ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬದಲಾಗಲಿದ್ದಾರೆಯೇ ಕಾಂಗ್ರೆಸ್ ಅಧ್ಯಕ್ಷ?

ಜಿಲ್ಲಾ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚರ್ಚೆ: 5 ವರ್ಷಗಳಿಂದ ಹುದ್ದೆಯಲ್ಲಿರುವ ಕೇಶವರೆಡ್ಡಿ
Last Updated 4 ನವೆಂಬರ್ 2022, 6:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಚರ್ಚೆ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಬದಲಾಗಲಿದ್ದಾರೆ ಎಂಬ ವಿಷಯ ಜಿಲ್ಲಾ ಕಾಂಗ್ರೆಸ್‌ನ ಆಂತರಿಕ ವಲಯ ಹಾಗೂ ಕೇಶವರೆಡ್ಡಿ ವಿರೋಧಿ ಬಣದಲ್ಲಿ ಚರ್ಚೆಯಾಗುತ್ತಿದೆ.

ಕೆಲವು ತಿಂಗಳ ಹಿಂದೆ ರಾಜ್ಯ ಕಾಂಗ್ರೆಸ್‌ 10ಕ್ಕೂ ಹೆಚ್ಚು ಜಿಲ್ಲೆಗಳ ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡಿತು. ಆ ಸಮಯದಲ್ಲಿಯೇಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎನ್ನುವ ಚರ್ಚೆ ಸಹ ಇತ್ತು.

ಕೆ.ಎನ್.ಕೇಶವರೆಡ್ಡಿ ಅವರು ಐದು ವರ್ಷಗಳಿಂದ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಪಕ್ಷದ ಏಳುಬೀಳುಗಳ ಜತೆ ಇದ್ದಾರೆ. ಈ ಅವಧಿಯಲ್ಲಿ ಪಕ್ಷದ ಒಳಗೆ ಅವರ ‘ಆಪ್ತ’ವಲಯ ಇದ್ದಂತೆ ವಿರೋಧಿ ಬಣವೂ ಇದೆ.

ಕೆಲವು ಘಟಕಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡುವಂತೆ ಕೇಶವರೆಡ್ಡಿ ಅವರು ರಾಜ್ಯ ಘಟಕಕ್ಕೆ ಶಿಫಾರಸು ಸಹ ಮಾಡಿದ್ದರು. ಆ ಆಧಾರದಲ್ಲಿ ‌ಬದಲಾವಣೆಗಳು ನಡೆದಿವೆ.‌ ಹೀಗೆ ಬದಲಾವಣೆಯಾದ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವಿರೋಧಿ ಬಣದಲ್ಲಿ ಇದ್ದಾರೆ. ವಿರೋಧಿ ಬಣಬಹಿರಂಗವಾಗಿ ಕಾರ್ಯಾಚರಣೆ ನಡೆಸದಿದ್ದರೂ ಪಕ್ಷದಲ್ಲಿ ತಮಗೆ ಒದಗುವ ವೇದಿಕೆಗಳಲ್ಲಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

‘ಪಕ್ಷದಲ್ಲಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಲ್ಲಿದೆ. ಆದರೆ ಈ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ.ನಾನೂ ಸಹ ಸುದೀರ್ಘ ಅವಧಿಯಿಂದ ‍ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ವಿವಿಧ ಘಟಕಗಳಲ್ಲಿ ಪದಾಧಿಕಾರಿಯಾಗಿ ಪಕ್ಷ ಸಂಘಟಿಸಿದ್ದೇನೆ. ನಾನೂ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಆದರೆ ಈ ಸಂದರ್ಭದಲ್ಲಿ ನನ್ನ ಹೆಸರು ಬಹಿರಂಗಗೊಳ್ಳುವುದು ಬೇಡ’ ಎಂದು ಕಾಂಗ್ರೆಸ್ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತೂಕವಿಲ್ಲದವರ ಮಾತು: ‘ನನ್ನ ಅಧ್ಯಕ್ಷ ಸ್ಥಾನದಿಂದ ತೆಗೆದರೆ ಬೇರೆಯವರನ್ನು ದೂಷಿಸುವುದಿಲ್ಲ. ಯಾರೊ ಕೆಲವರು ತೂಕವಿಲ್ಲದವರು ಮಾತ್ರ ನನ್ನ ಬಗ್ಗೆ ಮಾತನಾಡಬಹುದು. ಜಿ.ಪಂ ಮಾಜಿ ಸದಸ್ಯರು, ಅಧ್ಯಕ್ಷರು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾತನಾಡಿದರೆ ಅದಕ್ಕೆ ಒಂದು ತೂಕ ಇರುತ್ತದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಕೆ.ಎನ್.ಕೇಶವರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುವ ಕಾರಣಕ್ಕೆ ನನ್ನ ಮುಂದುವರಿಸಿದ್ದಾರೆ. ನಾನು ಅಚಾನಕ್ಕಾಗಿ ಮೇಲೆ ಬಂದಿಲ್ಲ. ನನ್ನ ಜವಾಬ್ದಾರಿ ಏನು ಎಂದು ತಿಳಿದು ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಪಕ್ಷ ಕಟ್ಟಿದ್ದೇನೆ’ ಎಂದು ಹೇಳಿದರು.

ಜಿಲ್ಲೆಯಲ್ಲಿ ಬಾಗೇಪಲ್ಲಿ, ಗೌರಿಬಿದನೂರು ಮತ್ತು ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ತೀರ್ಮಾನಗಳು ಸಹ ಪ್ರಮುಖವಾಗುತ್ತವೆ.

2023ರ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಬದಲಾವಣೆ ಆಗುತ್ತದೆಯೇ? ಇಲ್ಲವೆ ಕೇಶವರೆಡ್ಡಿ ಅವರ ಸಾರಥ್ಯವೇ ಮುಂದುವರಿಯುತ್ತದೆಯೇ ಎನ್ನುವ ಕುತೂಹಲ ‘ಆಪ್ತ’ ಮತ್ತು ‘ವಿರೋಧಿ’ ಬಣದಲ್ಲಿದೆ.

‘ಬೇರೆಯವರಿಗೆ ಅವಕಾಶ ನೀಡಿದರೆ ಸ್ವಾಗತಿಸುವೆ’

ಪಕ್ಷ ನನಗೆ ಐದು ವರ್ಷಗಳ ಕಾಲ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಿದೆ. ಈಗ ಬೇರೆಯವರಿಗೆ ಅವಕಾಶ ನೀಡಿದರೆ ಸ್ವಾಗತಿಸುವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವುದೇ ಬದಲಾವಣೆ ಮಾಡಬೇಕಾದರೂ ಕೆಪಿಸಿಸಿ ವೀಕ್ಷಕರು, ಕಾರ್ಯದರ್ಶಿ, ಉಪಾಧ್ಯಕ್ಷರ ಗಮನದಲ್ಲಿ ಇರುತ್ತದೆ. ಬದಲಾವಣೆ ಪರ್ವ ಇದ್ದೇ ಇರುತ್ತದೆ. ಯಾರು ಪಕ್ಷ ಸಂಘಟಿಸುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ ಎನ್ನುವುದರ ಮೇಲೆ ಸ್ಥಾನ ಕೊಡುತ್ತಾರೆ ಎಂದರು.

‘ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿಲ್ಲ’

‘ಪಕ್ಷದ ಜಿಲ್ಲಾ ಅಧ್ಯಕ್ಷರ ಬದಲಾವಣೆ ಆಗಬೇಕು. ‍ಪಕ್ಷ ನಿಷ್ಠರನ್ನು ಅವರು ಕಡೆಗಣಿಸಿದ್ದಾರೆ. ಬೇರೆ ಬೇರೆ ಪಕ್ಷಗಳಿಂದ ಬಂದವರು ಸಹ ಜಿಲ್ಲಾ ಘಟಕದ ಆಯಕಟ್ಟಿನ ಹುದ್ದೆಗಳಲ್ಲಿ ಇದ್ದಾರೆ. ಕೆಲವು ಘಟಕಗಳ ಪದಾಧಿಕಾರಿಗಳನ್ನು ಏಕಾಏಕಿ ಬದಲಾವಣೆ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಬೇಕು ಎಂದರೆ ಅಧ್ಯಕ್ಷರನ್ನು ಬದಲಿಸಬೇಕು. ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುವವರು ಬೇಕು’ ಎಂದು ಕೇಶವರೆಡ್ಡಿ ಅವರ ವಿರೋಧಿ ಬಣದಲ್ಲಿರುವ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT