 13, ಆರನೇ ತರಗತಿಯ 23, ಏಳನೇಯ ತರಗತಿಯ 15, ಎಂಟನೇ ತರಗತಿಯಲ್ಲಿ 45 ವಿದ್ಯಾರ್ಥಿಗಳಿದ್ದಾರೆ. 

ಶಾಲೆಯಲ್ಲಿ ವಿನೂತನ ತಂತ್ರಜ್ಞಾನ ಬಳಸಿ ಭೋದಿಸಲಾಗುತ್ತಿದೆ. ಪ್ರೊಜೆಕ್ಟರ್ ಮೂಲಕ ಎಲ್ಇಡಿ ಪರದೆ ಮೇಲೆ ಆಡಿಯೊ, ವಿಡಿಯೊಗಳು ಮಕ್ಕಳ ಕಲಿಕೆ ಸಾಮರ್ಥ್ಯವನ್ನು ಹೆಚ್ಚಿಸಿವೆ. 2020–21ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿವರಿಗೆ ಆಂಗ್ಲ ಮಾಧ್ಯಮವನ್ನೂ ಆರಂಭಿಸಲಾಗಿದೆ. ಐದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಇಲ್ಲಿನ ಶಿಕ್ಷಕರು ಹೇಳುತ್ತಾರೆ. 

ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಣೆ, ಭಾಷೆ, ಸಮಾಜದ ಆಗುಹೋಗುಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಪ್ರತಿದಿನ ದಿನಪತ್ರಿಕೆಗಳನ್ನೂ ವಿದ್ಯಾರ್ಥಿಗಳಿಂದಲೇ ಓದಿಸಲಾಗುತ್ತಿದೆ.  ಶಾಲೆಯ ಗ್ರಂಥಾಲಯದಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳಿವೆ. ವಾರಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ, ಓದುವ ಹವ್ಯಾಸ ಉತ್ತೇಜಿಸಲಾಗುತ್ತಿದೆ. ಶನಿವಾರ ಬೆಳಿಗ್ಗೆ ಯೋಗ, ಸೂರ್ಯ ನಮಸ್ಕಾರ, ಬ್ಯಾಗು ರಹಿತ ದಿನ ಮಾಡಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಶೇಷ ಕಲಿಕಾ ಮಟ್ಟ ವೃದ್ಧಿಸಲಾಗಿದೆ. ರಸಪ್ರಶ್ನೆ, ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ನೃತ್ಯಗಳು, ದೇಶಭಕ್ತಿ, ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಹಾಡುಗಳನ್ನು ಮಕ್ಕಳಿಂದಲೇ ಹಾಡಿಸಲಾಗುತ್ತಿದೆ. ಈ ಶಾಲೆಯಲ್ಲಿನ ಶಿಕ್ಷಕರು ಕಲಿಕಾ ಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. 

ಬೆಂಗಳೂರಿನ ಆದಿತಿ ನೇತೃತ್ವದಲ್ಲಿ ರೈಟ್ ಟು ಲೀವ್ ಸಂಸ್ಥೆಯು ಈ ಸರ್ಕಾರಿ ಶಾಲೆಗೆ ₹12 ಲಕ್ಷ ವೆಚ್ಚದ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ಅಲ್ಲದೆ, ತಟ್ಟೆ ತೊಳೆಯಲು ಅವಕಾಶ, ಶಾಲಾ ಕಟ್ಟಡ ಮತ್ತು ಕೊಠಡಿಗಳಿಗೆ ಸುಣ್ಣ, ಬಣ್ಣ, ಚಿತ್ತಾರ್ಷಕವಾದ ಗೊಂಬೆಗಳ ಚಿತ್ತಾರ, ವಿಷಯಗಳ ಮಾಹಿತಿಗಳು, ಕಲಿಕಾ ಗೋಡೆಗಳ ನಿರ್ಮಾಣ, ವಿಶೇಷವಾಗಿ ಮಕ್ಕಳು ಕೂರಲು ಕುರ್ಚಿಗಳು, ಮೇಜು ಮತ್ತು ಬೆಂಚುಗಳನ್ನು ಈ ಸಂಸ್ಥೆ ಕಲ್ಪಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಈ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಟ್ರಾಕ್ ಸೂಟ್, ಸಾಕ್ಸ್, ಶೂಗಳು, ಶಾಲಾ ಬ್ಯಾಗುಗಳು, ಗ್ರೀನ್ ಬೋರ್ಡ್‍ಗಳು, ಕಚೇರಿಗೆ ಕುರ್ಚಿಗಳು, ಶಾಲಾ ದುರಸ್ತಿ ಮಾಡಿಸಿ, ಗ್ರಾಮೀಣ ಮಟ್ಟದ ಈ ಸರ್ಕಾರಿ ಶಾಲೆಗೆ ನೆರವಾಗಿದೆ.

ಶಾಲೆಯ ಇತಿಹಾಸ: 1905ರಲ್ಲಿ ಗ್ರಾಮದ ಚಾವಡಿಯೊಂದರಲ್ಲಿ ಈ ಸರ್ಕಾರಿ ಶಾಲೆ ಆರಂಭವಾಯಿತು. ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರ ಎನ್.ವಿ. ಕೃಷ್ಣಮಾಚಾರ್, ಮಾಜಿ ಶಾಸಕ ಅಪ್ಪಸ್ವಾಮಿರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಬೂರಗಮಡುಗು ರಾಮರೆಡ್ಡಿ, ಚೌಡರೆಡ್ಡಿ, ಚಂದ್ರಶೇಖರ್, ರಾಜಮ್ಮ ಚೌಡರೆಡ್ಡಿ, ಚನ್ನ ಕೇಶವರೆಡ್ಡಿ ಸೇರಿ ಅನೇಕರು ಇದೇ ಶಾಲೆಯಲ್ಲಿ ಕಲಿತಿದ್ದವರು. ದಲಿತ, ಶೋಷಿತರ, ಕೃಷಿಕೂಲಿ ಕಾರ್ಮಿಕರ ಪರ, ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ, ಮೈಸೂರು ಚಲೊ, ಕಮ್ಯೂನಿಸ್ಟ್ ಸೇರಿದಂತೆ ವಿವಿಧ ಹೋರಾಟಗಳಲ್ಲಿ ಭಾಗಿಯಾಗಿರುವ ಅನೇಕರು ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. 

ಯಾರು ಏನಂದರು?

ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದೆ. ಶಾಲೆಗೆ ಮೂರು ಕೊಠಡಿ ಅಡುಗೆ ಮನೆ ಹಾಗೂ ಆಟದ ಮೈದಾನ ಬೇಕು. ಪಕ್ಕದಲ್ಲಿನ ಸರ್ಕಾರಿ ಜಮೀನು ಕೊಟ್ಟರೆ ಶಾಲೆಯ ಅಭಿವೃದ್ಧಿಗೆ ನೆರವಾಗಲಿದೆ - ವೆಂಕಟೇಶ್ (ಗಿರಿ) ಅಧ್ಯಕ್ಷ ಶಾಲಾ ಅಭಿವೃದ್ಧಿ ಸಮಿತಿ 

ಉತ್ತಮ ಕಲಿಕಾ ಮಟ್ಟದಿಂದ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಖಾಸಗಿ ಶಾಲೆಗಳ ರೀತಿ ಸರ್ಕಾರಿ ಶಾಲೆ ಮಕ್ಕಳು ಕಡಿಮೆಯೇ ಇಲ್ಲ. ಸರ್ಕಾರಿ ಶಾಲೆಗಳು ಕೀಳರಿಮೆ ಬೇಡ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು - ಜಿ.ಈರಪ್ಪ ಸದಸ್ಯ ಎಸ್‌ಡಿಎಂಸಿ  

ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟ ಪರಿಣಾಮಾತ್ಮಕವಾಗಿ ಕಲಿಸಲಾಗುತ್ತಿದೆ. ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿ ನಮ್ಮೂರಿನ ಶಾಲೆ ಉಳಿಸಿ ಬೆಳಿಸಬೇಕು - ಕೆ.ಸಿ.ವೆಂಕಟರೆಡ್ಡಿ ಶಾಲಾ ಮುಖ್ಯಶಿಕ್ಷಕ 

ಶಾಲೆಯ ಕಟ್ಟಡಗಳಿಗೆ ಹಾಗೂ ಗೋಡೆಬರಹಗಳು ಆಕರ್ಷೀಯವಾಗಿರುವುದು.
ಶಾಲೆಯ ಕಟ್ಟಡಗಳಿಗೆ ಹಾಗೂ ಗೋಡೆಬರಹಗಳು ಆಕರ್ಷೀಯವಾಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT