ಗಬ್ಬೆದ್ದ ಚರಂಡಿಗೆ ಬೇಸತ್ತ ನಾಗರಿಕರು

7
ನಗರದ 3ನೇ ವಾರ್ಡ್‌ ವ್ಯಾಪ್ತಿಯ ದರ್ಗಾ ಮೊಹಲ್ಲಾ ಪ್ರದೇಶದ ಚರಂಡಿಯಲ್ಲಿ ಮಡುಗಟ್ಟಿದ ತ್ಯಾಜ್ಯ, ಮಲ

ಗಬ್ಬೆದ್ದ ಚರಂಡಿಗೆ ಬೇಸತ್ತ ನಾಗರಿಕರು

Published:
Updated:
Deccan Herald

ಚಿಕ್ಕಬಳ್ಳಾಪುರ: ಮನೆಗಳ ಎದುರು ಮಡುಗಟ್ಟಿ ನಿಂತ ತ್ಯಾಜ್ಯದ ನೀರು, ಬೆನ್ನತ್ತುವ ಸೊಳ್ಳೆ..ಈ ಅವ್ಯವಸ್ಥೆಯಿಂದ ನಗರದ ನಾಗರಿಕರು ಅನಾರೋಗ್ಯದ ಭೀತಿ ಎದುರಿಸುತ್ತಿದ್ದಾರೆ.

ಇದು ನಗರದ 3ನೇ ವಾರ್ಡ್‌ ವ್ಯಾಪ್ತಿಯ ದರ್ಗಾ ಮೊಹಲ್ಲಾ ಪ್ರದೇಶದಲ್ಲಿ ಕಂಡುಬರುವ ಚಿತ್ರಣ. ಎರಡು ತಿಂಗಳಿಂದೆ 1ನೇ ಕ್ರಾಸ್‌ ಬಳಿ ಹೊಸದಾಗಿ ನಿರ್ಮಾಣವಾಗಿರುವ ಚರಂಡಿಯಲ್ಲಿ ತ್ಯಾಜ್ಯ ಮಡುಗಟ್ಟಿದೆ. ನಾಯಿ, ಹಂದಿಗಳ ಆವಾಸ ತಾಣವಾಗಿದೆ. ಹಲವು ಸಾಂಕ್ರಾಮಿಕ ರೋಗಗಳು ಹರಡುವ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.

ಈ ಹಿಂದೆ ಇಲ್ಲಿ ಅನೇಕರು ಮನೆಯ ಶೌಚಾಲಯದ ಸಂಪರ್ಕವನ್ನು ಒಳ ಚರಂಡಿ ಮಾರ್ಗ (ಯುಜಿಡಿ) ಬಿಟ್ಟು, ಮುಖ್ಯ ಚರಂಡಿಗೆ ಅಳವಡಿಸಿದ್ದರು. ಇಲ್ಲಿಗೆ ಭೇಟಿ ನೀಡಿದ ಅಧಿಕಾರಿಗಳು ಚರಂಡಿಯಲ್ಲಿ ಮಲವನ್ನು ನೋಡಿ, ‘ಹೀಗೆ ಮಾಡಿದರೆ ಶೌಚಾಲಯ ಸಂಪರ್ಕ ಕಡಿತಗೊಳಿಸುತ್ತೇವೆ’ ಎಂದು ಎಚ್ಚರಿಸಿದರು. ಅಲ್ಲದೆ ಹೊಸದಾಗಿ ಚರಂಡಿ ನಿರ್ಮಿಸಿದರು. ಆದರೂ ಸ್ಥಿತಿ ಮಾತ್ರ ಇಂದಿಗೂ ಬದಲಾಗಿಲ್ಲ.

‘ನಗರಸಭೆಯವರು ಜನರಲ್ಲಿ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿಲ್ಲ. ಚರಂಡಿಯ ದುರ್ನಾತ ದಿನೇ ದಿನೇ ಹೆಚ್ಚುತ್ತಿದೆ. ಎರಡು ತಿಂಗಳಿನಿಂದ ಮಡುಗಟ್ಟಿ ಕಕ್ಕಸದ ತ್ಯಾಜ್ಯದ ದುರ್ನಾತಕ್ಕೆ ಸ್ಥಳೀಯರು, ವಿದ್ಯಾರ್ಥಿಗಳು ಮೂಗು ಮುಚ್ಚಿ ಓಡಾಡುತ್ತಿದ್ದಾರೆ.  ಈಗ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳ ಮಾಲೀಕರ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ. ಒಮ್ಮೆಯೂ ನಗರಸಭೆ, ಆರೋಗ್ಯ ಇಲಾಖೆಯ ಸ್ಥಳೀಯರನ್ನು ಎಚ್ಚರಿಸುವ ಗೋಜಿಗೆ ಹೋಗಿಲ್ಲ’ ಎಂದು 3ನೇ ವಾರ್ಡ್‌ ನಿವಾಸಿ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

‘ನಮಗೆ ಇಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ನೀರು ಮಡುಗಟ್ಟಿ ನಿಲ್ಲುವುದು ದೊಡ್ಡ ಸಮಸ್ಯೆ. ಅನೇಕ ವರ್ಷಗಳಿಂದ ಈ ಕಷ್ಟ ಎದುರಿಸುತ್ತಿದ್ದೇವೆ. ಇನ್ನೂ ಚರಂಡಿ ಪೂರ್ಣಗೊಂಡಿಲ್ಲ. ಆಗಲೇ ಚರಂಡಿಯಲ್ಲಿ ಮಲ ತೇಲಾಡುತ್ತಿದೆ. ಇಂತಹ ಕೊಳಕು ಸ್ಥಿತಿ ಇದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ದುರ್ನಾತ. ಸೊಳ್ಳೆ ಕಾಟ. ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಿದೆ. ಜೋರು ಮಳೆ ಬಿದ್ದರೆ ತ್ಯಾಜ್ಯ ನೀರು ದರ್ಗಾ ಮೊಹಲ್ಲಾ ಮುಖ್ಯ ರಸ್ತೆಯಲ್ಲಿ ಹರಿದು ಮನೆಗಳಿಗೆ ನುಗ್ಗುತ್ತವೆ. ಈಗಲೇ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳು ಎಚ್ಚೆತ್ತು ತ್ಯಾಜ್ಯ ಹೊರ ತೆಗೆಯಬೇಕು. ಚರಂಡಿಗೆ ಮಲ ಬಿಡದಂತೆ ಎಚ್ಚರಿಸಬೇಕು’ ಎಂದು ಆಗ್ರಹಿಸಿದರು.

‘ನಗರದಾದ್ಯಂತ ಸ್ವಚ್ಛತೆ ಮರೀಚಿಕೆಯಾಗಿದೆ. ಅದರಲ್ಲೂ ಬಡಜನರು ವಾಸಿಸುವ ಕೊಳಚೆ ಪ್ರದೇಶದಲ್ಲಿ ಹೇಳಬಾರದಷ್ಟು ಗಲೀಜು ಇದೆ. ಕೂಲಿನಾಲಿ ಮಾಡಿ ಬದುಕುವ ಜನರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ನಗರಸಭೆ ಮತ್ತು ಆರೋಗ್ಯ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿವೆ. ಇನ್ನಾದರೂ ಸ್ವಚ್ಛತೆಯ ವಿಚಾರವಾಗಿ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಸಮಾನ ಮನಸ್ಕರ ವೇದಿಕೆ ಸದಸ್ಯ ಯಲುವಹಳ್ಳಿ ಸೊಣ್ಣೇಗೌಡ ಆಗ್ರಹಿಸುವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !