ಬುಧವಾರ, ಮಾರ್ಚ್ 29, 2023
23 °C
ಚಿಕ್ಕಬಳ್ಳಾಪುರ ಜಿಲ್ಲೆಗೆ ಅಪರೂಪದ ಅತಿಥಿ ಪದವೀಧರ ಕ್ಷೇತ್ರದ ಪರಿಷತ್ ಸದಸ್ಯ ಚಿದಾನಂದಗೌಡ‌

ಚಿಕ್ಕಬಳ್ಳಾಪುರ: ಅಪರೂಪಕ್ಕೆ ಹಾಜರಿ; ಎಂಎಲ್‌ಸಿ ಮಾದರಿ!

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಪದವೀಧರರನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ. ಜಿಲ್ಲೆಗೆ ಯಾವಾಗ ಭೇಟಿ ನೀಡುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಚುನಾವಣೆ ಸಮಯದಲ್ಲಿ ಮತ ಕೇಳಲು ಹೆಚ್ಚು ಬಂದರು. ಗೆದ್ದ ನಂತರ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಗಮನ ನೀಡಿಲ್ಲ’–ಇದು ತಾಲ್ಲೂಕಿನ ಗಂಗರೇಕಾಲುವೆ ಗ್ರಾಮದ ಪದವೀಧರ ಕ್ಷೇತ್ರದ ಮತದಾರ ಜಿ.ಆರ್.ಅನಿಲ್ ಕುಮಾರ್ ಮಾತು.

ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದ ಸದಸ್ಯ ಎಂ.ಚಿದಾನಂದಗೌಡ ಜಿಲ್ಲೆಗೆ ಅಪರೂಪದ ಅತಿಥಿ. ಅವರ ಕ್ಷೇತ್ರದ ವ್ಯಾಪ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯೂ ಸೇರುತ್ತದೆ. ಆದರೆ ಗೆದ್ದ ನಂತರ ಅವರು ಜಿಲ್ಲೆಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ, ಅವರು ಕೊಟ್ಟ ಭರವಸೆಗಳು ಈಡೇರಿವೆಯೇ ಎಂದು ಗಮನಿಸಿದರೆ ನಿರಾಸೆ ಎದ್ದು ಕಾಣುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗ್ನೇಯ ಪದವೀಧರ ಕ್ಷೇತ್ರದ ಸದಸ್ಯರು ಅಪರೂಪದ ಅತಿಥಿ ಎನಿಸಿದ್ದಾರೆ!

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ (ಹರಿಹರ, ದಾವಣಗೆರೆ, ಜಗಳೂರು ತಾಲ್ಲೂಕುಗಳು ಮಾತ್ರ) ಜಿಲ್ಲೆ ಒಳಗೊಂಡು ಆಗ್ನೇಯ ಪದವೀಧರ ಕ್ಷೇತ್ರವಿದೆ. 32 ವಿಧಾನಸಭಾ ಕ್ಷೇತ್ರಗಳನ್ನು ಆಗ್ನೇಯ ಪದವೀಧರ ಕ್ಷೇತ್ರ ಒಳಗೊಂಡಿದೆ. ಕ್ಷೇತ್ರಕ್ಕೆ 2020ರಲ್ಲಿ ಚುನಾವಣೆಯೂ ನಡೆಯಿತು. ಆಗ ಒಟ್ಟು 1,06,423 ಮತದಾರರಿದ್ದು ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯು 15,951 ಮತದಾರರನ್ನು ಹೊಂದಿತ್ತು. ಕ್ಷೇತ್ರದ ಐದು ಜಿಲ್ಲೆಗಳಲ್ಲಿಯೇ ಕಡಿಮೆ ಮತದಾರರನ್ನು ಚಿಕ್ಕಬಳ್ಳಾಪುರ ಜಿಲ್ಲೆ ‌ಹೊಂದಿದೆ. ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿದಾನಂದ ಗೌಡ ಅವರು 30,976 ಮತಗಳನ್ನು ಪಡೆದು ನಗೆ ಬೀರಿದರು.  

ಗೆಲುವಿನ ನಂತರ ಚಿದಾನಂದಗೌಡರು ಜಿಲ್ಲೆಗೆ ಬೆರಳೆಣಿಕೆಯಷ್ಟು ಬಾರಿ ಮಾತ್ರ ಭೇಟಿ ನೀಡಿದ್ದಾರೆ. ಅವರ ಭೇಟಿಯ ಹಿನ್ನೋಟವನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. 

2020ರ ನವೆಂಬರ್‌ನಲ್ಲಿ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು 2021ರ ಜನವರಿಯಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು. ಅದೇ ವರ್ಷ ಕೋವಿಡ್ ವ್ಯಾಪಿಸಿತು. ಆ ವರ್ಷದ ಜುಲೈನಲ್ಲಿ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟದಲ್ಲಿ ಖಾಸಗಿ ಅನುದಾನರಹಿತ ಶಿಕ್ಷಕರು ಹಾಗೂ ಸಿಬ್ಬಂದಿಗೆ ನಡೆದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ  ಹಾಜರಾಗಿದ್ದರು. ಆ ಕಾರ್ಯಕ್ರಮ ತರುವಾಯ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಈಗ ಕಳೆದ ಜನವರಿ 14ರಂದು ಬಾಗೇಪಲ್ಲಿಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜಿನ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೋಡಿಗೆ ಕಾರ್ಯಕ್ರಮ ಪಾಲ್ಗೊಂಡಿದ್ದಾರೆ. ಹೀಗೆ ವರ್ಷಕ್ಕೆ ಬೆರಳೆಣಿಕೆಯ ಕಾರ್ಯಕ್ರಮಗಳಲ್ಲಿ ಮಾತ್ರ ಪರಿಷತ್ ಸದಸ್ಯರು ಜಿಲ್ಲೆಗೆ ಬಂದು ಹೋಗಿದ್ದಾರೆ.

‘ಯಾವ ಭರವಸೆಗಳನ್ನು ನೀಡಿ ಮತ ಕೇಳುತ್ತಿದ್ದೀರಿ’ ಎಂದು 2020ರ ಅಕ್ಟೋಬರ್‌ನಲ್ಲಿ ಚಿದಾನಂದ ಗೌಡ ಅವರನ್ನು ಸಂದರ್ಶಿಸಿದ್ದಾಗ  ‘ಪ್ರಜಾವಾಣಿ’ ಪ್ರತಿನಿಧಿ ಪ್ರಶ್ನಿಸಿದ್ದರು. 

‘30 ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಇದ್ದೇನೆ. ಖಾಸಗಿ, ಸರ್ಕಾರಿ ಶಾಲೆ, ಕಾಲೇಜುಗಳ ಸಂಕಷ್ಟಗಳ ಅರಿವು ಇದೆ. ನಿರುದ್ಯೋಗಿ ಪದವೀಧರರು ಹೆಚ್ಚಿದ್ದಾರೆ. ಅವರಿಗಾಗಿಯೇ ಕಾರ್ಯಕ್ರಮಗಳನ್ನು ಮಾಡಬೇಕಿದೆ. ತಾಲ್ಲೂಕು ಕೇಂದ್ರಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ತೆರೆಯುವುದು, ನಿರೋದ್ಯೋಗಿ ಪದವೀಧರರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಕೌಶಲ ಕೇಂದ್ರಗಳನ್ನು ಆರಂಭಿಸುವ ಭರವಸೆ ನೀಡುತ್ತಿದ್ದೇನೆ. ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಕಲ್ಪಿಸುವುದೇ ನನ್ನ ಮೂಲ ಉದ್ದೇಶ’– ಎಂದು ಗೌಡರು ಉತ್ತರಿಸಿದ್ದರು.

ಆದರೆ ಜಿಲ್ಲೆಯಲ್ಲಿ ಅವರು ಹೇಳಿದಂತೆ ನಿರುದ್ಯೋಗಿ ‍ಪದವೀಧರರಿಗೆ ಉದ್ಯೋಗ ಕಲ್ಪಿಸುವ ದಿಕ್ಕಿನಲ್ಲಿ ಅವರಿಂದ ಕ್ರಮಗಳು ಆಗಿವೆಯೇ? ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಆರಂಭಿಸಿದ್ದಾರೆಯೇ? ಎಂದು ನೋಡಿದರೆ ನಿರಾಸೆ ಕಟ್ಟಿಟ್ಟ ಬುತ್ತಿ.

ಗೆದ್ದ ನಂತರ ಒಂದೂ ಸಭೆ ನಡೆಸಿಲ್ಲ
ಚಿದಾನಂದ ಗೌಡ ಅವರು ಪರಿಷತ್ ಚುನಾವಣೆ ಸಮಯದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಗೆಲುವಿನ ನಂತರ ಪದವೀಧರರ ಒಂದೂ ಸಭೆ ನಡೆಸಿಲ್ಲ. ಚುನಾವಣೆ ಸಮಯದಲ್ಲಿ ಭೇಟಿ ನೀಡಿದಷ್ಟು ಗೆದ್ದ ನಂತರ ಬರಲಿಲ್ಲ. ಜಿಲ್ಲೆಯಲ್ಲಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ದೊರಕಿಸಿಕೊಡುವ ಭರವಸೆ ಹಾಗೆಯೇ ಉಳಿದಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಗಂಗರೇಕಾಲುವೆಯ ಪದವೀಧರರಾದ ಜಿ.ಆರ್.ಅನಿಲ್ ಕುಮಾರ್.

‘ಮತ ಹಾಕಿಸಿಕೊಂಡು ಹೋದರಷ್ಟೇ’

ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪದವೀಧರರು ಇದ್ದಾರೆ. ಅವರಿಗೆ ಸಣ್ಣ ಕೆಲಸಗಳನ್ನಾದರೂ ಒದಗಿಸಬೇಕಾಗಿತ್ತು. ಅಂತಹ ಯಾವ ಕೆಲಸಗಳೂ ಆಗಿಲ್ಲ. ಚುನಾವಣೆ ಸಮಯದಲ್ಲಿ ಚಿದಾನಂದ ಗೌಡರು ಮತ ಹಾಕಿಸಿಕೊಂಡು ಹೋದರಷ್ಟೇ. ಒಂದೇ ಒಂದು ಸಭೆ ನಡೆಸಿ ಪದವೀಧರರ ಸಮಸ್ಯೆಗಳನ್ನು ಆಲಿಸಿಲ್ಲ ಎನ್ನುತ್ತಾರೆ ಚಿಕ್ಕಬಳ್ಳಾಪುರದ ವಿ.ರಮೇಶ್.

ಶಿಷ್ಟಾಚಾರಕ್ಕೆ ಹೆಸರು

ಜಿಲ್ಲೆಯಲ್ಲಿ ನಡೆಯುವ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳಲ್ಲಿ ಶಿಷ್ಟಾಚಾರದ ಪ್ರಕಾರ ಆಗ್ನೇಯ ಪದವೀಧರ ಕ್ಷೇತ್ರದ ಸದಸ್ಯ ಚಿದಾನಂದಗೌಡ ಅವರ ಹೆಸರನ್ನು ಹಾಕಿಸಲಾಗುತ್ತದೆ. ಇವರ ಹೆಸರು ಆಹ್ವಾನ ಪತ್ರಿಕೆಗಳಲ್ಲಿ ‘ಶಿಷ್ಟಾಚಾರ’ಕ್ಕೆ ಮಾತ್ರ ಸೀಮಿತವಾಗಿದೆ. ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಪರೂಪಕ್ಕೆ ಒಮ್ಮೆಯಾದರೂ ಪರಿಷತ್ ಸದಸ್ಯರು ಹಾಜರಾಗಿಲ್ಲ. ಬಿಜೆಪಿಯಿಂದ ನಡೆಯುವ ಯಾವುದೇ ಕಾರ್ಯಕ್ರಮಗಳಿಗೂ ಹಾಜರಿಯಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು