ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಅಪೌಷ್ಟಿಕ ಮಕ್ಕಳ ಸಂಖ್ಯೆ ಇಳಿಕೆ

ಸಕಾಲದಲ್ಲಿ ಚಿಣ್ಣರಿಗೆ ಪೌಷ್ಟಿಕ ಆಹಾರ, ಔಷಧಿ, ಚಿಕಿತ್ಸಾ ಸೌಲಭ್ಯ
Last Updated 12 ಆಗಸ್ಟ್ 2021, 6:21 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳ ಆರೋಗ್ಯ ಕಾಳಜಿಗಾಗಿ ಶಿಶು ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕೈಗೊಂಡಿರುವ ವಿವಿಧ ಕ್ರಮಗಳಿಂದ ಅಪೌಷ್ಟಿಕತೆಯುಳ್ಳ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. 2019-20ನೇ ಸಾಲಿನಲ್ಲಿ ತೀವ್ರ ಅಪೌಷ್ಟಿಕತೆ 92 ಮಕ್ಕಳಿದ್ದರು. 2020-21ನೇ ಸಾಲಿನಲ್ಲಿ ಈ ಸಂಖ್ಯೆ 11ಕ್ಕೆ ಇಳಿಕೆಯಾಗಿದೆ.

ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಎನ್.ಆರ್.ಸಿ ಶಿಬಿರ ಆಯೋಜಿಸಿ 5 ಬೆಡ್‌ಗಳನ್ನು ಅಪೌಷ್ಟಿಕ ಮಕ್ಕಳಿಗಾಗಿ ಮೀಸಲಿಡಲಾಗಿದೆ. ಪೌಷ್ಟಿಕ ಆಹಾರ, ಔಷಧಿ ಮತ್ತು ಚಿಕಿತ್ಸೆ ನೀಡಿದ ಪ‍ರಿಣಾಮ ಶಿಬಿರದಲ್ಲಿದ್ದ ಅಪೌಷ್ಟಿಕ ಮಕ್ಕಳ ಆರೋಗ್ಯದಲ್ಲಿ ಗಣನೀಯವಾಗಿ ಸುಧಾರಣೆ ಕಂಡಿದೆ.

ಶಿಬಿರ ಮುಗಿಸಿ ಮನೆಗಳಿಗೆ ತೆರಳುವ ಮಕ್ಕಳಿಗೆ ₹ 2 ಸಾವಿರ ನೀಡಲಾಗುವುದು. ಆ ಮಕ್ಕಳು ಆರೋಗ್ಯದ ಕಡೆಗೆ ತೀವ್ರ ನಿಗಾ ಇಡ ಲಾಗುವುದು. ತಾಲ್ಲೂಕುವಾರು ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿ ಮಾಹಿತಿ ಹಂಚಿಕೊಳ್ಳಲಾಗುವುದು. ಮಗು ವಾಸಿಸುವ ಸ್ಥಳದ ಅಂಗನವಾಡಿ ಕಾರ್ಯಕರ್ತೆಯರು ಮಗುವಿನ ತೂಕ, ಎತ್ತರ ಹಾಗೂ ಆರೋಗ್ಯದ ಬಗ್ಗೆ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ. ಆ ಮಕ್ಕಳಿಗೆ ಯಾವುದಾದರೂ ಅನಾರೋಗ್ಯ ಕಂಡುಬಂದಲ್ಲಿ ಸಮೀಪದ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಮಹೇಂದ್ರ ತಿಳಿಸಿದರು.

ತಾಲ್ಲೂಕಿನಲ್ಲಿ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ 750 ಮಕ್ಕಳಿದ್ದಾರೆ. ಈ ಮಕ್ಕಳ ಆರೋಗ್ಯ ಸುಧಾರಣೆಗೂ ವಿವಿಧ ಕ್ರಮ ಕೈಗೊಳ್ಳಲಾಗಿದೆ. ಈ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ಶಿಬಿರ ನಡೆಸುವುದು ಕಷ್ಟ. ಅವರ ಆರೋಗ್ಯ ಸುಧಾರಣೆಗಾಗಿ ಇಲಾಖೆಯಿಂದ ಪೌಷ್ಟಿಕ ಆಹಾರದ ಬ್ಯಾಗ್ ನೀಡಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಮಕ್ಕಳ ಇಲಾಖೆಯಿಂದ ‘ಪುಷ್ಟಿ’ ಪೌಡರ್ ನೀಡಲಾಗುತ್ತದೆ. ಸಕ್ಕರೆ, ವಿವಿಧ ಕಾಳುಗಳುಳ್ಳ ಪೌಷ್ಟಿಕ ಆಹಾರ ವಿತರಿಸಲಾಗುತ್ತದೆ. ಚಿಕ್ಕಬಳ್ಳಾಪುರದ ಸತ್ಯಸಾಯಿ ಸೇವಾ ಟ್ರಸ್ಟ್‌ನಿಂದ ಹಾರ್ಲಿಕ್ಸ್ ಮಾದರಿ ಪೌಡರ್ ಉಚಿತವಾಗಿ ನೀಡಲಾಗುತ್ತಿದೆ. ಎಲ್ಲದರ ಪರಿಣಾಮವಾಗಿ ಮಕ್ಕಳಲ್ಲಿ ಅರ್ಧ, 1 ಕೆ.ಜಿ ತೂಕ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ. ಪ್ರತಿ ತಿಂಗಳು ಮಕ್ಕಳ ತೂಕ, ಎತ್ತರ, ಆರೋಗ್ಯ ಕುರಿತು ತಪಾಸಣೆ ನಡೆಸಲಾಗುವುದು ಎಂದು ವಿವರಿಸಿದರು.

ಸಂಭವನೀಯ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬ ತಜ್ಞರ ಸಲಹೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳ ತಂದೆ, ತಾಯಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ನೀಡಲಾಗುವುದು ಎಂದರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 20, ಬಟ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಆಮ್ಲಜನಕ ವ್ಯವಸ್ಥೆಯುಳ್ಳ ಬೆಡ್‌ ಮಕ್ಕಳಿಗಾಗಿ ಮೀಸಲಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಆಸ್ಪತ್ರೆ ಮತ್ತು ಬಟ್ಲಹಳ್ಳಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರಿದ್ದಾರೆ. ಜತೆಗೆ, ಕೈವಾರದಲ್ಲಿ ಒಂದು ಕೇಂದ್ರ ತೆರೆಯಲು ಹಾಗೂ ಮಕ್ಕಳ ತಜ್ಞರನ್ನು ತಾತ್ಕಾಲಿಕವಾಗಿ ನೇಮಿಸಲು ಚಿಂತನೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT