ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಆರೋಗ್ಯ ಲೆಕ್ಕಿಸದೆ 105 ದಿನಗಳ ರಥಯಾತ್ರೆ ಮಾಡುತ್ತಿದ್ದೇನೆ: ಎಚ್‌ಡಿಕೆ

Last Updated 24 ನವೆಂಬರ್ 2022, 4:15 IST
ಅಕ್ಷರ ಗಾತ್ರ

ಚಿಂತಾಮಣಿ: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆಯು ಬುಧವಾರ ತಾಲ್ಲೂಕು ಪ್ರವೇಶಿಸಿತು. ಈ ವೇಳೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ಧೂರಿಯಾಗಿ ಯಾತ್ರೆಯನ್ನು ಸ್ವಾಗತಿಸಿದರು. ಸೇಬಿನ ಹಾರ ಹಾಕುವ ಮೂಲಕ ಜಯಕಾರ ಮೊಳಗಿಸಿದರು.

ಶ್ರೀನಿವಾಸಪುರ ತಾಲ್ಲೂಕಿನಿಂದ ಬಂದ ಕುಮಾರಸ್ವಾಮಿ ಅವರಿಗೆ ಚಿಂತಾಮಣಿ-ಮದನಪಲ್ಲಿ ರಸ್ತೆಯಲ್ಲಿ ತಾಲ್ಲೂಕಿನ ಗಡಿಗೆ ಪ್ರವೇಶವಾದ ಕೂಡಲೇ ಶಾಸಕ ಎಂ.ಕೃಷ್ಣಾರೆಡ್ಡಿ ಶಾಲು ಹೊದಿಸಿ, ಪೇಟ ತೊಡಿಸಿ ಸ್ವಾಗತ ಕೋರಿದರು. ಅಲ್ಲಿಂದ ನೇರವಾಗಿ ಕೈವಾರಕ್ಕೆ ಯಾತ್ರೆ ಬಂದಿತು.

ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ರಥಯಾತ್ರೆ ತಾಲ್ಲೂಕಿನಲ್ಲಿ ಸಂಚರಿಸಲು ಚಾಲನೆ ನೀಡಿದರು. ಗ್ರಾಮದ ಸ್ಪಂದನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ನಂತರ ಗ್ರಾಮದ ಹಜರತ್ ಸೈಯದ್ ಇಬ್ರಾಹಿಂ ಶಾವಲಿ, ಹಜರತ್ ಸೈಯದ್ ಮಖ್ದುಂ ಶಾವಲಿ ದರ್ಗಾಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ರಸ್ತೆಯುದ್ದಕ್ಕೂ ‌ಪೂರ್ಣಕುಂಭ ಸ್ವಾಗತ, ಹೂಮಳೆ, ಬಾರಿ ಗಾತ್ರದ ಹಾರ, ಸೇಬಿನ ಹಾರಗಳನ್ನು ಜೆಸಿಬಿ ಮೂಲಕ ಹಾಕಲಾಯಿತು. ತೆರೆದ ವಾಹನದಲ್ಲಿ ರೋಡ್ ಶೋ, ಅಪಾರ ಜನಸ್ತೋಮ, ಮುಖ್ಯ ಗ್ರಾಮಗಳಲ್ಲಿ ಕುಮಾರಸ್ವಾಮಿ ಭಾಷಣ. ಇವು ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಂಚರಿಸಿದ ಸಂದರ್ಭದಲ್ಲಿ ಕಂಡು ಬಂದ ನೋಟಗಳಾಗಿದ್ದವು.

ಮಳೆಯಲ್ಲೇ ಭಾಷಣ: ಕೈವಾರದಲ್ಲಿ ಭಾಷಣ ಮಾಡುತ್ತಿದ್ದಂತೆ ಜೋರು ಮಳೆ ಸುರಿಯತೊಡಗಿತು. ಮಳೆಯಲ್ಲೆ ಮಾತನಾಡಿದ ಕುಮಾರಸ್ವಾಮಿ, ನಾಡಿನ ಜನರ ಅಭಿವೃದ್ಧಿಗಾಗಿ ಆರೋಗ್ಯವನ್ನು ಲೆಕ್ಕಿಸದೆ 105 ದಿನಗಳ ಕಾಲ ರಥಯಾತ್ರೆ ಮಾಡುತ್ತಿದ್ದೇನೆ ಎಂದರು.

ಪ್ರತಿ ಕುಟುಂಬವು ನೆಮ್ಮದಿ, ಸ್ವಾಭಿಮಾನದಿಂದ ಬದುಕಬೇಕು. ಪ್ರತಿ ಕುಟುಂಬಕ್ಕೂ ಉಚಿತ ಶಿಕ್ಷಣ, ಉಚಿತ ಆರೋಗ್ಯ , ರೈತರನ್ನು ಸಾಲದಿಂದ ಮುಕ್ತಿಗೊಳಿಸುವ ಯೋಜನೆ, ಯುವಜನರಿಗೆ ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ, ವಸತಿಹೀನರಿಗೆ ಮನೆಕಟ್ಟಿಸಿಕೊಡುವುದು ಪಂಚರತ್ನ ಯೋಜನೆಯ ಚಿಂತನೆಯಾಗಿದೆ. ಒಂದು ಬಾರಿ ಜೆಡಿಎಸ್ ಗೆ ಪೂರ್ಣ ಬಹುಮತದಿಂದ ಅಧಿಕಾರ ನೀಡಿದರೆ 5 ವರ್ಷಗಳಲ್ಲಿ 5 ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.

ಕೈವಾರ ಕ್ರಾಸ್, ಪೆರಮಾಚನಹಳ್ಳಿ, ಚಿನ್ನಸಂದ್ರದ ಮೂಲಕ ರಥಯಾತ್ರೆಯು ಚಿಂತಾಮಣಿ ತಲುಪಿತು. ಚಿನ್ನಸಂದ್ರ ಮತ್ತು ಚಿಂತಾಮಣಿಯಲ್ಲಿ ಮಾತನಾಡಿದ ಅವರು, ಕೋವಿಡ್, ಅತಿವೃಷ್ಟಿ ನಂತರ ಸಾರ್ವಜನಿಕರು, ರೈತರು, ತಾಯಂದಿರು ಯಾರು ನೆಮ್ಮದಿಯಿಂದ ಇಲ್ಲ. ಅನೇಕ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಆ ಸಂಕಷ್ಟಗಳನ್ನು ದೂರ ಮಾಡಲು ಬಿಜೆಪಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲಬಡವರ ಭವಿಷ್ಯಕ್ಕೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಕೈಗಾರಿಕೆ, ದೊಡ್ಡ ದೊಡ್ಡ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿಲ್ಲ ಎಂದರು.

ಯಾತ್ರೆಯುಚಿಂತಾಮಣಿಯಿಂದ ಕಾಗತಿ ಮೂಲಕ ಮುರುಗಮಲ್ಲ ತಲುಪಿತು. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕು, ಶಾಸಕ ಎಂ.ಕೃಷ್ಣಾರೆಡ್ಡಿ ಮಂತ್ರಿ ಆಗಬೇಕು ಎಂದು ಕಾರ್ಯಕರ್ತರು ಮುರುಗಮಲ್ಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುರುಗಮಲ್ಲದಿಂದ ಯಗವಕೋಟೆ, ಎಂ.ಗೊಲ್ಲಹಳ್ಳಿ,ಬಟ್ಲಹಳ್ಳಿ, ಇರಗಂಪಲ್ಲಿ, ಸಿದ್ದೇಪಲ್ಲಿ ಕ್ರಾಸ್, ಚಿಕ್ಕರೆಡ್ಡಿಹಳ್ಳಿ, ಬೂರಗಮಾಕಲಹಳ್ಳಿ, ಮಾಡಿಕೆರೆ ಕ್ರಾಸ್, ಕುರುಟಹಳ್ಳಿಯಲ್ಲಿ ರಥಯಾತ್ರೆ ಸಂಚರಿಸಿತು.

ಶಾಸಕ ಎಂ.ಕೃಷ್ಣಾರೆಡ್ಡಿ, ಪಕ್ಷದ ಪರಿಶಿಷ್ಟ ಜಾತಿ, ಪಂಗಡ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ವಿ.ಅಮರ್, ತಾಲ್ಲೂಕು ಘಟಕದ ಅಧ್ಯಕ್ಷ ಬೈರಾರೆಡ್ಡಿ ಹಾಗೂ ಮುಖಂಡರು ಇದ್ದರು.

ಅಧಿಕಾರಕ್ಕೆ ಬಂದರೆ ‌ಕೃಷ್ಣಾರೆಡ್ಡಿ ಮಂತ್ರಿ

ಶಾಸಕ ಎಂ.ಕೃಷ್ಣಾರೆಡ್ಡಿಗೆ 2 ಬಾರಿ ಮತ ನೀಡುವ ಮೂಲಕ ಚಿಂತಾಮಣಿ ಇತಿಹಾಸದಲ್ಲಿ ರಾಜಕೀಯ ಪರ್ವವನ್ನೇ ಬದಲಾಯಿಸಿದ್ದೀರಿ. 2023ರಲ್ಲಿಯೂ ಮತ ನೀಡಿ 3ನೇ ಬಾರಿಗೆ ಜಯಗಳಿಸುವಂತೆ ಮಾಡಿದರೆ, ನಾನು ಅವರನ್ನು ಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

25 ಸಾವಿರ ಚೆಕ್ ನೀಡಿದ ರೈತ

ಚಿಂತಾಮಣಿ ತಾಲ್ಲೂಕಿನ ದೊಡ್ಗಂಜೂರು ಗ್ರಾಮದ ನಾರಾಯಣಸ್ವಾಮಿ ಅವರ ಪುತ್ರ ಚಂದ್ರಶೇಖರ್ ರಥಯಾತ್ರೆಗಾಗಿ ಕುಮಾರಸ್ವಾಮಿ ಅವರಿಗೆ ₹ 25 ಸಾವಿರದ ಚೆಕ್ ನೀಡಿದರು. ‘ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಸಾಲ ಮನ್ನಾ ಮಾಡಿದ್ದೆ. ಆಗ ಚಂದ್ರಶೇಖರ್ ಅವರ ₹ 2 ಲಕ್ಷ ಸಾಲ ಮನ್ನಾ ಆಗಿತ್ತು’ ಎಂದು ಎಚ್‌ಡಿಕೆ ಹೇಳಿದರು.

ಚಿನ್ನಸಂದ್ರದಲ್ಲಿ ಗ್ರಾಮ ವಾಸ್ತವ್ಯ

ಬುಧವಾರ ರಾತ್ರಿ ಎಚ್‌.ಡಿ.ಕುಮಾರಸ್ವಾಮಿ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರದಲ್ಲಿ ಗ್ರಾಮ ವಾಸ್ತವ್ಯ ನಡೆಸಿದರು. ರಾತ್ರಿ ಗ್ರಾಮಕ್ಕೆ ಬಂದ ಅವರನ್ನು ಗ್ರಾಮಸ್ಥರು ಸ್ವಾಗತಿಸಿದರು.

ಸಿದ್ದರಾಮಯ್ಯನಿಂದ ಬಿಜೆಪಿ ಅಧಿಕಾರಕ್ಕೆ

ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ಸಿದ್ಧರಾಮಯ್ಯ ಕೊಡುಗೆಯಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಸ್ಥಳೀಯ ಮುಖಂಡರು ಕಾರಣರಾಗಿದ್ದಾರೆ. ಈಗ ಮುಸ್ಲಿಮರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಟೀಕಿಸಿದರು.

ಸರ್ಕಾರಿ ಶಾಲೆ ತೊರೆದ 1.62 ಲಕ್ಷ ಮಕ್ಕಳು

ಚಿಂತಾಮಣಿ: ರಾಜ್ಯದಲ್ಲಿ ಪ್ರಸಕ್ತ ವರ್ಷ 1.62 ಲಕ್ಷ ವಿದ್ಯಾರ್ಥಿಗಳು ಸರ್ಕಾರಿಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ದೂರಿದರು.

ಸರ್ಕಾರಿ ಶಾಲೆಗಳಲ್ಲಿಸರಿಯಾದ ಮೂಲ ಸೌಲಭ್ಯ ಇಲ್ಲ. ಶಾಲೆ ಮತ್ತು ವಿದ್ಯಾಸಂಸ್ಥೆಗಳಲ್ಲಿಬಿಜೆಪಿ ಶಾಂತಿಯ ವಾತಾವರಣ ಕದಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT