ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ಆಮಿಷವೊಡ್ಡಿದರೆ ಕ್ರಮ: ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್ ಎಚ್ಚರಿಕೆ

ಮತದಾರರಿಗೆ ಆಮಿಷವೊಡ್ಡಿದರೆ ಕ್ರಮ: ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್ ಎಚ್ಚರಿಕೆ
Last Updated 18 ಮಾರ್ಚ್ 2023, 5:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚುನಾವಣೆ ಪೂರ್ವದ ಈ ಸಮಯದಲ್ಲಿ ರಾಜಕೀಯ ಪಕ್ಷಗಳಿಂದ ಹಾಗೂ ಮುಖಂಡರಿಂದ ಮತದಾರರಿಗೆ ಆಮಿಷವೊಡ್ಡುವ, ಉಡುಗೊರೆ ನೀಡುವ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯಕೂಡದು ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣೆಯ ಪೂರ್ವ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನುಗಳು ಹಾಗೂ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜರುಗಿಸಿ, ಚುನಾವಣಾ ಪೂರ್ವದಲ್ಲಿ ನಡೆಯಲಿರುವ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಬೇಕು. ಮಾದರಿ ನೀತಿ ಸಂಹಿತೆ ಜಾರಿ ಆಗುವವರೆಗೂ ಕಾಯಬಾರದು ಎಂದು ರಾಜ್ಯ ಚುನಾವಣಾ ಆಯೋಗವು ಸ್ಪಷ್ಟ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಪಕ್ಷದ, ಸಂಭಾವ್ಯ ಅಭ್ಯರ್ಥಿಗಳ ಪ್ರಚಾರ ವಾಹನಗಳು, ಬಾವುಟಗಳು, ಭಿತ್ತಿ ಪತ್ರಗಳು, ಕರಪತ್ರ, ಪೋಸ್ಟರ್‌, ಬ್ಯಾನರ್‌ಗಳು, ಗೋಡೆ ಚಿತ್ರಬರಹಗಳು ಸೇರಿದಂತೆ ಇನ್ನಿತರ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವಂತಿಲ್ಲ. ಪ್ರಚಾರ ಮಾಡುವಂತಿಲ್ಲ ಎಂದು ಹೇಳಿದರು.

ನಗರ ಪ್ರದೇಶದಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿನ ಸಕ್ಷಮ ಪ್ರಾಧಿಕಾರಿಯನ್ನು ಸಂಪರ್ಕಿಸಿ ಅನುಮತಿ ಪಡೆಯಬಹುದು. ಕಾರ್ಯಕ್ರಮಗಳು, ಧ್ವನಿವರ್ಧಕಗಳಿಗೆ ಅನುಮತಿ, ಮೆರವಣಿಗೆಗೆ ಅನುಮತಿಯನ್ನು ಎಂದಿನಂತೆ ಪೊಲೀಸ್ ಇಲಾಖೆಯಿಂದ ಪಡೆಯಬೇಕು ಎಂದರು.

ಯಾವುದೇ ರಾಜಕೀಯ ಪಕ್ಷಗಳ ಬಾವುಟಗಳನ್ನು ಯಾರೆಂದರೆ ಅವರು ತಮ್ಮ ಮನೆಯ ಮೇಲೆ ಅಳವಡಿಸುವಂತಿಲ್ಲ. ಕಟ್ಟುವಂತಿಲ್ಲ. ಯಾವುದೇ ರಾಜಕೀಯ ಪಕ್ಷದ ನೋಂದಾಯಿತ ಕಾರ್ಯಕರ್ತರು, ಪದಾಧಿಕಾರಿಗಳು ಆ ಪಕ್ಷದ ಬಾವುಟವನ್ನು ತಮ್ಮ ಮನೆಗಳು, ಖಾಸಗಿ ಕಟ್ಟಡಗಳ ಮೇಲೆ ಹಾಕಿಕೊಳ್ಳಬಹುದು. ಇಲ್ಲದಿದ್ದರೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿಲ್ಲ. ಯಾಕಿಷ್ಟು ನಿರ್ಬಂಧ ಎಂದು ಕೆಲವರು ಕೇಳಬಹುದು. ಚುನಾವಣೆಗಳು ಮುಕ್ತವಾಗಿ
ಯಾವುದೇ ಪ್ರಲೋಭನೆಗಳು ಮತ್ತು ಆಮಿಷಗಳಿಗೆ ಮತದಾರ ಒಳಗಾಗಬಾರದು ಎಂದು ಚುನಾವಣಾ ಆಯೋಗ ಹಾಲಿ ಇರುವ ಕಾನೂನುಗಳನ್ನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದೆ. ಈ ಅವಕಾಶವನ್ನು ಎಲ್ಲ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅರಿತುಕೊಂಡು ಅನುಸರಿಸಬೇಕು ಎಂದು ಹೇಳಿದರು.

ಮತದಾರರ ಸೇರ್ಪಡೆಗೆ ಅವಕಾಶ: ಯಾವುದೊ ಕಾರಣಕ್ಕೆ ಈಗಾಗಲೇ ಪ್ರಕಟವಾಗಿರುವ ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋಗಿದ್ದರೆ ಅಥವಾ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಬೇಕಿದ್ದರೆ ಸ್ಥಳೀಯ ಬಿಎಲ್‌ಒಗಳನ್ನು ನೇರವಾಗಿ ಸಂಪರ್ಕಿಸಿ ಸೂಕ್ತ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.

ಆನ್‌ಲೈನ್‌ನಲ್ಲಿಯೂ ವಿಎಚ್‌ಎ, ಗರುಡಾ ಆ್ಯ‍ಪ್‌ಗಳ ಮೂಲಕವೂ ಫಾರಂ ನಂ 6 ಸಲ್ಲಿಸಿ ಮತದಾರರ ಪಟ್ಟಿ ಸೇರ್ಪಡೆ ಆಗಲು ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಾದ ಎಂ. ಹನುಮಂತಪ್ಪ, ಮಾಧುಸ್ವಾಮಿ, ಶಾಹಿದ್ ಅಬ್ಬಾಸ್, ಎಲ್.ಮಧುಸೂದನ್, ಸಿಪಿಎಂ ಪಕ್ಷದ ಪ್ರತಿನಿಧಿ ಬಿ.ಎನ್. ಮುನಿಕೃಷ್ಣಪ್ಪ, ಜೆಡಿಎಸ್ ಪಕ್ಷದ ಪ್ರತಿನಿಧಿ ನಾರಾಯಣಸ್ವಾಮಿ, ಬಿಜೆಪಿ ಪ್ರತಿನಿಧಿ ಲಕ್ಷ್ಮಿನಾರಾಯಣ ಗುಪ್ತ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಖಾಸಗಿ ಸ್ಥಳದಲ್ಲೂ ಪರವಾನಗಿ ಕಡ್ಡಾಯ

ಸಾರ್ವಜನಿಕರಿಗೆ ಕಾಣುವ ರೀತಿ ಖಾಸಗಿ ವ್ಯಕ್ತಿಗಳ ಕಟ್ಟಡಗಳು, ಕಚೇರಿಗಳು, ಅಂಗಡಿ ಮಳಿಗೆಗಳು, ಇತರ ಕಟ್ಟಡಗಳ ಮೇಲೆ ಕೂಡ ಪ್ರಚಾರ ಸಾಮಗ್ರಿಗಳನ್ನು ಪರವಾನಗಿ ಪಡೆಯದೆ ಅಳವಡಿಸುವಂತಿಲ್ಲ. ಖಾಸಗಿ ಕಟ್ಟಡಗಳ ಮೇಲೆ ಹಾಗೂ ಹೊರಗೋಡೆಗಳ ಮೇಲೆ ಪ್ರಚಾರ ಸಾಮಗ್ರಿಗಳನ್ನು ಅಳವಡಿಸಲು ಸಕ್ಷಮ ಪ್ರಾಧಿಕಾರಿಯ ಅನುಮತಿಯ ಜೊತೆಗೆ ಕಟ್ಟಡ ಮಾಲೀಕರ ಅನುಮತಿಯು ಅಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಕ್ರಮ ಕಂಡುಬಂದರೆ 1950ಕ್ಕೆ ಕರೆ ಮಾಡಿ

₹50 ಸಾವಿರಕ್ಕಿಂತ ಹೆಚ್ಚು ನಗದನ್ನು ಸೂಕ್ತ ದಾಖಲೆ ಇಲ್ಲದೆ ಸಾಗಾಟ ಮಾಡುವುದು, ಇಟ್ಟುಕೊಳ್ಳುವುದು ಅಕ್ರಮವಾಗುತ್ತದೆ. ಸೂಕ್ತ ದಾಖಲೆ ಇಲ್ಲದೆ ಉಡುಗೊರೆ, ವಸ್ತುಗಳು, ಮದ್ಯ ಮತ್ತು ಇನ್ನಿತರ ಸರಕುಗಳನ್ನು ಸಾಗಿಸುವುದು, ವಿತರಿಸುವುದು ಅಥವಾ ದಾಸ್ತಾನು ಮಾಡುವುದು ಅಕ್ರಮವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್ ತಿಳಿಸಿದರು.

ಈ ರೀತಿಯ ಅಕ್ರಮಗಳು ಚುನಾವಣಾ ಪೂರ್ವ ಸಮಯದಲ್ಲಿ ನಡೆಯುತ್ತಿರುವುದು ಗಮನಕ್ಕೆ ಕಂಡು ಬಂದರೆ ಪೊಲೀಸ್ ಕಂಟ್ರೋಲ್ ದೂರವಾಣಿ ಸಂಖ್ಯೆ ಅಥವಾ ಸಹಾಯವಾಣಿ 1950ಕ್ಕೆ ದೂರುನೀಡಬಹುದು. ವಾಣಿಜ್ಯ ತೆರಿಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ನೇರವಾಗಿ ದೂರುಕೊಡಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT