ಬುಧವಾರ, ಸೆಪ್ಟೆಂಬರ್ 23, 2020
26 °C
ಸೋಂಕಿನಿಂದ ಗುಣಮುಖರಾದ ಚಿಕ್ಕಬಳ್ಳಾಪುರದ 12ನೇ ವಾರ್ಡ್‌ ವ್ಯಾಪ್ತಿಯ ಇಸ್ಲಾಂಪುರ ನಿವಾಸಿ ಎ.ಸಮೀವುಲ್ಲಾ ಅವರ ಮನದಾಳ

ಕೋವಿಡ್‌ ಗೆದ್ದವರ ಕಥೆಗಳು | ಕೊರೊನಾ ಸೋಂಕು ದಾನದ ಗುಣ ಕಲಿಸಿತು

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಜೀವಕ್ಕೆ ಸಂಚಕಾರ ಬಂದಾಗ ನಮ್ಮೆಲ್ಲ ಆಸೆಗಳು ಅಳೆದು ಹೋಗುತ್ತವೆ. ನಮ್ಮಲ್ಲಿ ಎಷ್ಟೇ ದುಡ್ಡು, ಆಸ್ತಿ, ಅಂತಸ್ತು ಇರಲಿ ಅದ್ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಕೆಲವರು ನಮಗಾಗಿ ಮಾಡುವ ನಿಸ್ವಾರ್ಥ ಸೇವೆಯೇ ನಮ್ಮನ್ನು ಬದುಕಿಸುವುದು ಎಂಬ ಅರಿವು ಕೋವಿಡ್‌ನಿಂದಾಯಿತು. ಜೀವನ ಇರುವವರೆಗೂ ದಾನ ಧರ್ಮ ಮಾಡಬೇಕು ಎಂಬುದು ಕೋವಿಡ್ ಕಲಿಸಿತು’

ಕೋವಿಡ್ 19 ಸೋಂಕಿನಿಂದ ಗುಣಮುಖರಾದ ಚಿಕ್ಕಬಳ್ಳಾಪುರದ 12ನೇ ವಾರ್ಡ್‌ ವ್ಯಾಪ್ತಿಯ ಇಸ್ಲಾಂಪುರ ನಿವಾಸಿ ಎ.ಸಮೀವುಲ್ಲಾ ಅವರ ಮನದಾಳದ ಮಾತಿದು. ವ್ಯಾಪಾರದ ನಿಮಿತ್ತ ಬೆಂಗಳೂರಿಗೆ ಹೋದ ವೇಳೆ ಸೋಂಕು ತಗುಲಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ ಸಮೀವುಲ್ಲಾ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ..

 ಜುಲೈ 4 ರಂದು ಜ್ವರ ಕಾಣಿಸಿಕೊಂಡಿತು. ನಗರದ ಖಾಸಗಿ ವೈದ್ಯರೊಬ್ಬರ ಬಳಿ ನಾಲ್ಕು ದಿನ ಚಿಕಿತ್ಸೆ ಪಡೆದರೂ ಗುಣವಾಗಲಿಲ್ಲ. ಜುಲೈ 10 ರಂದು ರಾತ್ರಿ ಸುಸ್ತು ಜಾಸ್ತಿ ಆಯಿತು. ರಾತ್ರಿ 3ರ ಸುಮಾರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣಕ್ಕೆ ನಗರದ ಕೆಲ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಹೋದೆ. ಆದರೆ ಆಸ್ಪತ್ರೆಯವರು ಕೋವಿಡ್ ವರದಿ ಕೇಳಿ ದಾಖಲಿಸಿಕೊಳ್ಳಲು ನಿರಾಕರಿಸಿದರು.

ಬೇರೆ ದಾರಿ ಕಾಣದೆ ಬೆಳಿಗ್ಗೆ 4 ಸುಮಾರಿಗೆ ಜಿಲ್ಲಾ ಆಸ್ಪತ್ರೆಗೆ ಹೋಗಿ ದಾಖಲಾದೆ. ಜುಲೈ 11 ರಂದು ಬೆಳಿಗ್ಗೆ ಕ್ಷೀಪ್ರ (ರ್‍ಯಾಪಿಡ್) ಪರೀಕ್ಷೆ ಮಾಡಿಸಿದಾಗ ಕೋವಿಡ್‌ ಇರುವುದು ದೃಢವಾಯಿತು. ಮಧ್ಯಾಹ್ನ ಹೊತ್ತಿಗೆ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಿದರು.

ಆರಂಭದಲ್ಲಿ ನ್ಯೂಮೊನಿಯಾ ಸಮಸ್ಯೆ ಕಾಣಿಸಿಕೊಂಡಿತ್ತು. ಐದು ದಿನಗಳ ಹೊತ್ತಿಗೆ ಆರೋಗ್ಯ ಸುಧಾರಿಸಿತು. 11 ದಿನಗಳ ಬಳಿಕ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದೆ. ಎಲ್ಲರಂತೆ ಆರಂಭದಲ್ಲಿ ನನ್ನಲ್ಲೂ ಸಹಜವಾಗಿಯೇ ದಿಗಿಲು, ಭಯವಿತ್ತು. ಕುಟುಂಬದವರನ್ನೆಲ್ಲ ಪರೀಕ್ಷೆ ಮಾಡಿಸಿದೆ. ಯಾರಿಗೂ ಸೋಂಕಿಲ್ಲ ಎಂಬುದು ತಿಳಿದು ನೆಮ್ಮದಿಯಾಯಿತು.

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೋವಿಡ್‌ ವಯೋವೃದ್ಧರಿಗೆ, ಕಾಯಿಲೆಗಳಿಂದ ಬಳಲುವವರ ಪಾಲಿಗೆ ತುಸು ಕಷ್ಟವಾಗುತ್ತದೆ. ವಯಸ್ಕರರಿಗೆ ಪ್ರಾಣಾಪಾಯವಿಲ್ಲ. ಹೀಗಾಗಿ ನಾನು ಧೈರ್ಯದಿಂದ ಇದ್ದು, ಆತಂಕದಲ್ಲಿ ಇದ್ದವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಒಳ್ಳೆಯ ಅಡುಗೆ ಮಾಡಿಸಿ ನಮ್ಮ ವಾರ್ಡ್‌ನಲ್ಲಿದ್ದವರಿಗೆಲ್ಲ ತಲುಪಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು