ಮಂಗಳವಾರ, ಆಗಸ್ಟ್ 16, 2022
29 °C
ಸುಗಮ ಸಂಚಾರಕ್ಕೆ ತೀವ್ರ ತೊಂದರೆ: ಸಾರ್ವಜನಿಕರ ಅಸಮಾಧಾನ

ಪಾದಚಾರಿ ರಸ್ತೆಯಲ್ಲಿ ಬಸ್‌ ನಿಲುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಿಲ್ದಾಣದ ಮುಖ್ಯದ್ವಾರ ಹಾಗೂ ಪಾದಚಾರಿ ರಸ್ತೆಯಲ್ಲಿಯೇ ಬಸ್‌ಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಮುಖ್ಯರಸ್ತೆಯು ಸಿವಿಲ್ ನ್ಯಾಯಾಲಯದಿಂದ ನ್ಯಾಷನಲ್ ಕಾಲೇಜ್‌ವರೆಗೂ ಇದೆ. ಮುಖ್ಯರಸ್ತೆಗೆ ಹೊಂದಿಕೊಂಡಂತೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಇದೆ.

ನಿಲ್ದಾಣದ ಮುಂದೆ ಪಾದಚಾರಿ ರಸ್ತೆ ಇದೆ. ಇದೇ ರಸ್ತೆಯಲ್ಲಿ ಆಟೊಗಳ ನಿಲ್ದಾಣ ಇದೆ. ಆಟೊಗಳ ಪಕ್ಕದಲ್ಲಿಯೇ ಬಸ್‌ಗಳನ್ನು ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುತ್ತಿರುವುದರಿಂದ ಪಾದಚಾರಿಗಳು ನಡುರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.

ಪ್ರಯಾಣಿಕರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಪಟ್ಟಣದ ಸಾರಿಗೆ ಬಸ್‌ನಿಲ್ದಾಣ ಸಾಕಷ್ಟು ವಿಶಾಲವಾಗಿದೆ. ಪುಟ್ಟಪರ್ತಿ, ಗೋರಂಟ್ಲ, ಧರ್ಮಾವರಂ, ಚಿಕ್ಕಬಳ್ಳಾಪುರ, ಬೆಂಗಳೂರು, ಗೌರಿಬಿದನೂರು, ಚಿಂತಾಮಣಿ, ಚೇಳೂರು, ಚಾಕವೇಲುಗಳಿಗೆ ಸಂಚರಿಸುವ ಬಸ್‌ಗಳಿಗೆ ಪ್ರತ್ಯೇಕ ಫ್ಲಾಟ್ ಫಾರಂ ಮಾಡಲಾಗಿದೆ.

ಕೆಲವು ಸಾರಿಗೆ ಬಸ್‌ಗಳ ಚಾಲಕರು, ನಿರ್ವಾಹಕರು ನಿಲ್ದಾಣದ ಫ್ಲಾಟ್ ಫಾರಂಗಳಲ್ಲಿ ನಿಲ್ಲಿಸದೆ ಪಾದಚಾರಿಗಳ ರಸ್ತೆಯಲ್ಲಿ ಬಸ್ ನಿಲ್ಲಿಸುತ್ತಿದ್ದಾರೆ. ಸಾರಿಗೆ ಸಂಚಾರ ನಿಯಂತ್ರಕರು ಸಹ ಬಸ್‌ಗಳನ್ನು ಸಮರ್ಪಕವಾಗಿ ಫ್ಲಾಟ್ ಫಾರಂಗಳಲ್ಲಿ ನಿಲ್ಲಿಸಲು ಸೂಚಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಸಾರಿಗೆ ಬಸ್‌ನಿಲ್ದಾಣದಿಂದ 100 ಮೀಟರ್ ವರೆಗೆ ಖಾಸಗಿ ವಾಹನಗಳಿಗೆ ಪ್ರವೇಶ ಇಲ್ಲ ಎಂಬ ಆದೇಶ ಇದೆ. ಆದರೆ, ಸಾರಿಗೆ ವಾಹನಗಳ ಜೊತೆಗೆ ಖಾಸಗಿ ಬಸ್‌, ಆಟೊ, ಕಾರು‌ಗಳನ್ನೂ ಪಾದಚಾರಿ ರಸ್ತೆಯಲ್ಲಿ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂಬುದು ಪ್ರಯಾಣಿಕರ
ಆರೋಪ.

‘ಸಾರಿಗೆ ಬಸ್‌ನಿಲ್ದಾಣದಲ್ಲಿ ಸಾಕಷ್ಟು ಜಾಗ ಇದೆ. ಖಾಸಗಿ ಬಸ್‌ಗಳು ರಸ್ತೆಯಲ್ಲಿ ನಿಲ್ಲಿಸುತ್ತಿರುವುದರಿಂದ ಸಾರಿಗೆಯ ಬಸ್‌ಗಳನ್ನು ಪಾದಚಾರಿ ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಖಾಸಗಿ ವಾಹನಗಳಿಗೆ ಪ್ರತ್ಯೇಕ ನಿಲ್ದಾಣದ ಅವಶ್ಯಕತೆ ಇದೆ. ಸರ್ಕಾರಿ ಬಸ್‌ಗಳನ್ನು ನಿಲ್ದಾಣದ ಫ್ಲಾಟ್ ಫಾರಂಗಳಲ್ಲಿ ನಿಲ್ಲಿಸಬೇಕು. ಈ ಸಂಬಂಧ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಬೇಕು’ ಎಂಬುದು ಪಟ್ಟಣದ ನಿವಾಸಿ ಶ್ರೀನಿವಾಸ್ ಅವರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.