ಸೋಮವಾರ, ನವೆಂಬರ್ 30, 2020
24 °C

‘ಅಂಗವಿಕಲರ ಪ್ರಗತಿಗೆ ಬದ್ಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ‘ಅಂಗವಿಕಲರು ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದಾರೆ. ಅವರ ಬದುಕಿನಲ್ಲಿ ಹೊಸ ಚೈತನ್ಯ ಕಾಣುವ ನಿಟ್ಟಿನಲ್ಲಿ ಅಗತ್ಯ ಪ್ರೋತ್ಸಾಹ ನೀಡಲು ಬದ್ಧ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಕೆಂಪರಾಜು ಹೇಳಿದರು.

ನಗರ ಹೊರವಲಯದ ಅವರ ಕಚೇರಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಅಂಗವಿಕಲರಿಗಾಗಿ ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ 2,600ಕ್ಕೂ ಹೆಚ್ಚು ಮಂದಿ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಎಲ್ಲರೂ ಸ್ವಾವಲಂಬಿಗಳಾಗಿ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಎಲ್ಲರ ಬದುಕಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕೆ.ಆರ್. ಸ್ವಾಮಿ ಫೌಂಡೇಷನ್ ವತಿಯಿಂದ ಉಚಿತವಾಗಿ ಹೆಲ್ತ್‌‌ಕಾರ್ಡ್‌ ಮಾಡಿಸುವ ಚಿಂತನೆ ಹೊಂದಲಾಗಿದೆ ಎಂದರು.

ತಾಲ್ಲೂಕಿನ ಎಲ್ಲ ಅಂಗವಿಕಲರಿಗೆ ಹಂತ ಹಂತವಾಗಿ ಈ ಸೌಲಭ್ಯ ಕಲ್ಪಿಸಲಾಗುವುದು. ಸಹಾಯಧನ ಪಡೆದಂತಹ ಪ್ರತಿಯೊಬ್ಬರೂ ಸ್ಥಳೀಯ ಮಟ್ಟದಲ್ಲಿ ಒಮ್ಮತದಿಂದ ನಮ್ಮ ಕಾರ್ಯಕರ್ತರ ಜತೆ ಕೈಜೋಡಿಸಿ ಕಾರ್ಯ ನಿರ್ವಹಿಸಬೇಕಾಗಿದೆ. ತಾಲ್ಲೂಕಿನಲ್ಲಿ ನಿರಂತರವಾಗಿ ಈ ಸೇವೆ ಮುಂದುವರಿಸಿಕೊಂಡು ಹೋಗಲು ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದು ಹೇಳಿದರು. 

ಅಂಗವಿಕಲರು ಸಮಾಜದ ಎಲ್ಲ ವರ್ಗದ ಜನರಂತೆ ಬದುಕಲು ಸಾಧ್ಯವಾಗದಿದ್ದರೂ ತಮ್ಮಲ್ಲಿರುವ ಬದ್ಧತೆ ಮತ್ತು ಕಾರ್ಯದಕ್ಷತೆಯಿಂದ ಸ್ವಾವಲಂಬಿ ‌ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕಿದೆ ಎಂದರು. 

ಅಂಗವಿಕಲರ ಸಂಘದ ಅಧ್ಯಕ್ಷ ಮಧುಸೂದನ್ ಮಾತನಾಡಿ, ತಾಲ್ಲೂಕಿನ ಇತಿಹಾಸದಲ್ಲೇ ಮೊದಲ‌ ಬಾರಿಗೆ ಎಲ್ಲ ಅಂಗವಿಕಲರನ್ನು ಒಟ್ಟಿಗೆ ಸೇರಿಸಲಾಗಿದೆ. ಸಂಕಷ್ಟದಲ್ಲಿರುವ ಅವರ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ತಲಾ ₹ 2,000 ಸಹಾಯಧನ ಹಾಗೂ ದೀಪಾವಳಿ ಹಬ್ಬದ ವಿಶೇಷ ಉಡುಗೊರೆ ನೀಡುತ್ತಿರುವ ಕೆಂಪರಾಜು ಅವರ ಕಾರ್ಯ ಅರ್ಥಪೂರ್ಣವಾಗಿದೆ ಎಂದರು.  

ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ 1,300ಕ್ಕೂ ಹೆಚ್ಚು ಅಂಗವಿಕಲರಿಗೆ ಪ್ರೋತ್ಸಾಹ ಧನ ಹಾಗೂ ಉಡುಗೊರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಅಂಗವಿಕಲರ ಸಂಘದ ಉಪಾಧ್ಯಕ್ಷ ಅಶ್ವತ್ಥ್, ಮುಖಂಡರಾದ ‌ಗಂಗಾಧರಪ್ಪ, ನರೇಶ್ ರೆಡ್ಡಿ, ಮುದುಗೆರೆ ರಾಜಶೇಖರ, ವೇದಲವೇಣಿ ರಾಮು, ನಂಜುಂಡಪ್ಪ, ನಾರಾಯಣಪ್ಪ, ಸತೀಶ್, ಶಿವಣ್ಣ, ರಮೇಶ್ ನಾಯಕ್, ನಾಗರಾಜ್, ಶಿವಕುಮಾರ್, ವೇಣುಗೋಪಾಲ್, ಪ್ರಕಾಶ್, ನಾರಾಯಣಸ್ವಾಮಿ, ಗೋಪಾಲಯ್ಯ, ಗಂಗಾಧರ್ ಹಾಜರಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು