ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾ‍ಪುರ |ಉಚಿತ ಹೃದ್ರೋಗ ಚಿಕಿತ್ಸೆ ಘಟಕ ಉದ್ಘಾಟಿಸಿದ ಎಚ್.ಕೆ ಪಾಟೀಲ

ಸತ್ಯಸಾಯಿ ಗ್ರಾಮದಲ್ಲಿ ಉಚಿತ ಹೃದಯ ಶಸ್ತ್ರಚಿಕಿತ್ಸಾ ಘಟಕ ಉದ್ಘಾಟನೆ
Published 1 ಜನವರಿ 2024, 14:39 IST
Last Updated 1 ಜನವರಿ 2024, 14:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾ‍ಪುರ: ಸರ್ಕಾರಗಳು ಮಾಡಲಾಗದ ಅದ್ಭುತ ಕಾರ್ಯವನ್ನು ಇಲ್ಲಿ ಅತ್ಯಲ್ಪ ಕಾಲದಲ್ಲಿ ಮಾಡಿ ಯಶಸ್ಸು ಸಾಧಿಸಲಾಗಿದೆ. ಇದು ನಿಜಕ್ಕೂ ಪವಾಡ. ಇಂತಹ ಸೌಲಭ್ಯಗಳು ಎಲ್ಲಾ ಕಡೆಯಲ್ಲೂ ಲಭ್ಯವಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ತಿಳಿಸಿದರು. 

ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸುಸಜ್ಜಿತ ಹೃದ್ರೋಗ, ಹೃದಯರಕ್ತನಾಳದ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಸತ್ಯಸಾಯಿ ಗ್ರಾಮದಲ್ಲಿ ಉದ್ಘಾಟನೆಯಾಗಿರುವ ಹೃದಯ ಶಸ್ತ್ರಚಿಕಿತ್ಸೆಗಳ ಸೌಲಭ್ಯವು ಜಾಗತಿಕ ಮಟ್ಟದಲ್ಲಿ ಮನುಕುಲಕ್ಕೆ ನೀಡಿದ ಮಹಾನ್ ಉಡುಗೊರೆಯಾಗಿದೆ. ಸರ್ಕಾರದಿಂದ ಇದಕ್ಕೆ ಎಲ್ಲಾ ರೀತಿಯ ಬೆಂಬಲವಿದೆ ಎಂದರು.

‘ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ’ ಎಂಬ ಸತ್ಯಸಾಯಿ ಬಾಬಾ ಅವರ ಸಂದೇಶ ಇಡೀ ಮನುಕುಲಕ್ಕೆ ನೀಡಿದ ಜೀವನ ಮಂತ್ರವಾಗಿದೆ. ಸೇವೆಯ ಮೂಲಕ ಲೋಕಕಲ್ಯಾಣವನ್ನು ಸಾಧಿಸಬೇಕು. ನಿಸ್ವಾರ್ಥ ಸೇವೆಯಲ್ಲಿ ಜೀವನದ ಧ್ಯೇಯ ಅಡಗಿದೆ ಎಂದು ಹೇಳಿದರು.

ಉಚಿತ ಹೃದಯ ಶಸ್ತ್ರ ಚಿಕಿತ್ಸೆ ಸದ್ಗುರು ಮಧುಸೂದನ ಸಾಯಿ ಅವರ ತಂಡದಿಂದ ಸಾಧ್ಯವಾಗಿದೆ. ಮನುಕುಲಕ್ಕೆ ಇದೊಂದು ದೊಡ್ಡ ವರ. ಲಾಭ ನಷ್ಟಗಳ ಲೆಕ್ಕಾಚಾರವಿರುವ  ಸಮಾಜದಲ್ಲಿ ಸಹಾನುಭೂತಿಯ ಸಂಸ್ಕೃತಿಗೆ ನಾಂದಿ ಹಾಡಿರುವುದು ಪವಾಡವೇ ಆಗಿದೆ ಎಂದರು.

ಸತ್ಯಸಾಯಿ ಆಶ್ರಮವು ಶಿಕ್ಷಣ, ಪೌಷ್ಟಿಕತೆ, ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾನವೀಯ ಮಿಡಿತವನ್ನು ಕ್ರಿಯಾತ್ಮಕವಾಗಿ ಪ್ರಪಂಚದಾದ್ಯಂತ ಅನುಷ್ಠಾನಗೊಳಿಸುತ್ತಿದೆ. ಈಗ ವೈದ್ಯಕೀಯ ಕ್ಷೇತ್ರದ ಸೇವಾ ಹಾದಿಯಲ್ಲಿ ಇನ್ನೊಂದು ಮೈಲಿಗಲ್ಲು ಕ್ರಮಿಸಿದೆ. ಜನ ಸಾಮಾನ್ಯರಿಗೆ ಅತ್ಯಂತ ದುಬಾರಿಯಾದ ಹೃದಯ ಶಸ್ತ್ರ ಚಿಕಿತ್ಸೆಯನ್ನು ತಮ್ಮ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮೂಲಕ ಉಚಿತವಾಗಿ ದೊರೆಯುವಂತೆ ಮಾಡಿದ್ದಾರೆ. ದೇಶವು ಹೃದಯ ಸಂಬಂಧಿ ಕಾಯಿಲೆಗಳಿಂದ ತತ್ತರಿಸುತ್ತಿದೆ. ಮಾನವ ಸಂಪನ್ಮೂಲಗಳಿಗೆ ಕಂಟಕವಾಗಿದೆ. ಇಂತಹ ಸಮಯದಲ್ಲಿ ಆರೋಗ್ಯವಂತ ಪ್ರಜೆಗಳು ಮತ್ತು ಸದೃಢ ದೇಶ ನಿರ್ಮಾಣಕ್ಕೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಬಣ್ಣಿಸಿದರು.

ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎ.ಆರ್ ರಘುಪತಿ, ವಿದ್ಯಾಲಯದ ಸ್ಥಾಪನೆ, ವೈದ್ಯಾಲಯವು ಕ್ರಮಿಸಿದ ಹಾದಿ, ಲಭ್ಯ ಚಿಕಿತ್ಸೆಗಳ ಬಗ್ಗೆ ವಿವರಿಸಿದರು.  

ಸಾನ್ನಿಧ್ಯವಹಿಸಿದ್ದ ಸದ್ಗುರು ಮಧುಸೂದನ ಸಾಯಿ ಅವರು ಮಾತನಾಡಿ, ದೇಶದ ಅಭಿವೃದ್ಧಿ ಮತ್ತು ಸಮಾಜದ ಸುಧಾರಣೆಯ ವಿಚಾರದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕುವುದೇ ನಮ್ಮ ಉದ್ದೇಶ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು. ದೇಶಕ್ಕೆ ಸಹಾಯವಾಗುವ ಅನೇಕ ಕಾರ್ಯಕ್ರಮಗಳು ತಮ್ಮ ಕಾರ್ಯ ಸೂಚಿಯಲ್ಲಿವೆ. ಶೀಘ್ರವೇ ಅನುಷ್ಠಾನಕ್ಕೆ ತರಲಾಗುವುದು ಎಂದರು.

ದೇಶದ ವಿಕಾಸವು ಗ್ರಾಮಗಳಿಂದಲೇ ಆರಂಭವಾಗುತ್ತದೆ. ಆದ್ದರಿಂದ ಗ್ರಾಮಗಳ ಅಭಿವೃದ್ಧಿ ವಿಚಾರವಾಗಿ ಮುತುವರ್ಜಿವಹಿಸಿದ್ದೇವೆ ಎಂದು ಹೇಳಿದರು. 

ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಆನಂದ ಅಗರ‌ವಾಲ್, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣ, ಮುನ್ನೆಚ್ಚರಿಕೆಯ ಕ್ರಮಗಳು, ಚಿಕಿತ್ಸೆಯ ವಿಧಾನಗಳ ಬಗ್ಗೆ ವಿವರಿಸಿದರು.  ಹೃದಯ ನಾಳ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್.ಹಿರೇಮಠ, ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಸಿ ಶ್ರೀನಿವಾಸ್ ಮಾತನಾಡಿದರು.

ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್.ನರಸಿಂಹಮೂರ್ತಿ, ಜಯದೇವ ವೈದ್ಯಕೀಯ ವಿದ್ಯಾಲುದ ಡಾ.ಪ್ರಸನ್ನ ಕುಮಾರ್, ರಾಷ್ಟ್ರೀಯ ಹೃದಯ ಸ್ವಾಸ್ಥ್ಯ ಕೇಂದ್ರದ ಪ್ರೊ.ಕೃಷ್ಣ ಅಯ್ಯರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT