ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ: ಚರಂಡಿಯಲ್ಲಿ ತುಂಬಿದ ತ್ಯಾಜ್ಯ, ಸಾಂಕ್ರಾಮಿಕ ರೋಗ ಹರಡುವ ಭೀತಿ

Published 2 ಜುಲೈ 2024, 5:22 IST
Last Updated 2 ಜುಲೈ 2024, 5:22 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಕಲುಷಿತ ನೀರು, ಕಸ, ತ್ಯಾಜ್ಯದಿಂದ ಹಲವು ರೀತಿಯ ಸಾಂಕ್ರಾಮಿಕ ರೋಗ ಹರಡುತ್ತಿದೆ. ಇದರಿಂದ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುನ್ನೆಚ್ಚರಿಕೆ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಇದೆ. ತಾಲ್ಲೂಕಿನಲ್ಲಿ 16 ಗ್ರಾಮ ಪಂಚಾಯಿತಿ ಇವೆ. ಬಹುತೇಕ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ಪಟ್ಟಣದ ಮುಖ್ಯರಸ್ತೆ, ಗೂಳೂರು ರಸ್ತೆ, ಆವುಲಮಂದೆ, ಕೊತ್ತಪಲ್ಲಿ, ಸಂತೆ ಮೈದಾನ, ಸ್ಮಶಾನ ರಸ್ತೆ, ಕುಂಬಾರಪೇಟೆ ರಸ್ತೆ ಸೇರಿದಂತೆ ಡಾ.ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ ನಗರದ ಚರಂಡಿಗಳಲ್ಲಿ ಹೂಳು, ತ್ಯಾಜ್ಯ ತುಂಬಿದೆ.

ಕೊಳೆತ ತ್ಯಾಜ್ಯವನ್ನು ಬೀದಿ ನಾಯಿಗಳು, ಹಂದಿಗಳು ಹರಡುತ್ತಿವೆ. ಇದರಿಂದ ಸಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಮಾಡಲು ಹೇಳಿಕೆಗೆ ಸೀಮಿತ ಆಗಿದೆ. ಪ್ಲಾಸ್ಟಿಕ್ ಕವರ್, ಲೋಟ, ತಟ್ಟೆ ಹೆಚ್ಚಾಗಿ ಬಳಕೆ ಆಗುತ್ತಿದ್ದು ತ್ಯಾಜ್ಯ ಸೃಷ್ಟಿಯಾಗಿದೆ. ಬಹುತೇಕ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಚರಂಡಿಗಳಲ್ಲಿ ತ್ಯಾಜ್ಯ, ಹೂಳು ತುಂಬಿದೆ. ಸೂಕ್ತ ನಿರ್ವಹಣೆ ಇಲ್ಲ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ರೋಗ ಹೆಚ್ಚಾಗುತ್ತಿದೆ.

ತಾಲ್ಲೂಕಿನಲ್ಲಿ ಇದುವರೆಗೂ 15 ಡೆಂಗಿ ಪ್ರಕರಣ ದಾಖಲಾಗಿದೆ. ಪ್ರತಿನಿತ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ 600 ರಿಂದ 700 ಮಂದಿ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 20ರಿಂದ 40ಮಂದಿ ಒಳರೋಗಿಗಳು ಆಗಿದ್ದಾರೆ.

'ಪುರಸಭೆ ಹಾಗೂ ಪಂಚಾಯಿತಿ ಅನುದಾನದಲ್ಲಿ ಸ್ವಚ್ಛತೆಗೆ ಲಕ್ಷಾಂತರ ರೂಪಾಯಿ ಅನುದಾನ ಸಮರ್ಪಕವಾಗಿ ಬಳಕೆ ಆಗಿಲ್ಲ. ಆದರೆ, ಬಹುತೇಕ ಗ್ರಾಮಗಳಲ್ಲಿ ಕಸ, ತ್ಯಾಜ್ಯ, ಹೂಳು, ಪ್ಲಾಸ್ಟಿಕ್ ರಾಶಿಗಟ್ಟಲೇ ಸಂಗ್ರಹ ಆಗಿದೆ. ಸ್ವಚ್ಛತೆಗಾಗಿ ಮೀಸಲಿರಿಸಿರುವ ಹಣ ಸದ್ಭಳಕೆ ಆಗಿಲ್ಲ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಯ್ಯ ತಿಳಿಸಿದರು.

ಸೊಳ್ಳೆ ಕಡಿತದಿಂದ ಉರಿ ಹೆಚ್ಚಾಗಿದೆ. ಪುರಸಭೆ ಅಧಿಕಾರಿಗಳು ಸ್ವಚ್ಛತೆ, ಸೊಳ್ಳೆ ನಾಶಕ್ಕೆ ಫಾಗಿಂಗ್ ಮಾಡಿಸಬೇಕು ಎಂದು ಪಟ್ಟಣದ ಹಿರಿಯ ನಾಗರಿಕ ಎ.ಶಿವಪ್ಪ ಒತ್ತಾಯಿಸಿದರು.

ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರು ಪರದೆ, ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಗ್ರಾಮ ಪಂಚಾಯಿತಿ, ಪುರಸಭೆ ಸ್ವಚ್ಛತೆ ಮಾಡಿಸಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ತಿಳಿಸಿದರು.

ಕಸ, ತ್ಯಾಜ್ಯ ಹಾಕಿದರೆ ದಂಡ ವಿಧಿಸಲಾಗುವುದು. ಸೊಳ್ಳೆಗಳ ನಾಶಕ್ಕೆ ಕೂಡಲೇ ಫಾಗಿಂಗ್ ಮಾಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಡೆಂಗಿ, ಸಂಕ್ರಾಮಿಕ ರೋಗ ಹರಡದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಸದ ರಾಶಿ 
ಕಸದ ರಾಶಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT