ಶುಕ್ರವಾರ, ಜೂನ್ 5, 2020
27 °C
ತಾಲ್ಲೂಕು ಶೆಟ್ಟಿಗೆರೆ ಮಾರಮ್ಮ ದೇವಾಲಯ ಪ್ರವೇಶಕ್ಕೆ ಪರಿಶಿಷ್ಟ ಜಾತಿ ಜನರಿಗೆ ನಿರಾಕರಣೆ ಆರೋಪ

ಚಿಕ್ಕಬಳ್ಳಾಪುರ | ಸಪ್ಪಲಮ್ಮ ಬೇಕು, ದಲಿತರು ಬೇಡ!

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ (ಎಸ್‌.ಸಿ) ಜನರ ದೇವತೆ ಸಪ್ಪಲಮ್ಮ ದೇವಿಯನ್ನು ಹೊತ್ತು ಮೆರವಣಿಗೆ ಮಾಡುವ ಬಲಾಢ್ಯರೇ, ದಲಿತರಿಗೆ ಗ್ರಾಮ ದೇವತೆ ಮಾರಮ್ಮ ದೇವಿ ದೇವಾಲಯ ಪ್ರವೇಶ ನಿರಾಕರಿಸುವ ಮೂಲಕ 21ನೇ ಶತಮಾನದಲ್ಲೂ ಅಸ್ಪೃಶ್ಯತೆಗೆ ಇಂಬು ನೀಡುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿ ಮುಖಂಡರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದನ್ನು ಅಲ್ಲಗಳೆಯುವ, ದೇವಾಲಯ ಪ್ರವೇಶಕ್ಕೆ ಅಡ್ಡಿಯಾಗಿದ್ಧಾರೆ ಎನ್ನಲಾದ ಬಲಾಢ್ಯ ಜಾತಿಗಳಿಗೆ ಸೇರಿದ ಮುಖಂಡರು ಇದು ‘ಅಸ್ಪೃಶ್ಯತೆ ಆಚರಣೆಯಲ್ಲ, ತಲೆಮಾರುಗಳಿಂದ ನಾವು ಪಾಲಿಸಿಕೊಂಡು ಬಂದ ಸಂಪ್ರದಾಯವಷ್ಟೇ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.  

ಶೆಟ್ಟಿಗೆರೆಯಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಸಲ್ಲಮುದ್ದ (ತಣಿಮುದ್ದೆ) ಆಚರಣೆ (ರೋಗ, ರುಜಿನಗಳು ಹರಡದಂತೆ ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಹಿಟ್ಟಿನಿಂದ ತಯಾರಿಸಿದ ಆಹಾರದ ಎಡೆ ಇಟ್ಟು ದೈವಗಳ ಶಾಂತಿಗೆ ಪೂಜೆ ಸಲ್ಲಿಸುವ ಆಚರಣೆ) ಪೂರ್ವಭಾವಿಯಾಗಿ ದೇವಾಲಯ ಪ್ರವೇಶ ವಿಚಾರವಾಗಿ ಸವರ್ಣೀಯರು ಮತ್ತು ಎಸ್‌.ಸಿ ನಡುವೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಮಾರಮ್ಮ ದೇವಿ ದೇವಾಲಯ ಹಳೆಯದಾಗಿದ್ದ ವೇಳೆ ಪ್ರತಿ ವರ್ಷ ಅಯ್ಯಪ್ಪ ಮಾಲೆ ಧಾರಣೆ ಋತುವಿನಲ್ಲಿ ಪ್ರತಿಯೊಬ್ಬ ಜಾತಿಯವರು ಗುಡಿಗೆ ಪ್ರವೇಶಿಸುತ್ತಿದ್ದರು. ಆದರೆ, ಕಳೆದ ಎಂಟು ತಿಂಗಳ ಹಿಂದೆ ಹಳೆ ದೇಗುಲ ಕೆಡವಿ ಹೊಸ ದೇವಾಲಯ ಕಟ್ಟಿಸಿದ ಬಳಿಕ ನಮಗೆ ದೇವಾಲಯ ಪ್ರವೇಶ ನಿರಾಕರಿಸುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿಯವರ ಆರೋಪ.

ಈ ಬಾರಿ ಸಲ್ಲಮುದ್ದ ಆಚರಣೆ ಪೂರ್ವಭಾವಿಯಾಗಿ ಗ್ರಾಮದಲ್ಲಿ ಪ್ರತಿ ಮನೆಯಿಂದ ದೇಣಿಗೆ ಸಂಗ್ರಹಿಸುವ ವೇಳೆ ಪರಿಶಿಷ್ಟ ಜಾತಿಯ ಯುವಜನರು ದೇವಾಲಯ ಪ್ರವೇಶಕ್ಕೆ ಅನುಮತಿಸಿದರೆ ಮಾತ್ರ ದೇಣಿಗೆ ನೀಡುವುದಾಗಿ ತಿಳಿಸಿದ್ದರು. ಈ ವಿಚಾರವಾಗಿ ಸವರ್ಣೀಯ ಮತ್ತು ಎಸ್‌.ಸಿ ಮುಖಂಡರು ರಾಜಿ ಪಂಚಾಯಿತಿ ನಡೆಸಿದರೂ ದೇವಾಲಯ ಪ್ರವೇಶಕ್ಕೆ ಒಪ್ಪಲಿಲ್ಲ ಎಂದು ತಿಳಿದು ಬಂದಿದೆ. 

ಹಲವು ವರ್ಷಗಳ ಹಿಂದೆ ಪರಸ್ಥಳದಿಂದ ಸಪ್ಪಲ್ಲಮ್ಮ ದೇವಿ ಮೂರ್ತಿ ತಂದು ಮೆರವಣಿಗೆ ನಡೆಸುತ್ತಿದ್ದ ಸವರ್ಣೀಯರು, ಕೆಲ ವರ್ಷಗಳಿಂದ ಗ್ರಾಮದ ಎಸ್‌.ಸಿ ಜನರೇ ಸಿದ್ಧಪಡಿಸಿದ ಸಪ್ಪಲಮ್ಮ ದೇವಿ ಮೂರ್ತಿಯನ್ನು ಮೆರವಣಿಗೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಆ ಸಮುದಾಯದವರಿಗೆ ಮಾತ್ರ ದೇಗುಲ ಪ್ರವೇಶ ನಿರಾಕರಿಸುವ ಮೂಲಕ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಪ್ರಜ್ಞಾವಂತರ ಆರೋಪ.

’ನಾವು ಶಿಕ್ಷಿತರಾಗಿ ಮಂಗಳನ ಅಂಗಳ ಮುಟ್ಟಿದಾಗಲೂ ಇಂದಿಗೂ ದೇವಾಲಯದ ಅಂಗಳವನ್ನು ದಲಿತರು ಪ್ರವೇಶಿಸಬಾರದೆಂಬ ಅನಿಷ್ಠ ಸಂಪ್ರದಾಯಕ್ಕೆ ಜೋತು ಬಿದ್ದಿರುವುದು ನಾಚಿಕೆಗೇಡಿನ ಸಂಗತಿ. ಇದು ಸಂವಿಧಾನಕ್ಕೆ ಮಾಡುವ ಅಪಚಾರ. ಶೋಷಿತರಿಗೆ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯ ಕೊಡಿಸಬೇಕು‘ ಎಂದು ಸಾಮಾಜಿಕ ಕಾರ್ಯಕರ್ತ ಎ.ಟಿ.ಕೃಷ್ಣನ್ ತಿಳಿಸಿದರು.

**

ದೇಗುಲ ಪ್ರವೇಶಕ್ಕೆ ಒಪ್ಪಲಿಲ್ಲ
ನಾವೂ ಎಲ್ಲರಂತೆ ಮಡಿಯಾಗಿ, ಶುಚಿಯಾಗಿ ಸಂಪ್ರದಾಯ ಪಾಲಿಸಿ ದೇವಾಲಯ ಪ್ರವೇಶಿಸುತ್ತೇವೆ ಅವಕಾಶ ಕೊಡಿ ಎಂದು ಕೇಳಿದೆವು. ಅದಕ್ಕೆ ಸವರ್ಣೀಯ ಮುಖಂಡರು ಇವತ್ತು ದೇವಾಲಯದ ಒಳಗೆ ಬಿಟ್ಟುಕೊಳ್ಳಿ ಎಂದವರು, ನಾಳೆ ಮನೆ ಒಳಗೆ ಬರುತ್ತೇವೆ ಎನ್ನುತ್ತಿರಿ. ನಿಮಗೆ ಇಷ್ಟವಿದ್ದರೆ ತಣಿಮುದ್ದೆ ಆಚರಣೆಗೆ ಬನ್ನಿ, ಇಲ್ಲದಿದ್ದರೆ ಬೇಡ ಎಂದು ತಿಳಿಸಿದರು.
-ಶ್ರೀನಿವಾಸ್, ಪರಿಶಿಷ್ಟ ಜಾತಿ ಮುಖಂಡ

**
ತಾತನ ಕಾಲದಿಂದಲೂ ಬಿಟ್ಟುಕೊಂಡಿಲ್ಲ
ಕೊರೊನಾ ಸೋಂಕಿನ ಕಾರಣಕ್ಕೆ ಊರಲ್ಲಿ ಗುರುವಾರ ತಣಿಮುದ್ದೆ ಆಚರಣೆ ಇತ್ತು. ಪರಿಶಿಷ್ಟ ಜಾತಿ ಜನರು ಮಾರಮ್ಮ ದೇವಿಗೆ ಹೊರಗಿನಿಂದಲೇ ಪೂಜೆ ಸಲ್ಲಿಸಬಹುದು. ಆದರೆ, ದೇವಾಲಯದ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಇದು ನಮ್ಮಲ್ಲಿ ಹೊಸತೆನಲ್ಲ. ನಮ್ಮ ತಾತನ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿದ್ದೆವೆ.
-ಮರಿಯಪ್ಪ, ಮುಖಂಡ

*
ಧರ್ಮ ಮತ್ತು ಜಾತಿ ಆಧಾರಿತವಾಗಿ ದೇವಾಲಯ ಪ್ರವೇಶ ನಿರಾಕರಿಸುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಇಲ್ಲಿ ಪೊಲೀಸರು ಕ್ರಮ ಜರುಗಿಸಬೇಕು.
-ಎ.ಎಸ್.ಪೊನ್ನಣ್ಣ, ಹೈಕೋರ್ಟ್ ಹಿರಿಯ ವಕೀಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು