ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ: 26 ಅಂಗನವಾಡಿ ಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ

Published 11 ಜುಲೈ 2024, 5:34 IST
Last Updated 11 ಜುಲೈ 2024, 5:34 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕೂರಲು ಜಾಗ ಕೊರತೆ, ಶುದ್ಧವಾದ ನೀರು, ಆಟದ ಮೈದಾನ, ಸ್ವಂತ ಕಟ್ಟಡ ಇಲ್ಲ. ಕುರ್ಚಿಗಳು ಇಲ್ಲದೇ ನೆಲದ ಮೇಲೆ ಕೂರುವ ಮಕ್ಕಳು, ತಡೆಗೋಡೆ ಇಲ್ಲದೇ ಸುರಕ್ಷತೆ ಮರೀಚಿಕೆ.... ಹೀಗೆ ಇಲ್ಲಗಳ ನಡುವೆ, ಬಹುತೇಕವಾಗಿ ಪಟ್ಟಣದ 23 ವಾರ್ಡ್‍ಗಳ ಪೈಕಿ 26 ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.

ಪಟ್ಟಣದಲ್ಲಿ 30ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ಲೇ ಹೋಂಗಳು ಇವೆ. ಈ ನಡುವೆಯು ಪೂರ್ವಪ್ರಾಥಮಿಕ ಶಿಕ್ಷಣ ನೀಡುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪ್ರತಿ ತಿಂಗಳ ಅಂಗನವಾಡಿ ಕೇಂದ್ರಗಳ ಬಾಡಿಗೆಗೆ ಲಕ್ಷಾಂತರ ರೂಪಾಯಿ ನೀಡುತ್ತಿರುವುದರಿಂದ ಇಲಾಖೆಗೆ ಆರ್ಥಿಕ ಹೊರೆ ಹೆಚ್ಚಾಗಿದೆ.

ಪಟ್ಟಣದ ವಾರ್ಡ್‍ಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ನಿರ್ಮಿಸಲು ನಿವೇಶನ ನೀಡುವಂತೆ ತಾಲ್ಲೂಕು ಶಿಶು ಕಲ್ಯಾಣಾಧಿಕಾರಿ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಪುರಸಭೆಯಿಂದ ಒಂದು ವಾರ್ಡ್‍ನಲ್ಲಿಯೂ ನಿವೇಶನ ನೀಡಿಲ್ಲ. ಇದರಿಂದ ಅಂಗನವಾಡಿ ಕೇಂದ್ರಗಳನ್ನು ಖಾಸಗಿಯವರ ಮನೆಗಳಲ್ಲಿ ನಡೆಸುವಂತಾಗಿದೆ.

ಪಟ್ಟಣದ 1ನೇ, 4ನೇ ಹಾಗೂ 13ನೇ ವಾರ್ಡ್‍ಗಳ ವ್ಯಾಪ್ತಿ ಹೆಚ್ಚಾಗಿರುವುದರಿಂದ 2 ಅಂಗನವಾಡಿ ಕೇಂದ್ರ ಮಾಡಲಾಗಿದೆ. ಬಾಡಿಗೆ ಮನೆ, ಗುಡಿ, ಶೆಡ್‌ಗಳೇ ಮಕ್ಕಳಿಗೆ ಕೇಂದ್ರಗಳಾಗಿವೆ. 26 ಕೇಂದ್ರಗಳಲ್ಲಿ 6 ತಿಂಗಳಿನಿಂದ 3 ವರ್ಷದೊಳಗಿನ 880 ಮಕ್ಕಳು ಇದ್ದಾರೆ. 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳು 302 ಮಕ್ಕಳು ಇದ್ದಾರೆ. ಗರ್ಭಿಣಿಯರು 142, ಬಾಣಂತಿಯರು 102 ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರು 48 ಮಂದಿ ಇದ್ದಾರೆ.

ಪಟ್ಟಣದ ಪುರಸಭೆ ವ್ಯಾಪ್ತಿಗೆ ಸಿವಿಲ್ ನ್ಯಾಯಾಲಯದಿಂದ ನ್ಯಾಷನಲ್ ಕಾಲೇಜಿನವರೆಗೆ ಹಾಗೂ ರಾಮಸ್ವಾಮಿಪಲ್ಲಿಯಿಂದ ಕೊತ್ತಪಲ್ಲಿ ಗ್ರಾಮದವರೆಗೆ ಹರಡಿದೆ. ವಾಲ್ಮೀಕಿ ನಗರದ 1, 2, 3ನೇ ವಾರ್ಡ್‍ಗಳಲ್ಲಿ ಗೂಳೂರು ರಸ್ತೆ, ಕೊತ್ತಪಲ್ಲಿ ರಸ್ತೆ, ಅಂಬೇಡ್ಕರ್ ನಗರ, ಕುಂಬಾರಪೇಟೆ, ಆವುಲ ಮಂದೆ ರಸ್ತೆ ಸೇರಿದಂತೆ ಬಹುತೇಕ ವಾರ್ಡ್‍ಗಳಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಾಸವಾಗಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳ ಪೈಕಿ, ಸ್ವಂತ ಕಟ್ಟಡ, ಗಾಳಿ ಬೆಳಕು, ಸುಂದರ ವಾತಾವರಣ, ಆಟದ ಮೈದಾನ, ಪ್ರತ್ಯೇಕವಾದ ಶೌಚಾಲಯ, ತಡೆಗೋಡೆ, ಶುದ್ಧ ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯ ಇರಬೇಕು. ಆದರೆ ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಇಲ್ಲದೇ, ಖಾಸಗಿಯವರ ಮನೆಗಳಲ್ಲಿನ ಕೂರಿಸಲಾಗಿದೆ. ಓಡಾಡಲು ಸ್ಥಳ ಅವಕಾಶ ಇಲ್ಲ. ಆಟ ಆಡಲು ಮೈದಾನ ಇಲ್ಲ. ತಡೆಗೋಡೆ ಇಲ್ಲದೇ ಸುರಕ್ಷತೆ ಇಲ್ಲ.

ಶ್ರೀಮಂತರ, ಅಧಿಕಾರಿಗಳ, ಜನಪ್ರತಿನಿಧಿಗಳ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಇದ್ದರೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದರು. ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳು ಆಕರ್ಷಣೀಯವಾಗಿ ಕೈ ಬೀಸಿ ಕರೆಯುತ್ತಿವೆ. ಆದರೆ ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ, ಸೌಲಭ್ಯ ಇಲ್ಲವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ನೀಡಿ ಸ್ವಂತ ಕಟ್ಟಡ ಮಾಡಿಸಬೇಕು ಎಂದು ಅಂಗನವಾಡಿ ಕೇಂದ್ರದ ಪೋಷಕಿ ರಾಧ ತಿಳಿಸಿದರು.

ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ವಿತರಿಸುವಂತೆ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಇದುವರೆಗೂ ನಿವೇಶನ ಕಲ್ಪಿಸಿಲ್ಲ. ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ ತಿಳಿಸಿದರು.

ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಖಾಸಗಿ ಮನೆಗಳಲ್ಲಿ ಮಾಡಲಾಗಿದೆ. ಅಗತ್ಯ ಸೌಲಭ್ಯಗಳು ಇದೆ. ಆದರೆ ಸ್ವಂತ ಕಟ್ಟಡಗಳು ಇಲ್ಲ. ನಿವೇಶನಗಳು ಕಲ್ಪಿಸದೇ ಇರುವುದರಿಂದ, ಸ್ವಂತ ಕಟ್ಟಡಗಳನ್ನು ನಿರ್ಮಿಸಿಲ್ಲ. ಕೂಡಲೇ ಪುರಸಭೆ ಅಧಿಕಾರಿಗಳು, ಆಡಳಿತ ಮಂಡಲಿಯವರು ನಿವೇಶನಗಳನ್ನು ಕಲ್ಪಿಸಿಕೊಡಬೇಕು ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ, ತಾಲ್ಲೂಕು ಅಧ್ಯಕ್ಷೆ ರತ್ನಮ್ಮ ಒತ್ತಾಯಿಸಿದರು.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕುರ್ಚಿ ಇಲ್ಲದೇ ನೆಲದ ಮೇಲೆ ಕುಳಿತಿರುವುದು
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕುರ್ಚಿ ಇಲ್ಲದೇ ನೆಲದ ಮೇಲೆ ಕುಳಿತಿರುವುದು
ಈ ಹಿಂದೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಇದೀಗ ಯಾವುದೇ ಪತ್ರ ಬಂದಿಲ್ಲ. ಹಿಂದೆ ಬಂದ ಪತ್ರ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು
ಶ್ರೀನಿವಾಸ್ ಪುರಸಭಾ ಮುಖ್ಯಾಧಿಕಾರಿ

ಹಲವು ಬಾರಿ ಪತ್ರ

ಪಟ್ಟಣದ ಅಂಗನವಾಡಿ ಕೇಂದ್ರಗಳನ್ನು ಖಾಸಗಿಯವರ ಮನೆಯಲ್ಲಿ ಮಾಡಲಾಗಿದೆ. ಪ್ರತಿ ತಿಂಗಳು ಮನೆಗಳ ಬಾಡಿಗೆಗೆ ₹1 ಲಕ್ಷ ನೀಡಬೇಕಿದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಿಂದ 3 ಪತ್ರಗಳನ್ನು ಪುರಸಭಾ ಮುಖ್ಯಾಧಿಕಾರಿಗೆ ಪಟ್ಟಣದ 23 ವಾರ್ಡ್‍ಗಳ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸಿಕೊಡಿ ಎಂದು ಪತ್ರ ಬರೆಯಲಾಗಿದೆ. ಇದುವರೆಗೂ ನಿವೇಶನ ಕಲ್ಪಿಸಿಲ್ಲ. ನಿವೇಶನ ನೀಡಿದರೆ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT