ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ತಡವಾಗುವುದೇ ಆಡಳಿತ ಸೌಧ ನಿರ್ಮಾಣ?

ಚೇಳೂರು, ಮಂಚೇನಹಳ್ಳಿಯಲ್ಲಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಬೇರೆ ಜಾಗ ನೋಡಲು ಸೂಚನೆ
Published 22 ಸೆಪ್ಟೆಂಬರ್ 2023, 6:09 IST
Last Updated 22 ಸೆಪ್ಟೆಂಬರ್ 2023, 6:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ಮತ್ತು ಚೇಳೂರಿನಲ್ಲಿ ‘ಆಡಳಿತ ಸೌಧ’ನಿರ್ಮಾಣಕ್ಕೆ ಈಗ ಗುರುತಿಸಿರುವ ಜಮೀನು ಕಡಿಮೆ ಇದೆ. ಈ ಕಾರಣದಿಂದ ಮತ್ತೆ ಬೇರೆ ಜಮೀನು ಗುರುತಿಸಲು ನಿರ್ಧರಿಸಲಾಗಿದೆ. ಇದರಿಂದ ‘ಆಡಳಿತ ಸೌಧ’ ನಿರ್ಮಾಣವಾಗುತ್ತದೆ ಎನ್ನುವ ಆಶಾವಾದವನ್ನು ಹೊಂದಿದ್ದ ಈ ತಾಲ್ಲೂಕುಗಳ ನಾಗರಿಕರಲ್ಲಿ ಈಗ ನಿರಾಸೆಯ ಕಾರ್ಮೋಡ ಆವರಿಸಿದೆ. ಆಡಳಿತ ಸೌಧ ನಿರ್ಮಾಣ ತಡವಾಗುವ ಸಾಧ್ಯತೆ ದಟ್ಟವಾಗಿದೆ.

ಈ ಎರಡೂ ನೂತನ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದಿದ್ದರೂ ಅಭಿವೃದ್ಧಿಯಿಂದ ಬಹುದೂರವೇ ಉಳಿದಿವೆ. ತಾಲ್ಲೂಕು ಕೇಂದ್ರ ಎಂದು ಹೆಸರು ಬದಲಾವಣೆ ಆಗಿದೆಯೇ ಹೊರತು, ಅಭಿವೃದ್ಧಿಯ ವಿಚಾರದಲ್ಲಿ ತಾಲ್ಲೂಕು ಮಟ್ಟದ ಚಹರೆ ಇಲ್ಲ. ಈ ಎರಡೂ ತಾಲ್ಲೂಕುಗಳ ವಿವಿಧ ಸಂಘಟನೆಗಳು ಆಡಳಿತ ಸೌಧ ನಿರ್ಮಾಣದ ವಿಚಾರವಾಗಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿಗಳನ್ನು ಸಲ್ಲಿಸಿದ್ದರು.

2019ರಲ್ಲಿ ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದವು. ಹೀಗೆ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷ ಪೂರ್ಣಗೊಳಿಸುವ ಹಂತದಲ್ಲಿವೆ.

2022ರ ಜುಲೈನಲ್ಲಿ ಚೇಳೂರು ಹೋಬಳಿಯ ಶೇರ್‌ಖಾನ್ ಕೋಟೆಯ ಸರ್ವೆ ನಂ. 47ರಲ್ಲಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ 9.10 ಎಕರೆ ಜಮೀನು ಗುರುತಿಸಲಾಗಿತ್ತು. ಆಡಳಿತ ಸೌಧ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸುವಂತೆ ಉಪವಿಭಾಗಾಧಿಕಾರಿ ಮತ್ತು ಬಾಗೇಪಲ್ಲಿ ತಹಶೀಲ್ದಾರರಿಗೆ ಸೂಚನೆ ನೀಡಲಾಗಿತ್ತು.

ಆದರೆ 2023ರ ಆಗಸ್ಟ್ 16ರಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಈ ವಿಚಾರವಾಗಿ ಚರ್ಚಿಸಿದ್ದಾರೆ. ಈಗಾಗಲೇ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಮಂಜೂರು ಮಾಡಿರುವ ಜಮೀನಿನ ವಿಸ್ತೀರ್ಣ ಕಡಿಮೆ ಇದೆ. ಬೇರೆ 10 ಎಕರೆ ಮೀರಿದ ಜಮೀನನ್ನು ಗುರುತಿಸಿ ಎಂದು ಬಾಗೇಪಲ್ಲಿ ತಹಶೀಲ್ದಾರರಿಗೆ ಸೂಚಿಸಿದ್ದಾರೆ.

ಮಂಚೇನಹಳ್ಳಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಬುದ್ದಿವಂತನಹಳ್ಳಿಯ ಸರ್ವೆ ನಂ 43ರಲ್ಲಿ 5 ಎಕರೆ ಜಮೀನನ್ನು 2022ರ ಮಾರ್ಚ್‌ನಲ್ಲಿ ಮಂಜೂರು ಮಾಡಲಾಗಿತ್ತು. ಆಡಳಿತ ಸೌಧ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸುವಂತೆ 2023ರ ಆಗಸ್ಟ್‌ನಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿತ್ತು. ಆದರೆ ಈ ವಿಚಾರವೂ ಸಹ ಕೆಡಿಪಿಯಲ್ಲಿ ಚರ್ಚೆಗೆ ಬಂದಿತ್ತು. ಮಂಚೇನಹಳ್ಳಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಮಂಜೂರು ಮಾಡಿರುವ ಜಮೀನಿನ ವಿಸ್ತೀರ್ಣ ಕಡಿಮೆ ಇದೆ. ಆದ್ದರಿಂದ ಬೇರೆ 10 ಎಕರೆ ಮೀರಿದ ಜಮೀನನ್ನು ಗುರುತಿಸಲು ಗೌರಿಬಿದನೂರು ತಹಶೀಲ್ದಾರರಿಗೆ ನಿರ್ದೇಶನ ಸಹ ನೀಡಲಾಗಿದೆ.

ಹೀಗೆ ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಈಗಾಗಲೇ ಗುರುತಿಸಿದ ಜಾಗದ ಬದಲು ಹೆಚ್ಚು ವಿಸ್ತೀರ್ಣ ಹೊಂದಿರುವ ಬೇರೊಂದು ಜಾಗವನ್ನು ಗುರುತಿಸುವಂತೆ ಸಚಿವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡೂ ತಾಲ್ಲೂಕುಗಳಲ್ಲಿ ಆಡಳಿತ ಸೌಧ ನಿರ್ಮಾಣ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ. 

ಬದಲಾಗದ ಚಹರೆ: ಈಗಾಗಲೇ ಚೇಳೂರಿನಲ್ಲಿ ತಾಲ್ಲೂಕು ಕಚೇರಿ ಉದ್ಘಾಟನೆಯಾಗಿದೆ. ಬಾಗೇಪಲ್ಲಿ ತಹಶೀಲ್ದಾರರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಕಳೆದ ಬಜೆಟ್‌ನಲ್ಲಿ ಚೇಳೂರು ತಾಲ್ಲೂಕು  ಅಭಿವೃದ್ಧಿಗೆ ಹಣ ಮೀಸಲಿಡಬಹುದು. ಗಡಿಭಾಗದ ತಾಲ್ಲೂಕಿಗೆ ಅಭಿವೃದ್ಧಿಯ ಯೋಜನೆಗಳು ದೊರೆಯಬಹುದು ಎನ್ನುವ ನಿರೀಕ್ಷೆ ಇಲ್ಲಿನ ಜನರದ್ದಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಚೇಳೂರು ತಾಲ್ಲೂಕು ಕೇಂದ್ರ ಎನಿಸಿದರೂ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಇನ್ನೂ ಪಂಚಾಯಿತಿ ಮಟ್ಟದ ಚಹರೆಯೇ ಇದೆ.

ಇತ್ತೀಚೆಗೆ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟನೆ ಆಗಿದೆ. ಆದರೆ ಇಲ್ಲಿಯವರೆಗೂ ತಾಲ್ಲೂಕು ಕಚೇರಿಗೆ ಯಾವುದೇ ಅಧಿಕಾರಿಗಳು ಸಹ ನೇಮಕವಾಗಿಲ್ಲ.

ಮಂಚೇನಹಳ್ಳಿಯದ್ದೂ ಇದೇ ಸ್ಥಿತಿ. ತಾಲ್ಲೂಕು ಆಸ್ಪತ್ರೆ, ತಾಯಿ ಮತ್ತು ಮಗುವಿನ ಆಸ್ಪತ್ರೆ ಮಂಜೂರಾಗಿದೆ. ಕಟ್ಟಡ  ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

2019ರಲ್ಲಿ ಈ ಎರಡೂ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದರೂ ಆಡಳಿತ ಸೌಧ ನಿರ್ಮಾಣಕ್ಕೆ ಜಾಗ ನೋಡಿದ್ದು ಮಾತ್ರ  2022 ಮತ್ತು 2023ರಲ್ಲಿ. ಆಡಳಿತ ಸೌಧ ನಿರ್ಮಾಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು, ಹೋರಾಟಗಾರರು ಚೇಳೂರಿನಲ್ಲಿ ಪ್ರತಿಭಟನೆಗಳನ್ನು ಸಹ ನಡೆಸಿದ್ದರು. ಜಿಲ್ಲಾಧಿಕಾರಿ ಅವರಿಗೆ ಮನವಿಗಳನ್ನು ಸಲ್ಲಿಸಿದ್ದರು.

ಆದರೆ, ಈಗ ಗುರುತಿಸಿದ್ದ ಜಾಗದ ಬದಲು ಮತ್ತೊಂದು ಜಾಗ ನೋಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸೂಚಿಸಿದ್ದಾರೆ. ಈಗ ಮತ್ತೆ ಜಾಗ ನೋಡಬೇಕಾದ ಹೊಣೆ ಅಧಿಕಾರಿಗಳದ್ದಾಗಿದೆ. ಜಾಗ ಯಾವಾಗ ದೊರೆಯುತ್ತದೆ. ಆಡಳಿತ ಸೌಧ ಯಾವಾಗ ನಿರ್ಮಾಣವಾಗುತ್ತದೆ ಎನ್ನುವ ಚರ್ಚೆ ಜೋರಾಗಿದೆ.

ಬಾಗೇಪಲ್ಲಿಯಲ್ಲಿ ಹೊಸ ಮಿನಿ ವಿಧಾನಸೌಧ

ಬಾಗೇಪಲ್ಲಿ ತಾಲ್ಲೂಕು ಕೇಂದ್ರದಲ್ಲಿ ಹೊಸದಾಗಿ ಮಿನಿ ವಿಧಾನಸೌಧ ನಿರ್ಮಿಸಲು ತೀರ್ಮಾನಿಸಲಾಗಿದೆ. ಸದ್ಯ ತಾಲ್ಲೂಕು ಆಡಳಿತ ಕಾರ್ಯನಿರ್ವಹಿಸುತ್ತಿರುವ ಸೌಧವನ್ನು 1999ರಲ್ಲಿ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈ ಆಡಳಿತ ಸೌಧ ಶಿಥಿಲವಾಗಿದೆ.

ಈ ಹಿಂದೆಯೇ ಹೊಸ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಹ ಸಲ್ಲಿಸಲಾಗಿತ್ತು.  ಸರ್ಕಾರವು ₹ 10 ಕೋಟಿಗಳಿಗೆ ಸೀಮಿತಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಿದ ನಂತರ ಪ್ರಸ್ತಾವನೆಯನ್ನು ಮರು ಸಲ್ಲಿಸುವಂತೆ ಸೂಚಿಸಿತ್ತು. ಹೊಸ ಮಿನಿವಿಧಾನ ಸೌಧ ನಿರ್ಮಾಣಕ್ಕೆ ಬಾಗೇಪಲ್ಲಿಯ ತಹಶೀಲ್ದಾರರಿಂದ ಪ್ರಸ್ತಾವ ಸಲ್ಲಿಕೆ ಆಗಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT