ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಬಿಸಿಲ ಬೇಗೆಗೆ ರೈತರ ಬದುಕು ದುಸ್ತರ

ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಅನ್ನದಾತರು
Published 30 ಆಗಸ್ಟ್ 2023, 7:06 IST
Last Updated 30 ಆಗಸ್ಟ್ 2023, 7:06 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನಲ್ಲಿ ಮುಂಗಾರು ಮುಗಿದರೂ ನಿರೀಕ್ಷಿತ ಪ್ರಮಾಣದ ಮಳೆ ಬೀಳದ ಕಾರಣ ಬಿತ್ತಿದ ಬೀಜ ಮೊಳಕೆಯೊಡೆಯದೆ, ನೆಟ್ಟ ಪೈರು ಕಮರಿದ್ದು, ಬೆಳೆಗಳು‌ ಬಾಡಿವೆ. 

ವಿದ್ಯುತ್ ಲೋಡ್ ಶೆಡ್ಡಿಂಗ್ ನಡುವೆ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದ್ದು, ಜಾನುವಾರುಗಳಿಗೆ ಮೇವು ಒದಗಿಸಲು ರೈತರು ಹೈರಾಣರಾಗುತ್ತಿದ್ದಾರೆ. ತೀವ್ರ ಬರದ ಛಾಯೆಯ ನಡುವೆ ಜನರ ಬದುಕು ದುಸ್ತರವಾಗಿದೆ. ಬೇಸಿಗೆಯ ಉರಿ ಬಿಸಿಲನ್ನೂ ನಾಚಿಸುವಂತಹ ಬಿಸಿಲಿನ ಬೇಗೆಯಿಂದ ಜನ ತತ್ತರಿಸಿದ್ದಾರೆ.

ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಸಾಲ ಮಾಡಿ ಜಮೀನು ಹದಗೊಳಿಸಿಕೊಂಡು ಆರಂಭದಲ್ಲಿ ಬಿದ್ದ ಅತ್ಯಲ್ಪ‌ ಮಳೆಯಲ್ಲೇ ಬಿತ್ತನೆ ಮಾಡಿದ್ದರು. ಆದರೆ ಮಳೆ ಕಣ್ಣಾಮುಚ್ಚಾಲೆ ಮತ್ತು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯದಿಂದಾಗಿ ರೈತರ ಜಮೀನಿನಲ್ಲಿನ ಬೆಳೆಗಳು ಕಮರಿವೆ. ಬೇಸಾಯವನ್ನೇ ನಂಬಿಕೊಂಡ ರೈತರು ಪರ್ಯಾಯ ಮಾರ್ಗವಿಲ್ಲದೆ ಚಿಂತಿಸುವಂತಾಗಿದೆ. ಅಂತರ್ಜಲದ ಮಟ್ಟ ಕ್ಷೀಣಿಸುತ್ತಿದೆ. ಇಂಥ ಸಂಕಷ್ಟದಲ್ಲಿ ಸರ್ಕಾರ ಕೈ ಹಿಡಿಯುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ರೈತರು.

ತಾಲ್ಲೂಕಿನ ‌ವಿವಿಧೆಡೆ ರೈತರು ಈ ಬಾರಿ ಮುಂಗಾರು ‌ಮಳೆ ನಂಬಿಕೊಂಡು ಮುಸಕಿನ ಜೋಳ (19,125 ಹೆಕ್ಟೇರ್), ರಾಗಿ (2,184 ಹೆಕ್ಟೇರ್), ನೆಲಗಡಲೆ(687 ಹೆಕ್ಟೇರ್), ತೊಗರಿ(745 ಹೆಕ್ಟೇರ್), ಅವರೆ(630 ಹೆಕ್ಟೇರ್), ಅಲಸಂದೆ(60 ಹೆಕ್ಟೇರ್), ಹರಳು(46 ಹೆಕ್ಟೇರ್), ಕಬ್ಬು(130 ಹೆಕ್ಟೇರ್) ಸೇರಿದಂತೆ ಒಟ್ಟು 23,612 ಹೆಕ್ಟೇರ್ ಭೂಪ್ರದೇಶದ ಪೈಕಿ ಶೇ 66.45ರಷ್ಟು ಬೆಳೆ ನಾಟಿ ಮಾಡಲಾಗಿತ್ತು. ಆದರೆ ಪೈರುಗಳು ಬೆಳೆಯಲು ನೀರಿನ ಆಸರೆ ಇಲ್ಲದಂತಾಗಿದ್ದು, ಪೈರುಗಳನ್ನು ಕಂಡು ರೈತರು ಮರುಗುವಂತಾಗಿದೆ. 

ಕೃಷಿ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ ತಾಲ್ಲೂಕಿನಲ್ಲಿ ನೀರಾವರಿ ಮತ್ತು ಖುಷ್ಕಿ ಎರಡೂ ಸೇರಿ ಒಟ್ಟು 35,532 ಹೆಕ್ಟೇರ್ ಭೂಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ಮಳೆ ಅಭಾವದಿಂದಾಗಿ ಈ ಬಾರಿ 23,612 ಹೆಕ್ಟೇರ್ ಗುರಿ ಸಾಧಿಸಲಾಗಿದೆ.

ಮಳೆಯಿಲ್ಲದ ಕಾರಣ ಗ್ರಾಮೀಣ ‌ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ರೈತರು ಜಾನುವಾರು ಪೋಷಣೆಗೆ ಚಿಂತಿಸುವಂತಾಗಿದೆ. 

ತಾಲ್ಲೂಕಿನಲ್ಲಿ ಕೇವಲ 260 ಮಿ.ಮೀ ಮಳೆ

2023ರ ಜನವರಿ ಮೊದಲ ವಾರದಿಂದ ಆಗಸ್ಟ್ ತಿಂಗಳ ಎರಡನೇ ವಾರದವರೆಗೆ ಸರಾಸರಿ ಮಳೆಯ ಪ್ರಮಾಣ ಕಸಬಾ 244 ಮಿ.ಮೀ ಡಿ.ಪಾಳ್ಯ 293 ಮಿ.ಮೀ ಹೊಸೂರು 197 ಮಿ.ಮೀ ಮಂಚೇನಹಳ್ಳಿ 284 ಮಿ.ಮೀ ನಗರಗೆರೆ 246 ಮಿ.ಮೀ ಮತ್ತು ತೊಂಡೇಬಾವಿ 295 ಮಿ.ಮೀ ನಷ್ಟು ಮಳೆಯಾಗಿದೆ. ಸರಾಸರಿ ನಿರೀಕ್ಷಿತ ಮಳೆ ಪ್ರಮಾಣ 296 ಮಿ.ಮೀ ಆದರೆ ಇಲ್ಲಿಯವರೆಗೆ ಬಿದ್ದ ಮಳೆಯ ಪ್ರಮಾಣ ಕೇವಲ 260 ಮಿ.ಮೀ ಮಾತ್ರ. ಮುಂದಿನ ನಾಲ್ಕೈದು ದಿನ ಮಳೆ ಬೀಳುವ ಮುನ್ಸೂಚನೆಗಳಿಲ್ಲ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಎಂ.ಮೋಹನ್.

ಕಳೆದ ಒಂದೂವರೆ ತಿಂಗಳ ಹಿಂದೆ ಜಮೀನಿನಲ್ಲಿ ಜೋಳ ಮತ್ತು‌ ನೆಲಗಡಲೆ ಬಿತ್ತನೆ ಮಾಡಿದ್ದೇನೆ. ಬೀಜಗಳು ಮೊಳಕೆಯೊಡೆದು ಪೈರುಗಳಾಗಿವೆ. ಇತ್ತೀಚೆಗೆ ರಸಗೊಬ್ಬರ ಹಾಕಿದ್ದೆ. ಸಂಪೂರ್ಣ ಬೆಳೆ ನಾಶವಾಗಿದ್ದು ಸಾಲ ಮಾಡಿ ಹಾಕಿದ ಬಂಡವಾಳ ಕೈ ಕಚ್ಚುವ ಪರಿಸ್ಥಿತಿಯಲ್ಲಿದೆ
-ನಾರಾಯಣಪ್ಪ ರೈತ
ಒಂದೆಡೆ ಮಳೆಯ ಅಭಾವ ಮತ್ತೊಂದೆಡೆ ಲೋಡ್ ಶೆಡ್ಡಿಂಗ್ ಅವ್ಯವಸ್ಥೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಕುಡಿಯುವ ‌ನೀರಿಗೆ ಚಿಂತಿಸುವಂತಹ ಪರಿಸ್ಥಿತಿ ಎದುರಾಗಿದೆ
-ರತ್ನಮ್ಮ ರೈತ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT