ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಸೋತಾಗ ಹತ್ತಿರ...ಗೆದ್ದಾಗ ದೂರ

ಡಾ.ಕೆ.ಸುಧಾಕರ್ ಅಭಿನಂದನೆ ಸಮಾರಂಭದಿಂದ ದೂರ ಉಳಿದ ನಗರಸಭೆ ಸದಸ್ಯರು
Published 30 ಜೂನ್ 2024, 7:54 IST
Last Updated 30 ಜೂನ್ 2024, 7:54 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್ ಅವರ ಕಟ್ಟಾ ಬೆಂಬಲಿಗರು ಎಂದು ಗುರುತಿಸಿಕೊಂಡಿದ್ದ ಚಿಕ್ಕಬಳ್ಳಾಪುರ ನಗರಸಭೆಯ ಏಳು ಮಂದಿ ಸದಸ್ಯರು ಹಾಗೂ ಮುಖಂಡರು ಶನಿವಾರ ನಗರದಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಿಂದ ದೂರಉಳಿದಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿಯೇ ಇದ್ದರೂ ಕಾರ್ಯಕ್ರಮದತ್ತ ಸುಳಿದಿಲ್ಲ. 

ಇದಿಷ್ಟೇ ಅಲ್ಲ ಸಮಾರಂಭಕ್ಕೆ ಪೂರ್ವಭಾವಿಯಾಗಿ ನಡೆದ ಪೂರ್ವಸಿದ್ಧತಾ ಸಭೆಗಳು ಮತ್ತು ಮಾಧ್ಯಮಗೋಷ್ಠಿಯಲ್ಲಿಯೂ ಭಾಗಿಯಾಗಿರಲಿಲ್ಲ. ನಗರಸಭೆ ಸದಸ್ಯರು ಮತ್ತು ಮುಖಂಡರ ಗೈರು ಚಿಕ್ಕಬಳ್ಳಾಪುರ ನಗರದ ರಾಜಕಾರಣದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

ಸುಧಾಕರ್ ಅವರಿಗೆ ಅತ್ಯಾಪ್ತರು ಎನಿಸಿದ್ದ ಸದಸ್ಯರು ದೂರವಾಗಿದ್ದು ಏಕೆ? ಸುಧಾಕರ್ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರವೂ ಅವರ ಜೊತೆಯಲ್ಲಿ ಇದ್ದವರು, ಲೋಕಸಭೆ ಚುನಾವಣೆಯಲ್ಲಿ ಸುಧಾಕರ್ ಗೆಲುವಿಗೆ ಹೋರಾಟ ನಡೆಸಿದವರು ಈಗ ಅಸಮಾಧಾನಗೊಳ್ಳಲು ಕಾರಣವೇನು ಎನ್ನುವ ಬಗ್ಗೆ ನಾನಾ ರೀತಿಯ ಅಂತೆ ಕಂತೆಗಳು ಚಿಕ್ಕಬಳ್ಳಾಪುರದಲ್ಲಿವೆ.

ನಗರಸಭೆ ಮಾಜಿ ಅಧ್ಯಕ್ಷರೂ ಆದ 23ನೇ ವಾರ್ಡ್ ಸದಸ್ಯ ಡಿ.ಎಸ್.ಆನಂದರೆಡ್ಡಿ ಬಾಬು, 7ನೇ ವಾರ್ಡ್‌ನ ಸತೀಶ್, 6ನೇ ವಾರ್ಡ್‌ನ ರುಕ್ಮಿಣಿ ಮುನಿರಾಜು, 16ನೇ ವಾರ್ಡ್‌ನ ಯತೀಶ್, 22ನೇ ವಾರ್ಡ್‌ನ ಸ್ವಾತಿ ಮಂಜುನಾಥ್, 27ನೇ ವಾರ್ಡ್‌ನ ನೇತ್ರಾವತಿ ರಾಘವೇಂದ್ರ, 10ನೇ ವಾರ್ಡ್‌ನ ಸುಬ್ರಹ್ಮಣ್ಯಾಚಾರಿ, ನಗರಸಭೆ ಮಾಜಿ ಸದಸ್ಯ ಕೇಶವಕುಮಾರ್, ಮತ್ತಷ್ಟು ಮಾಜಿ ಸದಸ್ಯರು ಮತ್ತು ಈ ನಗರಸಭೆ ಸದಸ್ಯರ ಜೊತೆ ನಿಕಟವಾಗಿರುವ ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಕಿಸಾನ್ ಕೃಷ್ಣಪ್ಪ ಹಾಗೂ ಮುಖಂಡರು ಅಭಿನಂದನಾ ಕಾರ್ಯಕ್ರಮದಿಂದ ದೂರ ಉಳಿದಿದ್ದರು. 

ಸೋತ ನಂತರವೂ ಜೊತೆಯಲ್ಲಿದ್ದರು: ಡಾ.ಕೆ.ಸುಧಾಕರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಒಳಏಟು ಸಹ ಪ್ರಮುಖ ಕಾರಣವಾಗಿದೆ. ಅವರ ಜೊತೆಯಲ್ಲಿದ್ದ ಮುಖಂಡರೇ ಕೈಕೊಟ್ಟರು. ಸೋತ ನಂತರವೂ ಸಹ ಡಿ.ಎಸ್.ಆನಂದರೆಡ್ಡಿ ನೇತೃತ್ವದಲ್ಲಿ ನಗರಸಭೆ ಸದಸ್ಯರು, ಮಾಜಿ ಸದಸ್ಯರು ಮತ್ತು  ಕೆಲವು ಮುಖಂಡರು ಡಾ.ಕೆ.ಸುಧಾಕರ್ ಅವರಿಗೆ ನಿಷ್ಠರಾಗಿದ್ದರು. 

ಶಾಸಕ ಪ್ರದೀಪ್ ಈಶ್ವರ್, ಡಾ.ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದಾಗ, ಚಿಕ್ಕಬಳ್ಳಾಪುರದಲ್ಲಿ ಶಾಸಕರ ಹೇಳಿಕೆಗಳನ್ನು ವಿರೋಧಿಸಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದವರಲ್ಲಿ ಮುಂಚೂಣಿಯಲ್ಲಿದ್ದವರೂ ಸಹ ಇದೇ ಸದಸ್ಯರು. ಈ ಕಾರಣಕ್ಕೆ ಶಾಸಕರ ವಿರೋಧವನ್ನೂ ಕಟ್ಟಿಕೊಂಡಿದ್ದರು.

ಸುಧಾಕರ್ ಸೋತ ನಂತರವೂ ಹಬ್ಬಗಳ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ಪರವಾಗಿ ನಗರದಲ್ಲಿ ಫ್ಲೆಕ್ಸ್ ಕಟ್ಟಿಸುತ್ತಿದ್ದರು. ಡಾ.ಕೆ.ಸುಧಾಕರ್ ಅವರು ಆಂಧ್ರಪ್ರದೇಶದ ರಾಜಮುಂಡ್ರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಾಗ ಚಿಕ್ಕಬಳ್ಳಾಪುರದಿಂದ ಈ ಸದಸ್ಯರು ತೆರಳಿದ್ದರು. ಹೀಗೆ ಪ್ರತಿ ಕಾರ್ಯಕ್ರಮದ ಸಮಯದಲ್ಲಿ ಸುಧಾಕರ್ ಅವರ ಎಡ–ಬಲ ಎನ್ನುವಂತೆ ಇದ್ದವರು ಈಗ ದೂರವಾಗಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ತರುವಾಯ ಡಾ.ಕೆ.ಸುಧಾಕರ್ ಜೊತೆ ಗುರುತಿಸಿಕೊಂಡಿದ್ದ ಕೆಲವು ನಗರಸಭೆ ಸದಸ್ಯರು ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಭೇಟಿಯಾಗಿದ್ದರು. ಕಾಂಗ್ರೆಸ್ ಸೇರುವ ಬಗ್ಗೆಯೂ ಮಾತುಕತೆ ನಡೆಸಿದ್ದರು.  

2023ರ ಅಕ್ಟೋಬರ್ 9ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ‘ಚಿಕ್ಕಬಳ್ಳಾಪುರ ನಗರಸಭೆಯ ಕೆಲವು ಬಿಜೆಪಿ ಸದಸ್ಯರು ಶಾಸಕ ಪ್ರದೀಪ್ ಈಶ್ವರ್ ಸಂಪರ್ಕದಲ್ಲಿ ಇದ್ದಾರಂತೆ’ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಡಾ.ಕೆ.ಸುಧಾಕರ್, ‘ಯಾವ ಸದಸ್ಯರು ಕಾಂಗ್ರೆಸ್‌ ಸಂಪರ್ಕದಲ್ಲಿ ಇದ್ದಾರೊ ಅವರಿಗೆ ಶುಭವಾಗಲಿ. ಸಂಪರ್ಕ ಇಟ್ಟುಕೊಂಡವರಿಗೂ ಶುಭವಾಗಲಿ. ಇವರ ಕಾಂಬಿನೇಷನ್‌ನಲ್ಲಿ ಚಿಕ್ಕಬಳ್ಳಾಪುರ ಉದ್ದಾರ ಮಾಡಲಿ’ ಎಂದಿದ್ದರು.

ಆದರೆ ಈ ನಗರಸಭೆ ಸದಸ್ಯರು ಮಾತ್ರ ‘ನಮ್ಮದು ಸುಧಾಕರ್ ಅವರಿಗೆ ನಿಷ್ಠೆ’ ಎಂದು ಅಚಲವಾಗಿದ್ದವರು. ಪಕ್ಷೇತರವಾಗಿ ಗೆದ್ದ ಆನಂದರೆಡ್ಡಿ ನಗರಸಭೆ ಅಧ್ಯಕ್ಷರಾಗುವಲ್ಲಿ ಡಾ.ಕೆ.ಸುಧಾಕರ್ ಪ್ರಮುಖ ಪಾತ್ರವಹಿಸಿದ್ದರು. ಹೀಗೆ ತೀರಾ ಹತ್ತಿವಿದ್ದ ಮುಖಂಡರು ಏಕಾಏಕಿ ದೂರವಾಗಿದ್ದಾರೆ.

ಡಬ್ಬಲ್‌ಗೇಮ್‌ನವರಿಗೆ ಮಣೆ: ‘ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ಪರವಾಗಿದ್ದವರು, ನಂತರ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಸಂಪರ್ಕದಲ್ಲಿ ಇದ್ದವರು, ಲೋಕಸಭೆ ಚುನಾವಣೆ ವೇಳೆ ಕೊನೆಯ ಕ್ಷಣದಲ್ಲಿ ಡಾ.ಕೆ.ಸುಧಾಕರ್ ಅವರ ಜೊತೆ ಬಂದವರಿಗೆ ಈಗ ಮನ್ನಣೆ ದೊರೆಯುತ್ತಿದೆ ಎಂದು ನಗರಸಭೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವ ಯಾವ ಮುಖಂಡರು ಎಲ್ಲೆಲ್ಲಿ ಹೋಗಿದ್ದರು, ಡಾ.ಕೆ.ಸುಧಾಕರ್ ಅವರ ಬಗ್ಗೆ ಏನೇನು ಮಾತನಾಡಿದರು ಎನ್ನುವುದು ಗೊತ್ತಿದೆ. ಅಂತಹವರೇ ಈಗ ಮುಂಚೂಣಿಯಲ್ಲಿ ಇದ್ದಾರೆ. ಡಬ್ಬಲ್‌ ಗೇಮ್ ಆಡುವವರಿಗೆ, ಅನುಕೂಲಕ್ಕಾಗಿ ರಾಜಕೀಯ ಬಂದಿರುವವರಿಗೆ ಪ್ರಾಮುಖ್ಯವಷ್ಟೇ. ನಮಗೆ ಬೇಸರವಾಗಿದೆ. ಆ ಕಾರಣದಿಂದ ದೂರವಿದ್ದೇವೆ ಎಂದರು.

ಅನುಕೂಲ’ವಾದಿಗಳಿಗೆ ಮನ್ನಣೆ; ಆರೋಪ ಚಿಕ್ಕಬಳ್ಳಾಪುರದಲ್ಲಿದ್ದರೂ ಕಾರ್ಯಕ್ರಮಕ್ಕೆ ಗೈರು ಶಾಸಕರ ವಿರೋಧ ಕಟ್ಟಿಕೊಂಡು ಸುಧಾಕರ್ ಪರ ಹೇಳಿಕೆ

ಮೊಬೈಲ್ ಸ್ವಿಚ್‌ಆಫ್ ಮಾಡಿದ ಆನಂದರೆಡ್ಡಿ ಅಭಿನಂದನಾ ಸಮಾರಂಭಕ್ಕೆ ನಗರಸಭೆ ಸದಸ್ಯರು ಗೈರಾಗಿರುವುದರ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಅವರ ಪ್ರತಿಕ್ರಿಯೆ ಪಡೆಯಲು ಕರೆ ಮಾಡಲಾಯಿತು. ‘ಗೈರಾಗಿದ್ದಕ್ಕೆ ಕಾರಣವೇನು. ಸುಧಾಕರ್ ಅವರ ಬಗ್ಗೆ ಬೇಸರವೇ ಮುನಿಸೇ’ ಎಂದು ಪ್ರಶ್ನಿಸುತ್ತಿದ್ದಂತೆ ಅವರು ಕರೆ ಕಡಿತಗೊಳಿಸಿದರು. ಮೊಬೈಲ್ ಸ್ವಿಚ್ ಆಪ್ ಮಾಡಿದರು. ಅಭಿನಂದನಾ ಸಮಾರಂಭಕ್ಕೂ ಮುನ್ನ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಕಾರ್ಯಕ್ರಮ ಮುಗಿದ ತರುವಾಯ ಸ್ವಿಚ್ ಆನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT