ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತೃಭೋಜನ’ ಸಂಭ್ರಮ

Last Updated 6 ಡಿಸೆಂಬರ್ 2022, 5:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಮುಖದಲ್ಲಿ ಸಂಭ್ರಮವಿತ್ತು, ಧನ್ಯತೆ ಇತ್ತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು, ಗಣ್ಯರು ಮತ್ತು ಮಕ್ಕಳ ಜತೆ ಕುಳಿತು ಸಹಪಂಕ್ತಿ ಭೋಜನ ಮಾಡುತ್ತಿದ್ದರೆ ಮಕ್ಕಳ ಕಣ್ಣಲ್ಲಿ ಹೊಳಪಿತ್ತು.

ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ನಗರದ ಹೊರವಲಯದ ಅಗಲಗುರ್ಕಿ ಬಿಜಿಎಸ್‌ ಆಂಗ್ಲ ಶಾಲೆಯ ಆವರಣ. ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಮಾತೃ ಭೋಜನ’ ಕಾರ್ಯಕ್ರಮದಲ್ಲಿ ಜಾತಿ, ಭೇದ ಮರೆತು ವಿದ್ಯಾರ್ಥಿಗಳು ತಾಯಂದಿರ ಕೈ ತುತ್ತು ಸವಿದು ಸಂಭ್ರಮಿಸಿದರು.

ಮಕ್ಕಳಿಗಾಗಿ ಪೋಷಕರು ತರಕಾರಿ ಪಲಾವ್, ಕೇಸರಿ ಬಾತ್, ಉಪ್ಪಿಟ್ಟು, ಚಿತ್ರಾನ್ನ, ಮೊಸರನ್ನ, ಅನ್ನ ಸಾಂಬಾರ್ ಸೇರಿದಂತೆ ವಿವಿಧ ಬಗೆಯ ಅಡುಗೆ ಸಿದ್ಧಪಡಿಸಿಕೊಂಡು ಬಂದಿದ್ದರು. ಇವರು ನಮ್ಮ ಮಕ್ಕಳು, ನಮ್ಮ ಮನೆಯ ಊಟ ಬಡಿಸಬೇಕು ಎನ್ನುವ ಯಾವ ಭಾವನೆಗಳು ಇಲ್ಲದೆ ಊಟಕ್ಕೆ ಕುಳಿತ ಎಲ್ಲ ಮಕ್ಕಳಿಗೂ ಪೋಷಕರು ತಾವು ತಯಾರಿಸಿದ ಆಹಾರ ಬಡಿಸಿದರು.

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಿತ್ತಾಟವಿದೆ. ಇಂತಹದ್ದರ ನಡುವೆ ಇಲ್ಲಿ ಮಕ್ಕಳಿಗೆ ಊಟ ಬಡಿಸುವಾಗ ಯಾರೂ ಸಹ ಜಾತಿ, ಧರ್ಮವನ್ನು ಕೇಳಲಿಲ್ಲ. ಮಕ್ಕಳ ಮನಸ್ಸಿನಲ್ಲಿ ಜಾತಿ, ಧರ್ಮಗಳಿಗೆ ಹೊರತಾದ ಭಾವನೆಗಳು ಬೆಳೆಯಬೇಕು’ ಎಂದು ಹೇಳಿದರು.

ಬಿಜಿಎಸ್ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಮಾತನಾಡಿ, ‘ಪಾಠ ‍‍ಪ್ರವಚನಗಳು ಎಲ್ಲ ಶಾಲೆಗಳಲ್ಲಿಯೂ ಆಗುತ್ತದೆ. ಆದರೆ ಮಾತೃಭೋಜನದಂತಹ ಕಾರ್ಯಕ್ರಮಗಳು ಎಲ್ಲ ಶಾಲೆಗಳಲ್ಲಿ ನಡೆಯಬೇಕು. ಪಾಠ ಪ್ರವಚನಗಳಿಂದಲೇ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಮಾತಾ ಪಿತೃಗಳ ಬಗ್ಗೆ ಅಭಿಮಾನ ಮತ್ತು ಗೌರವದ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ’ ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ, ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT