ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವರ್ಷ ಕಳೆದರೂ ವೇಗ ಪಡೆಯದ ಅಭಿವೃದ್ಧಿ

ಚಿಂತಾಮಣಿ ಅಭಿವೃದ್ಧಿ ಕಾಮಗಾರಿಗೆ ಹಿಡಿದ ಗ್ರಹಣ
Published 11 ಜೂನ್ 2024, 7:38 IST
Last Updated 11 ಜೂನ್ 2024, 7:38 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿದೆ. ಕ್ಷೇತ್ರದ ಶಾಸಕ ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರು. ಹಿಂದೆ ಎರಡು ಬಾರಿ ಶಾಸಕರಾಗಿದ್ದಾಗ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಮುನ್ನುಡಿ ಬರೆದು ಅಭಿವೃದ್ಧಿಗೆ ಒತ್ತು ನೀಡಿದ್ದರು. ಈ ಬಾರಿ ಕ್ಷೇತ್ರದ ಜನರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕ್ಷೇತ್ರದಲ್ಲಿ ಹಿಂದೆ ಶಾಸಕರಾಗಿದ್ದ ಕಾಲದಲ್ಲಿ ರೂಪಿಸಿದ್ದ ಯೋಜನೆಗಳು ನನೆಗುದಿಗೆ ಬಿದ್ದಿವೆ. ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗೆ ಅನುದಾನ ಬಿಡುಗಡೆ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಶಾಸಕರಾಗಿ ಆಯ್ಕೆಯಾದ ಕೂಡಲೇ ನನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿ ಮತ್ತು ನೂತನವಾಗಿ ಜಾರಿಗೊಳಿಸಲಿರುವ ಯೋಜನೆಗಳಿಗೆ ನೀಲನಕ್ಷೆ ಮತ್ತು ಅಂದಾಜು ವೆಚ್ಚದ ಪಟ್ಟಿ ತಯಾರು ಮಾಡಿಸಿದ್ದರು. ಬಹಿರಂಗವಾಗಿ ಯೋಜನೆಗಳ ವಿವರ ಪ್ರಕಟಿಸಿದ್ದರಿಂದ ಸಾರ್ವಜನಿಕರಲ್ಲಿ ಮತ್ತಷ್ಟು ನಿರೀಕ್ಷೆ ಗರಿಗೆದರಿದೆ.

ನಗರದ ಹೃದಯಭಾಗದಲ್ಲಿ ಕಳೆದ 10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ಅಪೂರ್ಣ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಾಧ್ಯವಾದಷ್ಟು ಬದಲಾವಣೆಗಳೊಂದಿಗೆ ನೂತನ ವಿನ್ಯಾಸ ರೂಪಿಸಿ ₹9ಕೋಟಿ ವೆಚ್ಚದಲ್ಲಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ನೀಲನಕ್ಷೆ ಮತ್ತು ಅಂದಾಜು ಪಟ್ಟಿ ತಯಾರಿಸಿದ್ದಾರೆ.

ಆದರೆ, ವರ್ಷ ಕಳೆದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ನಗರದ ಹೊರವಲಯದ ಶಿಡ್ಲಘಟ್ಟ ರಸ್ತೆಯಲ್ಲಿರುವ ವಾಲ್ಮೀಕಿ ಭವನದ ಕಥೆಯೂ ಇದೇ ಆಗಿದೆ. ಅದಕ್ಕೂ ಸಹ ಸಚಿವರು ಒಂದು ಎಕರೆ ಹೆಚ್ಚಿನ ಜಾಗ ಮಂಜೂರು ಮಾಡಿಸಿ, ₹3ಕೋಟಿ ವೆಚ್ಚದಲ್ಲಿ ಆಧುನಿಕ ಶೈಲಿ ನೂತನ ಭವನದ ನಿರ್ಮಾಣಕ್ಕೆ ನೀಲನಕ್ಷೆ ಮತ್ತು ವೆಚ್ಚದ ಅಂದಾಜು ಪಟ್ಟಿ ತಯಾರಿಸಿದ್ದರು. ಆದರೆ, ಕಾಮಗಾರಿ ಆರಂಭವಾಗಿಲ್ಲ.

ಕ್ಷೇತ್ರದಲ್ಲಿ ಈ ವರ್ಷದಿಂದ ನೂತನ ಎಂಜಿನಿಯರಿಂಗ್ ಕಾಲೇಜು ಆರಂಭಿಸಲಾಗುವುದು. ಜಮೀನು ಮಂಜೂರು ಆಗಿದ್ದು ₹60-70 ಕೋಟಿ ವೆಚ್ಚದಲ್ಲಿ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಚಿವರೇ ಪ್ರಕಟಿಸಿದ್ದರು.

ನಗರದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಿಸಲು ಕನಂಪಲ್ಲಿ ಕೆರೆ, ನೆಕ್ಕುಂದಿಕೆರೆ ಹಾಗೂ ಭಕ್ತರಹಳ್ಳಿ-ಅರಸೀಕೆರೆಯನ್ನು ತಲಾ ₹35ಕೋಟಿ ವೆಚ್ಚದಲ್ಲಿ ಪುನರುಜ್ಜೀವನ ಗೊಳಿಸಲಾಗುವುದು. ನೀರಿನ ಸಂಗ್ರಹ ದುಪ್ಪಟ್ಟುಗೊಳಿಸಲಾಗುವುದು. ನೀಲನಕ್ಷೆ, ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಚಿವರು ಭರವಸೆ ನೀಡಿದ್ದರು.

ಮಾಜಿ ಸಚಿವ ಎ.ಚೌಡರೆಡ್ಡಿ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದ ಕೋಚಿಮುಲ್ ಶೀಥಲ ಕೇಂದ್ರಕ್ಕೆ ಬೀಗಮುದ್ರೆ ಹಾಕಲಾಗಿದೆ. ಕಾಯಂ ನೌಕರರನ್ನು ಬೇರೆ ಕಡೆ ವರ್ಗ ಮಾಡಲಾಗಿದೆ. ದಿನಗೂಲಿ, ಗುತ್ತಿಗೆ ಆಧಾರದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ 40 ಮಂದಿ ಕಾರ್ಮಿಕರು ಬೀದಿಪಾಲಾಗಿದ್ದಾರೆ. ₹50 ಕೋಟಿ ವೆಚ್ಚದಲ್ಲಿ ಐಸ್ ಕ್ರೀಂ ಘಟಕ ತಯಾರಿಸಲಾಗುವುದು. ಆಗ ಮತ್ತೆ ಅವರಿಗೆ ಕೆಲಸ ಕೊಡಲಾಗುವುದು ಎಂದು ಭರವಸೆ ಅವರಿಗೆ ನೀಡಲಾಗಿದೆ. ಘಟಕ ಯಾವಾಗ ಆರಂಭವಾಗುತ್ತದೋ ಎಂದು ಕಾರ್ಮಿಕರು ಕಾಯುತ್ತಿದ್ದಾರೆ.

ತಾಲ್ಲೂಕಿಗೆ ಕೆ.ಸಿ.ವ್ಯಾಲಿ ನೀರು ಹರಿಸುವ ಬಗ್ಗೆ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ಹಿಂದಿನ ಸರ್ಕಾರದಲ್ಲಿ ಮೊದಲ ಹಂತದ ಯೋಜನೆಯಲ್ಲಿ ತಾಲ್ಲೂಕಿಗೆ ತಾರತಮ್ಯವಾಗಿತ್ತು. ಕೇವಲ 5 ಕೆರೆಗಳಿಗೆ ಮಾತ್ರ ನೀರು ಹರಿದಿತ್ತು. ನಂತರ ಅದು ಸ್ಥಗಿತಗೊಂಡಿದೆ. ಎರಡನೇ ಹಂತದ ಯೋಜನೆಯಲ್ಲಿ 50 ಕೆರೆಗಳನ್ನು ಸೇರಿಸಲಾಗಿದೆ ಎಂದು ಸಚಿವರು ಭರವಸೆ ನೀಡಿದ್ದರು. ಮೂರು ಹಂತದಲ್ಲಿ ಶುದ್ಧೀಕರಣವನ್ನು ಮಾಡಬೇಕು ಎನ್ನುವ ಒತ್ತಾಯ ಮಾಡಲಾಗಿತ್ತು. ಕೆ.ಸಿ.ವ್ಯಾಲಿ ಯೋಜನೆಯಲ್ಲೂ ಯಾವುದೇ ಆಶಾದಾಯಕ ಬೆಳವಣಿಗೆ ಕಂಡಿಲ್ಲ.

ತಾಲ್ಲೂಕಿನ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಒದಗಿಸಲು ಮಸ್ತೇನಹಳ್ಳಿ ಮತ್ತು ಸಿದ್ದೇಪಲ್ಲಿ ಕ್ರಾಸ್‌ನಲ್ಲಿ ಹಿಂದೆ ರೂಪಿಸಿದ್ದ ಕೈಗಾರಿಕಾ ಪ್ರಾಂಗಣ ಬೆಳವಣಿಗೆಯಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT