ಬುಧವಾರ, ಜುಲೈ 28, 2021
28 °C

ಸಂಚಾರ ನಿಯಮ ಪಾಲನೆಗೆ ಆಟೊ ಚಾಲಕರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರ ಮತ್ತು ತಾಲ್ಲೂಕಿನಲ್ಲಿ ಆಟೊ ಚಾಲಕರು ಕಾನೂನುಗಳನ್ನು ಉಲ್ಲಂಘಿಸಿ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ಆಟೊಗಳ ನಿಲುಗಡೆ ಮಾಡಬಾರದು ಎಂದು ನಗರ ಠಾಣೆಯ ಇನ್‌ಸ್ಪೆಕ್ಟರ್‌ ಆನಂದಕುಮಾರ್ ಮನವಿ ಮಾಡಿದರು.

ನಗರಠಾಣೆಯಲ್ಲಿ ಶುಕ್ರವಾರ ನಡೆದ ಆಟೊ ಚಾಲಕರ ಸಭೆಯಲ್ಲಿ ಮಾತನಾಡಿದರು.

ನಗರದಲ್ಲಿ ಆಟೊಗಳ ನಿಲ್ದಾಣಕ್ಕೆ ಸ್ಥಳಾವಕಾಶವಿಲ್ಲ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದಲ್ಲಾಳಿಗಳ ಕಾಟ ಅತಿಯಾಗಿದೆ. ವಿಮೆ ಮಾಡಿಸಲು ಹಾಗೂ ಚಾಲನಾ ಪರವಾನಗಿ ಮತ್ತಿತರ ಕೆಲಸಗಳನ್ನು ಮಾಡಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಇತ್ತೀಚೆಗೆ ನಗರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಆಟೊ ಚಾಲಕರು ದೂರುಗಳ ಸುರಿಮಳೆ ಗೈದಿದ್ದರು.

ಜಿಲ್ಲಾ ಎಸ್ಪಿ ಸೂಚನೆಯ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಅಧಿಕಾರಿಗಳು ಆಟೊ ಚಾಲಕರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿದರು. ಆಟೊ ಚಾಲಕರು ಕಡ್ಡಾಯವಾಗಿ ತಮ್ಮ ವಾಹನಗಳ ಆರ್.ಸಿ, ವಿಮೆ, ಎಮಿಷನ್ ಟೆಸ್ಟ್ ಮತ್ತಿತರ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಸಮವಸ್ತ್ರ ಧರಿಸಬೇಕು. ಚಾಲನಾ ಪರವಾನಗಿ ಹೊಂದಿರಬೇಕು ಎಂದು ಸೂಚಿಸಿದರು.

ಅಗತ್ಯವಾದ ದಾಖಲೆಗಳನ್ನು ನೀಡಿದರೆ ಪೊಲೀಸ್ ಇಲಾಖೆ ವತಿಯಿಂದ ಚಾಲನಾ ಪರವಾನಗಿಯನ್ನು ಮಾಡಿಸಿಕೊಡಲಾಗುವುದು. ಆಟೊಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಲೇಬೇಕು. ಅಕಸ್ಮಾತ್ ಅಪಘಾತವಾದರೆ ವಿಮೆ ಇಲ್ಲದಿದ್ದರೆ ತೀವ್ರ ತೊಂದರೆಯಾಗುತ್ತದೆ ಎಂದು ಚಾಲಕರಿಗೆ ಮನವರಿಕೆ ಮಾಡಿದರು.

ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳಬೇಕು. ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳ ಪಾರ್ಕಿಂಗ್ ಮಡಬೇಕು. ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದರೆ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಡಿವೈಎಸ್ಪಿ ಲಕ್ಷ್ಮಯ್ಯ ಮಾತನಾಡಿ, ಆಟೊ ಚಾಲಕರು ಸಂಚಾರ ನಿಯಮಗಳ ಕುರಿತು ಸಾರ್ವಜನಿಕರಿಗೂ ಜಾಗೃತಿ ಮೂಡಿಸಬೇಕು. ಹೆಲ್ಮೆಟ್ ಧರಿಸಿದರೆ ಆಗುವ ಅನುಕೂಲಗಳು, ಧರಿಸದಿದ್ದರೆ ಹೆಚ್ಚಿನ ದಂಡ ವಿಧಿಸುವ ಬಗ್ಗೆಯೂ ತಿಳುವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು