ಸೋಮವಾರ, ಆಗಸ್ಟ್ 8, 2022
24 °C
ಎಚ್ಚರ ತಪ್ಪಿದಲ್ಲಿ ಮತ್ತೆ ಸೋಂಕು ಏರಿಕೆ ಆಗುವ ಸಾಧ್ಯತೆ: ಜಿಲ್ಲಾಧಿಕಾರಿ ಲತಾ

ಸೋಂಕು ಪ‍್ರಮಾಣ ಶೇ 5ಕ್ಕೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶೇ 35ರಷ್ಟಿದ್ದ ಕೊರೊನಾ ಸೋಂಕಿತರ ಪ್ರಮಾಣ ಶೇ 5ಕ್ಕೆ ಇಳಿಕೆಯಾಗಿದೆ. ಇದು ಸಂತಸದ ವಿಷಯ. ಎಲ್ಲರ ಸಹಕಾರದಿಂದ ಸೋಂಕು ಇಳಿಕೆ ಕಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಕೋವಿಡ್ ಪ್ರಮಾಣವನ್ನು ಶೇ 5ಕ್ಕೆ ಇಳಿಕೆ ಮಾಡಬೇಕು ಎನ್ನುವ ಗುರಿಯನ್ನು ಕಳೆದ ತಿಂಗಳ ಆರಂಭದಲ್ಲಿ ಹೊಂದಲಾಗಿತ್ತು. ಸೋಂಕು ಕಡಿಮೆಯಾದ ಮಾತ್ರಕ್ಕೆ ಹಾಗೂ ಸರ್ಕಾರ ಲಾಕ್‌ಡೌನ್‌ನಲ್ಲಿ ಕೆಲವು ರಿಯಾಯಿತಿಗಳನ್ನು ನೀಡಿದ ಮಾತ್ರಕ್ಕೆ ಜನರು ಎಚ್ಚರ ತಪ್ಪಬಾರದು. ಕೋವಿಡ್ ಮಾರ್ಗಸೂಚಿ
ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಚ್ಚರ ತಪ್ಪಿದಲ್ಲಿ ಮತ್ತೆ ಸೋಂಕು ಏರಿಕೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. 

ಚಿಂತಾಮಣಿ ತಾಲ್ಲೂಕಿನ ಕಡದಲಮರಿ, ಗೌರಿಬಿದನೂರು ತಾಲ್ಲೂಕಿನ ಮುದಲೋಡು, ಮೇಳ್ಯ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳನ್ನು ಶೂನ್ಯಕ್ಕೆ ತಂದಿವೆ. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ನಗರ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಸಕ್ರಿಯ ಪ್ರಕರಣಗಳು ಒಂದಂಕಿಯಲ್ಲಿವೆ. ವಾರದಲ್ಲಿ ಅವುಗಳನ್ನು ಶೂನ್ಯಕ್ಕೆ ತರಲಾಗುವುದು ಎಂದಿದ್ದಾರೆ.

ಜಿಲ್ಲೆಯಲ್ಲಿ 157 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,788 ಗ್ರಾಮಗಳಿವೆ. ಇದರಲ್ಲಿ 587 ಗ್ರಾಮಗಳು ಕೊರೊನಾ ಸೋಂಕಿಗೆ ಒಳಪಟ್ಟಿವೆ.  ಉಳಿದ 1,201 ಗ್ರಾಮಗಳನ್ನು ಕೊರೊನಾ ಮುಕ್ತ ಮಾಡಲಾಗಿದೆ. ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ 19 ವಾರ್ಡ್‌ಗಳು,  ಗೌರಿಬಿದನೂರು ನಗರಸಭೆ ಮತ್ತು ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ತಲಾ 5 ವಾರ್ಡ್‌ಗಳು ಕೊರೊನಾ ಮುಕ್ತವಾಗಿವೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 4 ವಾರ್ಡ್‌ಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿದೆ. ಚಿಂತಾಮಣಿ ನಗರಸಭೆ ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ‌ತಲಾ ಮೂರು ವಾರ್ಡ್‌ಗಳು ಕೊರೊನಾ ಮುಕ್ತವಾಗಿವೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಿಂದ ಕೊರೊನಾ ಸೋಂಕು ತೊಲಗಿಸಲು ಮತ್ತು ಸೋಂಕಿನ ದರವನ್ನು ಶೂನ್ಯಕ್ಕೆ ತರಲು ಮುಂದೆಯೂ ಎಲ್ಲರೂ ‌ಸಹಕಾರ ನೀಡಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.