ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ಬಿಸಿಲ ಧಗೆಗೆ ಮಾವು ಇಳುವರಿ ಕುಸಿತ

ಚಿಂತಾಮಣಿ: ಬೆಲೆ ಏರಿಕೆಯ ನಿರೀಕ್ಷೆ
Published 8 ಮೇ 2024, 7:24 IST
Last Updated 8 ಮೇ 2024, 7:24 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಬಿಸಿಲಿನ ಧಗೆ ಮತ್ತು ಮಳೆ ಕೊರತೆಯಿಂದ ಹಣ್ಣುಗಳ ರಾಜ ಮಾವು ಬೆಳೆ ಇಳುವರಿ ಕುಸಿತ ಭೀತಿ ಕಾಡುತ್ತಿದೆ.

ಮಾವಿನ ಮರಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕಾಯಿಗಳು ಕಂಡು ಬರುತ್ತಿದ್ದು, ಶೇ 20–30 ರಷ್ಟು ಇಳುವರಿ ನಿರೀಕ್ಷಿಸಲಾಗುತ್ತಿದೆ.

ತಾಲ್ಲೂಕಿನಲ್ಲಿ ಸುಮಾರು 6,500 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವರ್ಷಕ್ಕೆ ಸರಾಸರಿ 7.18 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತಿತ್ತು.

ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯುವ ತಾಲ್ಲೂಕು ಇದಾಗಿದ್ದು, ಚಿಂತಾಮಣಿ ಮತ್ತು ಕೋಲಾರದ ಶ್ರೀನಿವಾಸಪುರ ತಾಲ್ಲೂಕನ್ನು ಮಾವಿನ ಮಡಿಲು ಎಂದು ಕರೆಯಲಾಗುತ್ತದೆ. ಇವೆರಡು ತಾಲ್ಲೂಕಿನಲ್ಲೂ ಮಳೆ ಕೊರತೆ ಹಾಗೂ ಅತ್ಯಧಿಕ ತಾಪಮಾನದಿಂದ ಮಾವು ಬೆಳೆ ನೆಲಕಚ್ಚಿದೆ.

ರಾಜ್ಯದ ಒಟ್ಟು ಮಾವಿನ ಉತ್ಪಾದನೆಯ ಅರ್ಧದಷ್ಟು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿದೆ.ತಾಲ್ಲೂಕಿನಲ್ಲಿ ಬಾದಾಮಿ, ರಸಪೂರಿ, ನೀಲಂ, ಬೆನಿಶಾ, ಮಲ್ಲಿಕಾ, ರಾಜಗೀರ ತೋತಾಪುರಿಯನ್ನು ಬೆಳೆಯಲಾಗುತ್ತದೆ.  ತೋತಾಪುರಿ ಸ್ವಲ್ಪ ಪ್ರಮಾಣದಲ್ಲಿ ಕಾಯಿಕಟ್ಟಿದ್ದು, ಉಳಿದ ಯಾವ ತಳಿಯೂ ಕಾಯಿಕಚ್ಚಿಲ್ಲ. ತೋಟಗಳಲ್ಲಿ ಕಾಯಿರಹಿತ ಖಾಲಿ ಮರಗಳು ಕಂಡುಬರುತ್ತವೆ.

ಸಾಮಾನ್ಯವಾಗಿ ಡಿಸೆಂಬರ್, ಜನವರಿಯಲ್ಲಿ ಮರಗಳು ಹೂ ಬಿಡುತ್ತವೆ. ತಡವಾದರೆ ಫೆಬ್ರವರಿ ಮೊದಲ ಮತ್ತು ಎರಡನೇ ವಾರದಲ್ಲಿ ಹೂ ಕಚ್ಚುವುದು ಮುಕ್ತಾಯವಾಗುತ್ತದೆ. ಈ ವರ್ಷ ಹೂವಿನಿಂದ ಕಂಗೊಳಿಸುತ್ತಿದ್ದವು. ಬೆಳೆಗಾರರು ಮತ್ತು ಅಧಿಕಾರಿಗಳು ಶೇ 70 ರಷ್ಟು ಇಳುವರಿಯ ನಿರೀಕ್ಷೆ ಮಾಡಿದ್ದರು. ಅತಿಯಾದ ಉಷ್ಣಾಂಶ ಮತ್ತು ಭೂಮಿಯಲ್ಲಿ ತೇವಾಂಶದ ಕೊರತೆಯ ಕಾರಣ ನಿರೀಕ್ಷೆ ಹುಸಿಯಾಗಿದೆ. ಹೂ ಮತ್ತು ಪಿಂಧೆಗಳು ಉದುರಿ ನೆಲಕಚ್ಚಿವೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಎಂ.ಗಾಯಿತ್ರಿ ಪ್ರಜಾವಾಣಿಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಶೇ 95 ರಷ್ಟು ಮಾವು ಬೆಳೆಯನ್ನು ಮಳೆಯಾಶ್ರಿತದಲ್ಲಿ ಬೆಳೆಯಲಾಗುತ್ತದೆ. ಸಕಾಲದಲ್ಲಿ ಮಳೆ ಬೀಳದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನೋಪಾಯಕ್ಕಾಗಿ ಮಾವು ಅವಲಂಬಿಸಿರುವ ಬೆಳೆಗಾರರಿಗೆ ಪ್ರಕೃತಿ ವಿಕೋಪದಡಿ ಬೆಳೆ ಹಾನಿಯಾಗಿರುವುದನ್ನು ಪರಿಗಣಿಸಿ ರಾಷ್ಟ್ರೀಯ ವಿಫತ್ತು ಪರಿಹಾರ ನಿಧಿಯಡಿ ಪರಿಹಾರ ನೀಡುವಂತೆ ಬೆಳೆಗಾರರು ಒತ್ತಾಯಿಸುತ್ತಾರೆ.

ಮಾರುಕಟ್ಟೆ ಕೊರತೆ, ಹಣ್ಣು ಶೇಖರಣೆಗೆ ಶೀಥಲಕೇಂದ್ರದ ಕೊರತೆ, ಹೆಚ್ಚಿದ ಸಾಗಣೆ ವೆಚ್ಚ ದಳ್ಳಾಳಿಗಳ ಹಾವಳಿಯಿಂದ ಮಾವು ಬೆಳೆ ಮತ್ತು ನಿರ್ವಹಣೆ ರೈತರಿಗೆ ಹೊರೆಯಾದೆ. ಇತರೆ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮಾವು ಬೆಳೆಯುವ ಭೂಮಿ ವಿಸ್ತೀರ್ಣ ಕಡಿಮೆಯಾಗುತ್ತಿದೆ.

ಅಂಕಿ ಅಂಶ

6,500 ಹೆಕ್ಟೇರ್

ತಾಲ್ಲೂಕಿನಲ್ಲಿ ಮಾವು ಬೆಳೆಯುವ ಪ್ರದೇಶ

7.18 ಲಕ್ಷ ಮೆಟ್ರಿಕ್ ಟನ್

ವರ್ಷಕ್ಕೆ ಸರಾಸರಿ ಮಾವು ಉತ್ಪಾದನೆ

ಶೇ 95 

ಮಳೆಯಾಶ್ರಿತದಲ್ಲಿ ಬೆಳೆಯುವ ಮಾವು

ಶೇ 70–80

ಈ ಬಾರಿಯ ಮಾವು ಬೆಳೆ ಕುಸಿತ

ಜಿಲ್ಲೆಯಲ್ಲಿ ಕಳೆದ ವರ್ಷ ಶೇ 70-80 ರಷ್ಟು ಇಳುವರಿ ಬಂದಿತ್ತು. ಆದರೆ ಉತ್ತಮ ಗುಣಮಟ್ಟ ಹೊಂದಿರಲಿಲ್ಲ. ಈ ವರ್ಷ ಮಳೆಯ ಕೊರತೆ ಮತ್ತು ಅಧಿಕ ತಾಪಮಾನದಿಂದ ಶೇ 30 ರಷ್ಟು ಇಳುವರಿ ನೀರೀಕ್ಷಿಸಲಾಗುತ್ತಿದೆ. ಬೆಳೆಗಾರರಿಗೆ ನಷ್ಟವಾಗಿದೆ.

-ಎಂ.ಗಾಯಿತ್ರಿ ಉಪನಿರ್ದೇಶಕಿ ತೋಟಗಾರಿಕೆ ಇಲಾಖೆ

ಬೆಲೆ ಕುಸಿತ ಕಳೆದ ವರ್ಷ ಮಳೆ ಕೈಕೊಟ್ಟಿತ್ತು. ಭೂಮಿಯಲ್ಲಿ ತೇವಾಂಶ ಇಲ್ಲ. ಅಧಿಕ ಬಿಸಿಗಾಳಿಯಿಂದ ಗಾಳಿಯಲ್ಲೂ ತೇವಾಂಶವಿಲ್ಲ. ಹೀಗಾಗಿ ಮರಗಳಲ್ಲಿದ್ದ ಪಿಂಧೆಗಳು ಉದುರಿದವು. ಈಗ ಇಳುವರಿ ಕುಸಿಯಲಿದ್ದು ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬೆಲೆ ಕುಸಿತದ ವ್ಯಾಪಾರಿಗಳು ತೋಟಗಳ ಕಡೆ ಕಾಲಿಡುತ್ತಿಲ್ಲ. ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯವಿಲ್ಲ ಲೋಕೇಶಬಾಬು ಮಾವು ಬೆಳೆಗಾರ ಪರಿಹಾರ ಘೋಷಿಸಿ ಸಾಮಾನ್ಯವಾಗಿ ಪ್ರತಿವರ್ಷ ಗರಿಷ್ಠ 34 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಈ ವರ್ಷ 38-40 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಬರಗಾಲ ಮತ್ತು ಅತಿಯಾದ ತಾಪಮಾನದಿಂದ ಮಾವು ಬೆಳೆಯ ಇಳುವರಿ ಕಡಿಮೆಯಾಗಿದೆ. ಶೇ 20 ರಷ್ಟು ಇಳುವರಿ ದೊರೆಯುವುದಿಲ್ಲ. ಬೆಳೆಗಾರರು ಉಳಿಯಬೇಕಾದರೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಸೀಕಲ್ ರಮಣಾರೆಡ್ಡಿ ಮಾವು ಬೆಳೆಗಾರ ಹಾಗೂ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT