ಆಟೊ ಚಾಲಕರ ಕೈಸೇರದ ಸಹಾಯಧನ

ಚಿಂತಾಮಣಿ: ಲಾಕ್‌ಡೌನ್‌ನಿಂದಾಗಿ ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಧನ ಪಡೆಯುವುದು ಚಾಲಕರಿಗೆ ಗಗನ ಕುಸುಮವಾಗಿದೆ.
ಸಹಾಯಧನ ಘೋಷಣೆಯಾಗಿ ಮೂರು ತಿಂಗಳು ಕಳೆದರೂ, ತಾಲ್ಲೂಕಿನಲ್ಲಿ ಕೇವಲ 50ರಿಂದ 60 ಜನರಿಗಷ್ಟೇ ₹ 5,000 ಜಮೆಯಾಗಿದೆ.
ಸೇವಾಸಿಂಧು ಪೊರ್ಟಲ್‌ನಲ್ಲಿ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪೂರೈಸಲಾಗದೆ, ದಾಖಲೆಗಳನ್ನು ಹೊಂದಿಸಲು ಸಾಧ್ಯವಾಗದೆ ಅನೇಕರು ಅರ್ಜಿ ಸಲ್ಲಿಸುವ ಗೋಜಿಗೆ ಹೋಗಿಲ್ಲ. ತಾಲ್ಲೂಕಿನಲ್ಲಿ ಸಾವಿರ ಆಟೊ ಚಾಲಕರಿದ್ದು, ಕೇವಲ 600 ಜನರಷ್ಟೇ ಅರ್ಜಿ ಸಲ್ಲಿಸಿದ್ದಾರೆ. ಅವರಿಗೂ ಹಣ ಸಂದಾಯವಾಗಿಲ್ಲ.
ನಗರ ಮಾತ್ರವಲ್ಲದೆ, ಕೈವಾರ, ಮುರುಗಮಲ್ಲ, ಬಟ್ಲಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಟೊಗಳಿವೆ. ಮುಖ್ಯ ರಸ್ತೆಗಳಿಂದ ಗ್ರಾಮಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಬಹುತೇಕ ಊರುಗಳ ಕ್ರಾಸ್‌ಗಳಲ್ಲಿ ಆಟೊಗಳಿವೆ. ಆದರೆ ಅವರ ಬಳಿ ಬ್ಯಾಡ್ಜ್, ಆರ್.ಸಿ ಕಾರ್ಡ್ ಸೇರಿದಂತೆ ಮತ್ತಿತರ ಅಗತ್ಯ ದಾಖಲೆಗಳಿಲ್ಲ. ದಾಖಲೆಗಳನ್ನು ಹೊಂದಿಸಲು ಕಷ್ಟವಾದ ಕಾರಣ ಅನೇಕರು ಅರ್ಜಿ ಸಲ್ಲಿಸಲಿಲ್ಲ. ಅರ್ಜಿ ಹಾಕಿದವರಿಗೂ ಇನ್ನೂ ಹಣ ಬಂದಿಲ್ಲ ಎಂದು ಆಟೊ ಚಾಲಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಆಟೊಗಳಿಗೆ ಪ್ರಯಾಣಿಕರಿಲ್ಲದೆ ಆದಾಯವೂ ಇಲ್ಲವಾಗಿದೆ. ಸಾಲ ಮಾಡಿ ಆಟೊ ಖರೀದಿಸಿದವರು ಸಾಲದ ಕಂತು ಕಟ್ಟಲಾಗದೆ ಪರಿತಪಿಸುತ್ತಿದ್ದಾರೆ. ನಿತ್ಯ ಪೆಟ್ರೊಲ್, ಡೀಸೆಲ್ ದರ ಏರಿಕೆಯಾಗುತ್ತಿದೆ. ಲಾಕ್‌ಡೌನ್ ಮುಗಿದಿದ್ದರೂ, ಕೊರೊನಾ ಸೋಂಕಿನ ಭೀತಿಯಿಂದ ಜನರು ಅಟೊಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಪರಿಹಾರ ಧನವೂ ಸಿಗದೆ ಪರದಾಡುವಂತಾಗಿದೆ ಎನ್ನುವುದು ಆಟೊ ಚಾಲಕರ ಅಳಲು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.