ಬುಧವಾರ, ಆಗಸ್ಟ್ 10, 2022
20 °C
ಕೇಂದ್ರ, ರಾಜ್ಯ ಸರ್ಕಾರದ ಆಡಳಿತದ ವೈಫಲ್ಯದಿಂದ ಜನಸಾಮಾನ್ಯರಿಗೆ ತೊಂದರೆ: ಆರೋಪ

ಬೆಲೆ ಏರಿಕೆ‌ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದ ವೈಫಲ್ಯದಿಂದಾಗಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿದೆ. ಜನರು ನೆಮ್ಮದಿ ಕಳೆದುಕೊಂಡಿದ್ದು ಬದುಕು ಬೀದಿ ಪಾಲಾಗಿದೆ. ಪ್ರಧಾನಿ ಮೋದಿಯ ಬಂಡವಾಳ ಬಯಲಾಗಿದೆ’ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ‌ಪ್ರತಿಭಟನೆಯಲ್ಲಿ ಮಾತನಾಡಿದರು.

ದೇಶದಲ್ಲಿ 2010 ರಿಂದ 2014ರವರೆಗೆ ಕಚ್ಚಾ ತೈಲದ ಬೆಲೆ ಜನರಿಗೆ ಅನುಕೂಲವಾಗುವಂತೆ ನಿಗದಿಯಾಗಿತ್ತು. ಅಗತ್ಯ ಆಹಾರ ಸಾಮಗ್ರಿಗಳು ಹಾಗೂ ಅಡುಗೆ ಎಣ್ಣೆಯ ಬೆಲೆಯೂ ಸಾಮಾನ್ಯ ಜನರ ಕೈಗೆಟುಕುವಂತಿತ್ತು. ಆದರೆ ಇಂದಿನ ಕೇಂದ್ರ ಸರ್ಕಾರವು ಜನರ ಜೀವನ ಶೈಲಿಯ ಬಗ್ಗೆ ಅರಿಯದೇ ವಿನಾ ಕಾರಣ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಹೇಳಿದರು.

ಇಂಧನ ನಿತ್ಯದ ಅಗತ್ಯ ವಸ್ತುವಾಗಿದೆ. ಇದರ ಬೆಲೆ ದಿನೇ ದಿನೇ ಏರುತ್ತಿರುವುದರಿಂದ ಸಾಮಾನ್ಯ ಬಡ ಹಾಗೂ ಕಾರ್ಮಿಕ ಕುಟುಂಬಗಳ‌ ಮೇಲೆ ಹೊರೆಯಾಗಿದೆ. ಇದರ ಜತೆಗೆ ಕೊರೊನಾ ಜನರ ಬದುಕಿನ ಮೇಲೆ ಬರೆ ಎಳೆದಿದೆ. ಅದರಿಂದ ಚೇತರಿಕೆ ಕಾಣದೆ ಕಂಗಾಲಾಗಿರುವ ಜನರು ದಿಕ್ಕು ಕಾಣದೆ ಸಂಷ್ಟದಲ್ಲಿದ್ದಾರೆ. ಇದರ ನಡುವೆ ಸರ್ಕಾರಗಳ ಬೆಲೆ ಏರಿಕೆಯ ಬಿಸಿಯು ದುಸ್ತರವಾಗಿದೆ ಎಂದರು.

ಕೊರೊನಾ ಮೊದಲನೇ ಅಲೆಯಿಂದಲೇ ತತ್ತರಿಸಿದ್ದ ಜನರಿಗೆ ಸರ್ಕಾರದ ವೈಫಲ್ಯ ಹಾಗೂ ಪೂರ್ವಯೋಜಿತ ಸಿದ್ಧತೆಯಿಲ್ಲದ ಕಾರಣ ಎರಡನೇ ಅಲೆಯಲ್ಲಿ ಸಾಕಷ್ಟು ಸಾವುನೋವು ‌ಕಾಣುವಂತಾಗಿದೆ. ಇದರ ಜತೆಗೆ ಆರೋಗ್ಯ ಸಚಿವರ ನಾಜೂಕುತನದಿಂದ ರಾಜ್ಯದ ಪರಿಸ್ಥಿತಿ ಅಯೋಮಯವಾಗಿದೆ ಎಂದು ದೂರಿದರು.

ಕೊರೊನಾ ‌ಸುಳಿಯಲ್ಲಿ ಸಿಲುಕಿರುವ ಜನತೆಗೆ ಬೆಲೆ ಏರಿಕೆಯ ಪರಿಣಾಮದಿಂದಾಗಿ ಕಣ್ಣ ಮುಂದೆಯೇ ಅಮಾಯಕ ಜನರ ಸಾವುಗಳನ್ನು ಕಾಣುವಂತಾಗಿದೆ. ಎರಡು ಮಂತ್ರಿಗಿರಿಯನ್ನು ಪಡೆದಿರುವ ಸಚಿವರ ಸಾಧನೆ ಇದೇನಾ? ನೈತಿಕತೆ ಇಲ್ಲದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಜನರ ಹಿತವನ್ನೇ ಮರೆತಿರುವ ಅವರು ಶೋಕಿದಾರರಾಗಿ ರಾಜ್ಯದಲ್ಲಿ ಓಡಾಡುತ್ತಿರುವುದು ನಾಚಿಕೆಗೇಡು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಕೆ.ಎಂ.ಗಾಯತ್ರಿ ಬಸವರಾಜ್, ಮುಖಂಡ ಬಿ.ಪಿ.ಅಶ್ವತ್ಥನಾರಾಯಣ ಗೌಡ, ಎಚ್.ಎನ್‌.ಪ್ರಕಾಶರೆಡ್ಡಿ, ವಿ.ರಮೇಶ್, ಆರ್.ಲೋಕೇಶ್, ಬೊಮ್ಮಣ್ಣ, ನಾರೆಪ್ಪರೆಡ್ಡಿ, ಎ.ಅರುಂಧತಿ, ಸುಮನ, ರೇಣುಕಾ, ಮಂಜುಳಾ, ಮಂಜುನಾಥ್, ಅಸ್ಲಾಂ, ವೇದಲವೇಣಿ ವೇಣು, ಕೃಷ್ಣಾರೆಡ್ಡಿ, ವೆಂಕಟರವಣ, ಕಿರಣ್, ವೆಂಕಟಾದ್ರಿ, ಪ್ರಕಾಶ್, ಯೂನಸ್, ನಜಂ, ರಮೇಶ್ ನಾಯಕ್, ಅಬ್ಬಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.