ಮಳೆ ಕಣ್ಣಾಮುಚ್ಚಾಲೆ; ಶೇ 1ರಷ್ಟು ಬಿತ್ತನೆ

7
ಸಕಾಲಕ್ಕೆ ಜಮೀನು ಹದಗೊಳಿಸದ ‌ರೈತರು; ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಮಳೆ

ಮಳೆ ಕಣ್ಣಾಮುಚ್ಚಾಲೆ; ಶೇ 1ರಷ್ಟು ಬಿತ್ತನೆ

Published:
Updated:
ಚಿಂತಾಮಣಿ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡ ರೈತರು

ಚಿಕ್ಕಬಳ್ಳಾಪುರ: ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆ ವಿಳಂಬಗೊಂಡು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ 4 ರಷ್ಟು ಬಿತ್ತನೆಯಾಗಿತ್ತು. ಆದರೆ ಈ ಬಾರಿ ಇಲ್ಲಿಯವರೆಗೆ ಶೇ 1ರಷ್ಟು ಮಾತ್ರ ಬಿತ್ತನೆಯಾಗಿದೆ.

ಕಳೆದ ವರ್ಷ ಜನವರಿಯಿಂದ ಜೂನ್ 19ರ ವರೆಗೆ ಜಿಲ್ಲೆಯಲ್ಲಿ 202 ಮಿ.ಮೀ ಮಳೆಯಾಗಿತ್ತು. ಆ ಪ್ರಮಾಣ ಈ ವರ್ಷ 241 ಮಿ.ಮೀ ಇದೆ. ಕಳೆದ ಬಾರಿ ಜೂನ್‌ನಲ್ಲಿ (19ರ ವರೆಗೆ) 47 ಮಿ.ಮೀ ಮಳೆಯಾಗಿತ್ತು. ಈ ವರ್ಷ ಇದೇ ಅವಧಿಗೆ 70 ಮಿ.ಮೀ ಮಳೆ ಸುರಿದಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಾಗಿದೆ.

ಆದರೆ, ರೈತರು ಸಕಾಲಕ್ಕೆ ಭೂಮಿ ಹದಗೊಳಿಸದ ಕಾರಣಕ್ಕೆ ಜೂನ್ ತಿಂಗಳ ಮೂರನೇ ವಾರ ಸಮೀಪಿಸಿದರೂ ನಿರೀಕ್ಷಿತ ಬಿತ್ತನೆಯಾಗಿಲ್ಲ. ಜಿಲ್ಲೆಯಲ್ಲಿ 1.54 ಲಕ್ಷ ಹೇಕ್ಟರ್‌ ಬಿತ್ತನೆ ಪ್ರದೇಶವಿದೆ. ಕಳೆದ ವರ್ಷ ಜೂನ್ ಇದೇ ಅವಧಿಗೆ 6,057 ಹೆಕ್ಟೇರ್ ಬಿತ್ತನೆಯಾಗಿತ್ತು. ಆದರೆ ಈ ವರ್ಷ ಇಲ್ಲಿಯವರೆಗೆ 1,614 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.

‘ಸಾಮಾನ್ಯವಾಗಿ ಬೇಸಿಗೆ ಬೆಳೆ ಮಾರ್ಚ್‌ ವೇಳೆಗೆ ಕಟಾವು ಆಗುತ್ತವೆ. ಏಪ್ರಿಲ್ ಮತ್ತು ಮೇ ಮಳೆಗೆ ಜಮೀನು ಹದಗೊಳಿಸಿಟ್ಟುಕೊಂಡು ಜೂನ್‌ನ ಮೊದಲ ವಾರದಿಂದಲೇ ಬಿತ್ತನೆ ಕಾರ್ಯ ಆರಂಭಿಸುವುದು ವಾಡಿಕೆ. ಜೂನ್ ಎರಡನೇ ವಾರದಿಂದ ಮಳೆ ಸರಿಯಾಗಿ ಆಗುತ್ತಿಲ್ಲ. ಇದೇ ಬಿತ್ತನೆ ವಿಳಂಬಕ್ಕೆ ಮುಖ್ಯ ಕಾರಣ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಬಿತ್ತನೆ ಜೋರಾಗಿ ನಡೆದಿರಬೇಕಾದ ಈ ಹೊತ್ತಿನಲ್ಲಿ ರೈತರು ಇನ್ನೂ ಜಮೀನು ಹದಗೊಳಿಸುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ಮಳೆ ಕೈಕೊಟ್ಟಿರುವ ಕಾರಣಕ್ಕೆ ನೆಲಗಡಲೆ (ಶೇಂಗಾ) ಬಿತ್ತನೆಗೆ ಹಿನ್ನಡೆಯಾಗಿದೆ. 10 ದಿನಗಳ ಒಳಗೆ ಉತ್ತಮ ಮಳೆಯಾಗದಿದ್ದರೆ ಈ ಬಾರಿ ಜಿಲ್ಲೆಯಲ್ಲಿ ನೆಲಗಡಲೆ ಬಿತ್ತನೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿಸಿದರು.

‘ಸದ್ಯ ಜಿಲ್ಲೆಯಲ್ಲಿ 680 ಹೆಕ್ಟೇರ್ ಮುಸುಕಿನ ಜೋಳ, 345 ಹೆಕ್ಟೇರ್ ರಾಗಿ, 240 ಹೆಕ್ಟೇರ್ ತೊಗರಿ, 112 ಹೆಕ್ಟೇರ್ ನೆಲಗಡಲೆ ಬಿತ್ತನೆಯಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದು ಹೇಗೆ ಸುರಿಯುತ್ತದೆಯೋ ಕಾಯ್ದು ನೋಡಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜದ ದಾಸ್ತಾನು ಸಾಕಷ್ಟು ಇದೆ. ರಸಗೊಬ್ಬರಕ್ಕೆ ಕೂಡ ಕೊರತೆ ಇಲ್ಲ. ಮಳೆ ಬರುತ್ತಿದ್ದಂತೆ ಬಿತ್ತನೆ ಮಾಡಬೇಕು. ಕೃಷಿ ಹೊಂಡ ನಿರ್ಮಿಸಿಕೊಂಡ ರೈತರು ಮಳೆ ನೀರನ್ನು ಸಂಗ್ರಹಿಸುವ ಕೆಲಸ ಮಾಡಬೇಕು. ಬೆಳೆ ಸಂದಿಗ್ಧ ಹಂತದಲ್ಲಿ ಹನಿ ನೀರಾವರಿ ಪದ್ಧತಿ ಮೂಲಕ ನೀರನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಳೆದ ಆರೇಳು ವರ್ಷಗಳಿಂದ ಸತತ ಮಳೆ ‘ಆಟ’ಕ್ಕೆ ಸೋತು ಹೋಗಿರುವ ಜಿಲ್ಲೆಯ ರೈತರು ಈ ಬಾರಿಯಾದರೂ ‘ಬರ’ ನೀಗಿತು ಎಂಬ ಆಸೆಯೊಂದಿಗೆ ಚಾತಕ ಪಕ್ಷಿಗಳಂತೆ ಉತ್ತಮ ಮುಂಗಾರು ಮಳೆ ಎದುರು ನೋಡುತ್ತಿದ್ದರು. ಇದೀಗ ಅದು ಕೂಡ ತನ್ನ ಮುನಿಸು ತೋರಿಸಿದ್ದು, ರೈತರಿಗೆ ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಸದ್ಯ ಆಕಾಶದತ್ತ ದೃಷ್ಟಿ ನೆಟ್ಟಿರುವ ರೈತರು ನಾಳೆಗಾದರೂ ಮಳೆ ಸುರಿದರೆ ಸಾಕು ಎಂಬ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

 ಕಡಿಮೆಯಾಗುತ್ತಿರುವ ನೆಲಗಡಲೆ ಪ್ರದೇಶ

ಜಿಲ್ಲೆಯಲ್ಲಿ ಮಳೆಯ ಕಣ್ಣಾ ಮುಚ್ಚಾಲೆ ಆಟಕ್ಕೆ ಬೇಸತ್ತು ರೈತರು ನೆಲಗಡಲೆಯಿಂದ ವಿಮುಖರಾಗಿ, ಮುಸುಕಿನ ಜೋಳದತ್ತ ಒಲುವು ತೋರುತ್ತಿದ್ದಾರೆ. ಹೀಗಾಗಿ ಅದು ಸಹ ಬಿತ್ತನೆ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ.

ನೆಲಗಡಲೆ ಕಾಯಿ ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟರೆ ನಷ್ಟ ಅನುಭವಿಸಬೇಕಾಗುತ್ತದೆ. ಅದೇ ಮುಸುಕಿನ ಜೋಳ ಬೆಳೆದರೆ ಬೆಳೆಯ ಜತೆಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಬಹುತೇಕರು ನೆಲಗಡಲೆ ಬಿತ್ತನೆಗೆ ಮುಂದಾಗುತ್ತಿಲ್ಲ.

ವಿಶೇಷವಾಗಿ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ರೈತರು ನೆಲಗಡಲೆ ಬೆಳೆ ಕಡಿಮೆ ಮಾಡುತ್ತಿದ್ದಾರೆ. ಪರಿಣಾಮ 32,750 ಹೆಕ್ಟೇರ್ ನೆಲಗಡಲೆ ಬಿತ್ತನೆ ಪ್ರದೇಶದ ಪೈಕಿ ಈವರೆಗೆ 112 ಹೆಕ್ಟೇರ್‌ ಬಿತ್ತನೆಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ವಿದ್ಯಮಾನದಿಂದ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮುಸುಕಿನ ಜೋಳ ಬಿತ್ತನೆ ಪ್ರದೇಶದಲ್ಲಿ  5 ಸಾವಿರ ಹೆಕ್ಟೇರ್ ಹೆಚ್ಚಾಗಿದೆ. 48 ಸಾವಿರ ಹೆಕ್ಟೇರ್ ಇದ್ದ ಬಿತ್ತನೆ ಪ್ರದೇಶ ಇದೀಗ 53 ಸಾವಿರ ಹೆಕ್ಟೇರ್‌ಗೆ ವಿಸ್ತರಿಸಿದೆ. ‌ವಿಶೇಷವಾಗಿ ಗೌರಿಬಿದನೂರು ತಾಲ್ಲೂಕಿನಲ್ಲಿ ಮುಸುಕಿನ ಜೋಳ ಪ್ರದೇಶ ಗಣನೀಯವಾಗಿ ಹೆಚ್ಚುತ್ತಿದೆ.

ಜೂನ್ ಎರಡು ಮತ್ತು ಮೂರನೇ ವಾರದಲ್ಲಿ ಮಳೆ ಕೈಕೊಟ್ಟ ಕಾರಣಕ್ಕೆ ಜಿಲ್ಲೆಯಲ್ಲಿ ಬಿತ್ತನೆ ವಿಳಂಬವಾಗಿದೆ. ಈ ವಾರದಲ್ಲಿ ಚೆನ್ನಾಗಿ ಮಳೆಯಾದರೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಲಿದೆ
ಮಲ್ಲಿಕಾರ್ಜುನ, ಕೃಷಿ ಇಲಾಖೆ ಜಂಟಿ ನಿರ್ದೇಶಕ

1.54 ಲಕ್ಷ ಹೇಕ್ಟರ್‌
ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶ

1,262 ಹೇಕ್ಟರ್‌
ಬಿತ್ತನೆಯಾದ ನೀರಾವರಿ ಪ್ರದೇಶ

352 ಹೇಕ್ಟರ್‌
ಬಿತ್ತನೆಯಾದ ಖುಷ್ಕಿ ಪ್ರದೇಶ

1,614 ಹೇಕ್ಟರ್
ಬಿತ್ತನೆಯಾದ ಒಟ್ಟು ಪ್ರದೇಶ

ತಾಲ್ಲೂಕುವಾರ ಬಿತ್ತನೆ ವಿವರ
ತಾಲ್ಲೂಕು ಹೇಕ್ಟರ್
ಗುಡಿಬಂಡೆ 184
ಗೌರಿಬಿದನೂರು 862
ಬಾಗೇಪಲ್ಲಿ 132
ಚಿಂತಾಮಣಿ 270
ಚಿಕ್ಕಬಳ್ಳಾಪುರ 126
ಶಿಡ್ಲಘಟ್ಟ 40

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !