ಆ.16ಕ್ಕೆ ಅಂಗನವಾಡಿ ಬಂದ್, ಪ್ರತಿಭಟನೆ

7
ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳಿ ಆಗ್ರಹ

ಆ.16ಕ್ಕೆ ಅಂಗನವಾಡಿ ಬಂದ್, ಪ್ರತಿಭಟನೆ

Published:
Updated:

ಚಿಕ್ಕಬಳ್ಳಾಪುರ: ‘ಮಾತೃಪೂರ್ಣ ಯೋಜನೆ ಮಾರ್ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.16 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್‌ ಮಾಡಿ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ಸುಂದರ್ ರಾಜ್ ಹೇಳಿದರು.

ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 1,961 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ ಸುಮಾರು 400ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಜತೆಗೆ ಬಹುತೇಕ ಅಂಗನವಾಡಿಗಳಲ್ಲಿ ಮೂಲಸೌಕರ್ಯಗಳ ಕೊರತೆ ವಿಪರೀತವಾಗಿದೆ’ ಎಂದು ತಿಳಿಸಿದರು.

‘ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಶೇ.75 ರಷ್ಟು ವಿಫಲವಾಗಿದೆ. ಯೋಜನೆ ಹೆಸರಿನಲ್ಲಿ ಅಧಿಕಾರಿಗಳು ಲೂಟಿ ಹೊಡೆಯುತ್ತಿರುವುದು ಬಿಟ್ಟರೆ ಫಲಾನುಭವಿಗಳಿಗೆ ಲಾಭವಾಗುತ್ತಿಲ್ಲ. ಕೇವಲ ಚುನಾವಣೆ ಗಿಮಿಕ್‌ಗಾಗಿ ರೂಪಿಸಿದ ಈ ಯೋಜನೆಯನ್ನು ಬದಲಾಯಿಸಿ, ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಅನೇಕ ದಶಕಗಳಿಂದ ಅಲ್ಪ ವೇತನಕ್ಕೆ ದುಡಿದು ನಿವೃತ್ತರಾಗುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪಿಂಚಣಿ ಮತ್ತು ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಅಂಗನವಾಡಿ ಕೇಂದ್ರಗಳ ಬಲವರ್ಧನೆಗಾಗಿ ನ್ಯಾಯಾಮೂರ್ತಿ ಎನ್,ಕೆ.ಪಾಟೀಲ್ ನೇತೃತ್ವದ ಉನ್ನತ ಸಮಿತಿ ನೀಡಿದ ವರದಿಯ ಶಿಫಾರಸುಗಳನ್ನು ಅನುಷ್ಟಾನಕ್ಕೆ ತರಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಸಮಗ್ರ ಬಾಲವಿಕಾಸ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಸರ್ಕಾರದ ಅವೈಜ್ಞಾನಿಕ ತಿರ್ಮಾನಗಳಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ತೊಂದರೆ ಅನುಭವಿಸುವಂತಾಗಿದೆ. ಅನೇಕ ಬಾರಿ ಹೋರಾಟ, ಧರಣಿಗಳನ್ನು ನಡೆಸಿ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಆ.16 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಲಿಯ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ನಾಗರತ್ನಮ್ಮ ಮಾತನಾಡಿ, ‘ಬಾಲವಿಕಾಸ ಸಮಿತಿ ಪುನರ್ ರಚಿಸಬೇಕು. ಅಂಗನವಾಡಿ ಕೇಂದ್ರಗಳ ಕೆಲಸದ ವೇಳೆಯನ್ನು ಹಿಂದೆ ಇದ್ದಂತೆ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30ರ ವರೆಗೆ ಮರು ನಿಗದಿಪಡಿಸಬೇಕು. ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡುವ ಜತೆಗೆ ಅಂಗನವಾಡಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಲಿಯ ಪದಾಧಿಕಾರಿಗಳಾದ ಪಿ.ಎಸ್.ಗಾಯಿತ್ರಿದೇವಿ, ಇಬ್ರತ್ ಉನ್ನೀಸ್, ತಿಮ್ಮಕ್ಕ, ಕಸ್ತೂರಿ ಲಕ್ಷ್ಮೀ, ಲಲೀತಮ್ಮ, ಲಕ್ಷ್ಮಿದೇವಿ, ವೆಂಕಟಲಕ್ಷ್ಮಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !