ಮತದಾರರ ದಿನಾಚರಣೆ ವಿವಿಧ ಸ್ಪರ್ಧೆಗೆ ನಿರ್ಧಾರ

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನೇರವಾಗಿ ಹಾಗೂ ಆನ್ಲೈನ್ ಮೂಲಕ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಚಟುವಟಿಕೆ ಆಯೋಜಿಸುವ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮತದಾರ ಜಾಗೃತಿ ಚಟುವಟಿಕೆಗಳಲ್ಲಿ ಶಾಲಾ– ಕಾಲೇಜು ಹಂತದ ಮತದಾರರ ಸಾಕ್ಷರತಾ ಕ್ಲಬ್ಗಳು ಪರಿಣಾಮಕಾರಿಯಾಗಿವೆ. ಕೋವಿಡ್-19 ಹಿನ್ನೆಲೆಯಲ್ಲಿ ತರಗತಿಗಳು ಇಲ್ಲಿಯವರೆಗೆ ಪ್ರಾರಂಭವಾಗಿರಲಿಲ್ಲ. ಈಗ ಲಭ್ಯವಿರುವ ಎಲ್ಲಾ ರೀತಿಯ ತಂತ್ರಜ್ಞಾನದ ಮೂಲಕವೂ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಿಕ್ಷಣ ನೀಡುವುದು ಅಗತ್ಯವಿದೆ ಎಂದರು.
ಶಾಲೆ, ಪದವಿಪೂರ್ವ ಕಾಲೇಜು, ತಾಂತ್ರಿಕ ಶಿಕ್ಷಣ ಕಾಲೇಜುಗಳು, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ವಿಶ್ವವಿದ್ಯಾಲಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ವಿವಿಧ ಹಂತದಲ್ಲಿ ಪ್ರಬಂಧ ಸ್ಪರ್ಧೆ, ಭಿತ್ತಿಪತ್ರ ಕೊಲಾಜ್ ಮತ್ತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುವಂತೆ ಸೂಚಿಸಿದರು.
18 ರಿಂದ 20 ವರ್ಷ ತುಂಬಿದ ಯುವಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ನೋಟಾ ಅವಕಾಶ ಬಳಕೆಯ ವಿಧಾನ, ಅಂಗವಿಕಲ ಮತದಾರರಿಗೆ ಇರುವ ಸೌಲಭ್ಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಇ.ಎಲ್.ಸಿ. ಸ್ವೀಪ್ ರಾಜ್ಯ ಸಂಪನ್ಮೂಲ ವ್ಯಕ್ತಿ ಸತೀಶ್ ಕುಮಾರ್ ಮತನಾಡಿ, ಇ.ಎಲ್.ಸಿ ಚಟುವಟಿಕೆಗಳನ್ನು ಆನ್ಲೈನ್ ಮೂಲಕ ನಡೆಸುವ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಶ್, ಪದವಿಪೂರ್ವ ಶಿಕ್ಷಣ ಇಲಾಖೆಯ ಎ.ಎನ್. ಗೀತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.