ಶನಿವಾರ, ಜನವರಿ 23, 2021
19 °C

4 ಸರ್ಕಾರಿ ಶಾಲೆಗಳ ದತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ‘ಸರ್ಕಾರದ ಶಿಕ್ಷಣ ಸಮಿತಿ ಸಲಹೆಗಾರ ಡಾ.ಎಂ.ಎಸ್.ದೊರೆಸ್ವಾಮಿರವರ ಪ್ರೇರಣೆಯಿಂದ ತಮ್ಮ ಸ್ವಗ್ರಾಮ ಸೇರಿದಂತೆ 4 ಗ್ರಾಮಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಮಾದರಿ ಶಾಲೆಗಳನ್ನು ಮಾಡಲಾಗುವುದು’ ಎಂದು ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಬಿ.ಎಸ್.ವೆಂಕಟಸ್ವಾಮಿ ನಾಯ್ಡು ತಿಳಿಸಿದ್ದಾರೆ.

ತಾಲ್ಲೂಕಿನ ಜೂಲಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲೆಗಳ ದತ್ತು ಕಾರ್ಯಕ್ರಮ ಹಾಗೂ ಭೂಮಿ ಪೂಜೆ ನಿರ್ವಹಿಸಿ ಮಾತನಾಡಿದರು.

‘ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಸಮಿತಿಯಲ್ಲಿ ಡಾ.ಎಂ.ಆರ್.ದೊರೆಸ್ವಾಮಿರವರು ಅವರು ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಸಚಿವರು ಸೇರಿದಂತೆ ಸರ್ಕಾರಿ ಹಿರಿಯ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕು ಎಂದು ಹೇಳಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳು ಮಾದರಿ ಆಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು. ಅವರ ಸಲಹೆಯಂತೆನನ್ನ ಸ್ವಗ್ರಾಮ ಬೋಡಿಕದಿರೇಪಲ್ಲಿ, ಜೂಲಪಾಳ್ಯ, ವೆಂಕಟರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಹಾಗೂ ಪೋಲೇರಮ್ಮ ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಸರ್ಕಾರದ ನೀತಿ ನಿಯಮಗಳಂತೆ 4 ಶಾಲೆಗಳನ್ನು ದತ್ತು ಪಡೆಯಲಾಗಿದೆ. ಶಾಲಾ ಕಟ್ಟಡ, ತಡೆಗೋಡೆ, ಕುಡಿಯುವ ನೀರು ಸೇರಿದಂತೆ ಅಗತ್ಯವಾದ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು, ಉತ್ತಮವಾಗಿ ವ್ಯಾಸಂಗ ಮಾಡಬೇಕು. ಉನ್ನತ ಹುದ್ದೆ, ಸಮಾಜ ಸೇವಕರಾಗಿ ಜನಿಸಿದ ಗ್ರಾಮಕ್ಕೆ ಹಾಗೂ ಶಾಲೆಗಳಿಗೆ ದಾನ ನೀಡುವಂತರಾಗಬೇಕು’ ಎಂದು ಕರೆ ನೀಡಿದರು.

ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ ಮಾತನಾಡಿ, ‘ಅನೇಕರು ಸ್ವಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಓದಿ, ನಗರ, ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸದಲ್ಲಿ ಇದ್ದಾರೆ. ದಾನ ಮಾಡುವ ಗುಣ ಕೆಲವರಿಗೆ ಮಾತ್ರ ಮನಸ್ಸು ಬರುತ್ತದೆ. ಜನಿಸಿದ ಗ್ರಾಮ, ಶಾಲೆಯನ್ನು ಎಂದಿಗೂ ಮರೆಯಬಾರದು. ವೆಂಕಟಸ್ವಾಮಿ ನಾಯ್ಡುಯವರು ಮಿಟ್ಟೇಮರಿ ಹೋಬಳಿಯ 4 ಸರ್ಕಾರಿ ಶಾಲೆಗಳನ್ನು ₹ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಾರೆ’ ಎಂದು ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಾಧಿಕಾರಿ ಆರ್. ವೆಂಕಟರಾಮಪ್ಪ, ಬೋಡಿಕದಿರೇಪಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಯಪಾಲನಾಯ್ಡು, ಅಕ್ಷರ ದಾಸೋಹದ ತಾಲ್ಲೂಕು ಸಹಾಯಕ ನಿರ್ದೇಶಕ ನರಸಿಂಹಾರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ವೆಂಕಟರವಣಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಕೆ.ಬಿ.ಆಂಜನೇಯರೆಡ್ಡಿ, ರಾಜಣ್ಣ, ಕೃಷ್ಣಪ್ಪ, ಕದಿರಪ್ಪ, ಪೋಲೇರಮ್ಮ ಪ್ರೌಢಶಾಲೆ ಮುಖ್ಯಶಿಕ್ಷಕ ಲಕ್ಷ್ಮೀನಾರಾಯಣರೆಡ್ಡಿ, ಗ್ರಾಮ ಪಂಚಾಯಿತಿ ನೂತನ ಸದಸ್ಯ ಪ್ರಶಾಂತ್, ಲಕ್ಷ್ಮಮಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸಿ.ಪಿ.ಆಂಜಿನಮ್ಮ, ಶಿಕ್ಷಕರಾದ ಸಿ.ನಾಗರಾಜು, ಸಿ.ಎಸ್.ಕೃಷ್ಣಾರೆಡ್ಡಿ, ಡಿ.ಆದಿನಾರಾಯಣ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.