ಮಂಗಳವಾರ, ಜನವರಿ 28, 2020
21 °C
ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಪತ್ರಿಕಾಗೋಷ್ಠಿ ಮೂಲಕ ಕೃತಜ್ಞತೆ ಸಲ್ಲಿಕೆ

ಪೂರ್ವ ಸಿದ್ಧತೆ ಇಲ್ಲದೆ ಸೋಲು: ಕಾಂಗ್ರೆಸ್‌ ಅಭ್ಯರ್ಥಿ ಎಂ.ಅಂಜನಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಉಪ ಚುನಾವಣೆಗೆ ನಾವು ಪೂರ್ವ ಸಿದ್ಧತೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಸೋಲಬೇಕಾಯಿತು. ಪಕ್ಷ ಸಂಘಟನೆ ನಿಟ್ಟಿನಲ್ಲಿ ಡಿ.14 ರಂದು ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಅಭ್ಯರ್ಥಿ ಎಂ.ಅಂಜನಪ್ಪ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸುಮಾರು 50 ಸಾವಿರ ಮತಗಳನ್ನು ನೀಡಿದ ಮತದಾರರಿಗೆ ಮತ್ತು ಹಗಲಿರುಳು ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಯುವಕರು ಉದ್ಯೋಗವಿಲ್ಲದೆ ಬೀದಿ ಪಾಲಾಗುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನರು ಮೋದಿ ಮತ್ತು ಅಮಿತ್ ಶಾ ಅವರ ವಿರುದ್ಧ ದಂಗೆ ಏಳುತ್ತಾರೆ. ಈರುಳ್ಳಿ ಬೆಲೆ ಒಂದು ಕೆ.ಜಿಗೆ ₹200 ಮುಟ್ಟಿದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾವು ಈರುಳ್ಳಿಯೇ ತಿನ್ನುವುದಿಲ್ಲ ಎಂದು ಉಡಾಫೆ ಉತ್ತರೆ ನೀಡುತ್ತಾರೆ. ಇದನ್ನೆಲ್ಲಾ ನೋಡಿದರೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಜನರನ್ನು ಭಿಕ್ಷಾಟನೆಗೆ ದೂಡಿದರೂ ಅಚ್ಚರಿ ಇಲ್ಲ’ ಎಂದು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಅಂಬಾನಿ ಮತ್ತು ಅದಾನಿ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಉದ್ಯೋಗಗಳು ಕಡಿತಗೊಳ್ಳುತ್ತಿವೆ. ಸರ್ಕಾರಿ ಕಂಪನಿಗಳನ್ನು ಮುಚ್ಚಿ, ಖಾಸಗಿ ಕಂಪನಿಗಳಿಗೆ ಮೋದಿ ಅವರು ಉತ್ತೇಜನ ನೀಡುತ್ತಿದ್ದಾರೆ. ದೇಶದ ಜಿಡಿಪಿ ಶೇ 4.5ಕ್ಕೆ ಕುಸಿದು, ಕಳೆದ ಏಳು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ. ಯುಪಿಎ ಸರ್ಕಾರದಲ್ಲಿ ಶೇ 4.5ರಷ್ಟು ಇದ್ದ ಕೃಷಿ ಉತ್ಪಾದನೆ ಕೂಡ ಇವತ್ತು ಶೇ 2.5ಕ್ಕೆ ಕುಸಿದಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಅಂಬಾನಿ ಅವರು ತಲಾ ನೂರು ಕೋಟಿ ಕೊಟ್ಟರೆ ಸಾಕು ಅವರು ಚುನಾವಣೆಯನ್ನು ಸುಲಭವಾಗಿ ಎದುರಿಸುತ್ತಾರೆ’ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಮುಖಂಡರಾದ ಕೆ.ವಿ ನವೀನ್ ಕಿರಣ್, ಯಲವಳ್ಳಿ ರಮೇಶ್, ಗಂಗೇರೆಕಾಲುವೆ ನಾರಾಯಣಸ್ವಾಮಿ, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಎನ್.ಸಿ ವೆಂಕಟೇಶ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸುನಿಲ್ ಕುಮಾರ್, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು