ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಮುಖ್ಯರಸ್ತೆ ಸಂಪರ್ಕಕ್ಕೆ ಕಂಟಕವಾದ ಒಳಚರಂಡಿ ದುರಸ್ತಿ ಕಾಮಗಾರಿ, ಯುಜಿಡಿ ಸಮಸ್ಯೆ ಕಾರಣಕ್ಕೆ ನೆಮ್ಮದಿ ಕಸಿದ ಶೌಚಾಲಯಗಳು, ಅಧಿಕಾರಿಗಳ ಧೋರಣೆಗೆ ನಾಗರಿಕರ ತೀವ್ರ ಆಕ್ರೋಶ

ಅರೆಬರೆ ಕಾಮಗಾರಿ, ತಾಪತ್ರಯಗಳು ತರಹೇವಾರಿ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಅಗೆದು ಹಾಕಿದ ಕಾಂಕ್ರಿಟ್ ರಸ್ತೆ, ಹೂತು ಹೋದ ಚರಂಡಿ, ಸಂಚಾರಕ್ಕೆ ಅಡ್ಡಿಯಾದ ಮಣ್ಣಿನ ರಾಶಿ, ಉಕ್ಕಿ ಹರಿಯುವ ಮ್ಯಾನಹೋಲ್, ಕಟ್ಟಿಕೊಂಡ ಶೌಚಾಲಯ, ಉಸಿರಾಡಲು ಅವಕಾಶ ನೀಡದ ಗಬ್ಬು ನಾತ.. ಹೀಗೆ ಹೇಳುತ್ತ ಹೋದರೆ ಒಂದೆರಡಲ್ಲ ಹತ್ತಾರಿವೆ ನಗರದ ಜೈಭೀಮ್ ನಗರದ ಮುಖ್ಯರಸ್ತೆಯಲ್ಲಿ ಅರೆಬರೆಗೊಂಡ ಕಾಮಗಾರಿಯೊಂದು ಸೃಷ್ಟಿಸಿದ ಅವಾಂತರ.

ನಗರದ ಎಂ.ಜಿ.ರಸ್ತೆಯಿಂದ ಸಾಧುಮಠದ ರಸ್ತೆ ಸಂಪರ್ಕಿಸುವ ಈ ಒಳ ದಾರಿ 6 ಮತ್ತು 8ನೇ ವಾರ್ಡ್‌ಗಳ ಮಧ್ಯ ಹಂಚಿಕೊಂಡಿದೆ. ಗುಂಡಿಗಳಿಂದ ಹದಗೆಟ್ಟು ಹೋಗಿದ್ದ ಈ ರಸ್ತೆಯನ್ನು ಕೆಲ ತಿಂಗಳ ಹಿಂದಷ್ಟೇ ಕ್ರಾಂಕ್ರಿಟ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಸ್ಥಳೀಯರಲ್ಲಿ ಸಂತಸ ಉಂಟು ಮಾಡುವ ಬದಲು ತಿಂಗಳುಗಟ್ಟಲೇ ಸಂಕಟಕೆ ಕಾರಣವಾಗಿದೆ. ಅರೆಬರೆ ಕಾಮಗಾರಿ, ಅಪೂರ್ಣ ಕೆಲಸದಿಂದಾಗಿ ಜನರು ನಿತ್ಯ ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ರಸ್ತೆಗೆ ಕಾಂಕ್ರಿಟ್‌ ಹಾಕುವಾಗ ಆಂಜನೇಯಸ್ವಾಮಿ ದೇವಾಲಯದ ಬಳಿ ಸುಮಾರು 100 ಅಡಿಯಷ್ಟು ರಸ್ತೆಗೆ ಕಾಂಕ್ರಿಟ್‌ ಹಾಕದೆ ಬಿಡಲಾಗಿದೆ. ಇನೊಂದೆಡೆ ಇಡೀ ರಸ್ತೆಗೆ ಕಾಂಕ್ರಿಟ್‌ ಹಾಕಿದರೆ, ಒಂದೆಡೆ ಚರಂಡಿಯಿಂದ ಎರಡು ಬದಿಗಳಲ್ಲಿ ಜಾಗ ಬಿಟ್ಟು ಕಾಂಕ್ರಿಟ್‌ ಹಾಕಲಾಗಿದೆ.

ಈ ಬೇಕಾಬಿಟ್ಟಿಗೆ ಕಾಮಗಾರಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುವ ಹೊತ್ತಿನಲ್ಲಿಯೇ, ಕಾಮಗಾರಿ ವೇಳೆ ಹಾನಿಗೊಂಡ ಒಳಚರಂಡಿ ಮಾರ್ಗದ (ಯುಜಿಡಿ) ರಿಪೇರಿ ಕೆಲಸ ಜನರಿಗೆ ಕೊಡಬಾರದ ಕಷ್ಟ ಕೊಡುತ್ತಿದೆ.

ಯುಜಿಡಿ ಮಾರ್ಗ ಸರಿಪಡಿಸಲು ಹೊಸದಾಗಿ ಕ್ರಾಂಕ್ರಿಟ್ ಹಾಕಿದ ರಸ್ತೆಯಲ್ಲಿಯೇ ಸುಮಾರು ಒಂದು ತಿಂಗಳ ಹಿಂದೆ 12 ಅಡಿ ಆಳದ ಬೃಹತ್ ಗುಂಡಿ ತೋಡಲಾಗಿದೆ. ಅದರಿಂದಾಗಿ ಇಡೀ ರಸ್ತೆಯೇ ಬಂದ್‌ ಮಾಡಲಾಗಿದೆ. ಆದರೆ ಈವರೆಗೆ ಯುಜಿಡಿ ಮಾರ್ಗ ಸರಿಪಡಿಸಿ ರಸ್ತೆ ಸಂಚಾರಕ್ಕೆ ತೆರವುಗೊಳಿಸುವ ಕೆಲಸವಾಗಿಲ್ಲ. ರಿಪೇರಿಗೆಂದು ತೋಡಿದ ಗುಂಡಿಯಲ್ಲಿ ಇಡೀ ಬಡಾವಣೆಯ ಶೌಚಾಲಯಗಳ ತ್ಯಾಜ್ಯ ನೀರು ಮಡುಗಟ್ಟಿ ನಿಂತು ಜನರಿಗೆ ಚಿತ್ರಹಿಂಸೆ ನೀಡುತ್ತಿದೆ ಎನ್ನುವುದು ಸ್ಥಳೀಯರ ಜನರ ಗೋಳು.

ಕಾಮಗಾರಿ ವೇಳೆ ಮ್ಯಾನ್‌ಹೋಲ್‌ನಲ್ಲಿ ಕಾಂಕ್ರಿಟ್‌ ಬಿದ್ದಿದೆ. ಯುಜಿಡಿ ಪೈಪ್‌ನಲ್ಲಿ ಕಲ್ಲು ಸಿಕ್ಕಿಹಾಕಿಕೊಂಡಿದೆ ಎಂದು ರಿಪೇರಿಗೆ ಬಂದವರು ಹೇಳಿ ಹೋಗಿದ್ದಾರೆ. ತಿಂಗಳು ಕಳೆದರೂ ಈವರೆಗೆ ರಿಪೇರಿ ಕೆಲಸ ಮುಗಿಸಿಲ್ಲ. ಈ ಅರೆಬರೆ ಕೆಲಸದಿಂದಾಗಿ ಯುಜಿಡಿ ಮಾರ್ಗ ಹಾಳಾಗಿ, ಶೌಚಾಲಯಗಳು ಕಟ್ಟಿಕೊಂಡು ಗಬ್ಬೆದ್ದು ನಾರುತ್ತಿವೆ. ಕಲುಷಿತ ನೀರು, ದುರ್ವಾಸನೆಗೆ ಊಟ ಸೇರುತ್ತಿಲ್ಲ. ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಮನೆ ಮುಂದೆ ಗುಂಡಿ ತೋಡಿ, ಹಾಗೇ ಬಿಟ್ಟು ತಿಂಗಳಾಗಿದೆ. ಇಡೀ ಬೀದಿಯ ರೊಚ್ಚು ನೀರು ತುಂಬಿಕೊಂಡು ಗುಂಡಿ ಗಬ್ಬೆದ್ದು ನಾರುತ್ತಿದೆ. ಮನೆಯಿಂದ ಹೊರ ಬರಲು ವಾಕರಿಕೆ ಬರುತ್ತಿದೆ. ಸೊಳ್ಳೆ ಕಾಟವಂತೂ ಮಿತಿಮೀರಿದೆ. ನೆಮ್ಮದಿ ಕಳೆದುಕೊಂಡು ಸಂಕಟದಲ್ಲಿಯೇ ಬದುಕುತ್ತಿದ್ದೇವೆ. ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿಕೊಂಡರೂ ಉಪಯೋಗವಾಗಿಲ್ಲ. ಯಾರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಶಾಕೀರಾ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು