ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಅಭಿವೃದ್ಧಿ | ಕಾಂಗ್ರೆಸ್ ಕೊಡುಗೆ: ನಾರಾಯಣಸ್ವಾಮಿ

ಟಿಕೆಟ್ ವಿಚಾರ– ಪಕ್ಷದ ಹೈಕಮಾಂಡ್ ಆದೇಶಕ್ಕೆ ಬದ್ಧ; ಕಾಂಗ್ರೆಸ್ ಮುಖಂಡ
Last Updated 18 ಮಾರ್ಚ್ 2023, 5:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್ ಸರ್ಕಾರಗಳ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಏನೇ ಅಭಿವೃದ್ಧಿ ಕೆಲಸಗಳು ಆಗಿದ್ದರೂ ಅದು ಕಾಂಗ್ರೆಸ್ ಅವಧಿಯಲ್ಲಿ’ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ‘ಲಾಯರ್’ ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮನೆಯ ಯಜಮಾನಿಗೆ ₹2,000 ನೀಡಲಾಗುವುದು. 200 ಯುನಿಟ್ ಉಚಿತ ವಿದ್ಯುತ್ ಮತ್ತು ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದಾಗಿ ಕಾಂಗ್ರೆಸ್ ಘೋಷಿಸಿದೆ. ಇದನ್ನು ನಾವು ಮನೆ ಮನೆಗೆ ತಿಳಿಸುತ್ತಿದ್ದೇವೆ’ ಎಂದರು.

ಈ ಕ್ಷೇತ್ರಕ್ಕೆ ಅಭಿವೃದ್ಧಿ ವಿಚಾರವಾಗಿ ಶಾಸಕರ ಕೊಡುಗೆ ಶೂನ್ಯ. ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆಯೇ ಹೊರತು ಕ್ಷೇತ್ರಕ್ಕೆ ಹೊಸದಾಗಿ ಏನೂ ಮಾಡಿಲ್ಲ. 24 ಸಾವಿರ ನಿವೇಶನ ನೀಡವುದಾಗಿ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ದೊಡ್ಡಪೈಲಗುರ್ಕಿಯಲ್ಲಿ ರೈತರು ಬಗರ್‌ಹುಕುಂ ಯೋಜನೆಯಡಿ ಉಳುಮೆ ಮಾಡುತ್ತಿರುವ ಜಮೀನನ್ನು ನಿವೇಶನಕ್ಕೆ ಎಂದು ಗುರುತಿಸಿದ್ದಾರೆ. ಈ ಸ್ಥಳ ವಾಸಯೋಗ್ಯವೂ ಆಗಿಲ್ಲ ಎಂದು ಹೇಳಿದರು.

‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೇರುಗಳಿವೆ. ಕಾಂಗ್ರೆಸ್ ಯಾರಿಗಾದರೂ ಟಿಕೆಟ್ ಕೊಡಲಿ. ಪಕ್ಷದ ಆದೇಶದ ಪ್ರಕಾರ ಶಿಸ್ತಿನ ಸಿಪಾಯಿಗಳ ರೀತಿ ನಾವು ಕೆಲಸ ಮಾಡುತ್ತೇವೆ’ ಎಂದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ನಾಯನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ದುಡಿದಿದೆ. ಇಂದು ದೇಶ ಎಲ್ಲ ಕ್ಷೇತ್ರಗಳಲ್ಲಿ ಉನ್ನತವಾಗಿ ಅಭಿವೃದ್ಧಿ ಆಗುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದರು.

ಮಾಜಿ ಶಾಸಕ ಶಿವಾನಂದ್ ಮಾತನಾಡಿ, ಗ್ರಾಮ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಪಕ್ಷ ಪ್ರಬಲವಾಗಿದೆ. ಬಿಜೆಪಿ ಸರ್ಕಾರದ ದೌರ್ಬಲ್ಯದಿಂದ ಜನರು ರೋಸಿದ್ದಾರೆ. ಅವು ಕಾಂಗ್ರೆಸ್‌ಗೆ ಮತಗಳಾಗಿ ಪರಿವರ್ತನೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಈ ವೇಳೆ ನೇಮಕದ ಆದೇಶ ಪತ್ರಗಳನ್ನು ನೀಡಲಾಯಿತು.

ಮಾಜಿ ಶಾಸಕಿ ಅನಸೂಯಮ್ಮ ಮಾತನಾಡಿದರು. ಚಿಕ್ಕಬಳ್ಳಾಪುರ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್ ಇತರರು ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT