ಭಾನುವಾರ, ಆಗಸ್ಟ್ 1, 2021
20 °C

ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆಗೆ ಹೋರಾಟಗಾರರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಲಾಪುರ: ಜಿಲ್ಲೆಯ ಅಂತರ್ಜಲ ಅಭಿವೃದ್ಧಿ ಮತ್ತು ನೀರಾವರಿ ಯೋಜನೆ ಕುರಿತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ನೀಡಿದ್ದ ಹೇಳಿಕೆಗೆ ಶಾಶ್ವತ ನೀರಾವರಿ ಹೋರಾಟಗಾರರು ಹಾಗೂ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧುಸ್ವಾಮಿ, ಅಟಲ್ ಭೂ ಜಲ ಯೋಜನೆಯ ಮೂಲಕ ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೊಳಿಸುವುದಾಗಿ ಮತ್ತು ಕೆ.ಸಿ. ವ್ಯಾಲಿ, ಎಚ್‌.ಎನ್. ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಲು ಹೆಚ್ಚು ವೆಚ್ಚವಾಗುತ್ತದೆ. ಎತ್ತಿನಹೊಳೆ ಯೋಜನೆ 2 ವರ್ಷಗಳಲ್ಲಿ ಪೂರ್ಣವಾಗುತ್ತದೆ
ಎಂದಿದ್ದರು.

ಕೆ.ಸಿ.ವ್ಯಾಲಿ ಯೋಜನೆಯಡಿ 400 ಎಂಎಲ್‌ಡಿ ಮತ್ತು ಎಚ್‌.ಎನ್.ವ್ಯಾಲಿ ಯೋಜನೆಯಡಿ 210 ಎಂಎಲ್‌ಡಿ ನೀರು ದೊರೆಯಬೇಕು. ಆದರೆ, ಯೋಜನೆ ಸಾಕಾರಗೊಂಡು ಇಲ್ಲಿಯವರೆಗೂ ಈ ಪ್ರಮಾಣದ ನೀರು ಜಿಲ್ಲೆಗೆ ಇನ್ನೂ ದೊರೆತಿಲ್ಲ. ನಿಗದಿ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. ಇದು ಸಹಜವಾಗಿ ಜಿಲ್ಲೆಯ ರೈತರು ಮತ್ತು ನೀರಾವರಿ ಹೋರಾಟಗಾರರಲ್ಲಿ ಅಸಮಾಧಾನಕ್ಕೆ
ಕಾರಣವಾಗಿದೆ.

ಬೆಂಗಳೂರಿನ ಕೊಳಚೆ ನೀರು ಶುದ್ಧೀಕರಿಸಿ ನೀಡುತ್ತಿರುವ ಕೆ.ಸಿ. ವ್ಯಾಲಿ ಮತ್ತು ಎಚ್‌.ಎನ್. ವ್ಯಾಲಿ ನೀರು ಕುಡಿಯಲು ಮತ್ತು ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿಲ್ಲ. ನೀರಿನಲ್ಲಿ ನೊರೆ ಬರುತ್ತಿದೆ. ಮೂರನೇ ಹಂತದಲ್ಲಿ ನೀರು ಶುದ್ಧೀಕರಿಸಬೇಕು ಎಂದು ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ.

‘30 ವರ್ಷಗಳಿಂದ ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೆ ಸುಜಲ, ಚೆಕ್‌ಡ್ಯಾಂ, ಜಲಾನಯನ ಯೋಜನೆಗಾಗಿ ಸಾವಿರಾರು ಕೋಟಿ ವೆಚ್ಚವಾಗಿದೆ. ಆದರೂ ಅಂತರ್ಜಲ ಅಭಿವೃದ್ಧಿ ಸಾಧ್ಯವಾಗಿಲ್ಲ. ಈಗ ಸಚಿವರು ಅಟಲ್ ಭೂ ಜಲ ಯೋಜನೆಯ ಪ್ರಸ್ತಾಪ ಮಾಡುತ್ತಿದ್ದಾರೆ. ಇದೂ ಸಹ ಹಣ ವ್ಯಯದ ಯೋಜನೆ ಅಷ್ಟೇ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರನೇ ಹಂತದ ನೀರು ಶುದ್ಧೀಕರಣ ವಿಚಾರ ನ್ಯಾಯಾಲಯದ ಮುಂದಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಸಹ ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಬೇಕು ಎನ್ನುತ್ತದೆ. ಸುಪ್ರೀಂ ಕೋರ್ಟ್ ಸಹ ನೀರಿನ ಗುಣಮಟ್ಟ ಸುರಕ್ಷಿತವಾಗಿರಬೇಕು ಎಂದು ಹೇಳು ತ್ತದೆ. ಆದರೆ, ಸಚಿವರು ಈ ಬಗ್ಗೆ ತಿಳಿವಳಿಕೆ ಇಲ್ಲದೆ ಮಾತನಾಡುತ್ತಿದ್ದಾರೆ. ಎಂದು ಹೇಳಿದ್ದಾರೆ. 

‌‘2014ರಲ್ಲಿ ಎತ್ತಿನಹೊಳೆ ಯೋಜನೆ ಆರಂಭವಾಯಿತು. ಆಗ ಇನ್ನು ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯಿಂದ ನೀರು ಬರುತ್ತದೆ ಎಂದು ಹೇಳಿದ್ದರು. ಆದರೆ ಇಷ್ಟು ವರ್ಷವಾದರೂ ಯೋಜನೆಯಡಿ ನೀರು ಹರಿದಿಲ್ಲ. ಎತ್ತಿನಹೊಳೆ ಚುನಾವಣೆ ವಿಷಯವಷ್ಟೇ’ ಎಂದು ರೈತ ಮುಖಂಡ ಯಲುವಳ್ಳಿ ಸೊಣ್ಣೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವಾಗಬೇಕೆ ಹೊರತು ಖರ್ಚು ವೆಚ್ಚದವೇ ಮುಖ್ಯವಾಗಬಾರದು. ಕೆ.ಸಿ. ವ್ಯಾಲಿ, ಎಚ್‌.ಎನ್.ವ್ಯಾಲಿ ಯೋಜನೆ ಆರಂಭವಾಗಿ ಇಷ್ಟು ವರ್ಷಗಳಾಗಿವೆ. ಹೀಗಿದ್ದರೂ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗಿಲ್ಲ.
ಇದಕ್ಕೆ ಹೊಣೆಯಾರು. ಸಚಿವರು ಈ ರೀತಿಯ ಅವೈಜ್ಞಾನಿಕ ಹೇಳಿಕೆ ನೀಡಿರುವುದು ಸರಿಯಲ್ಲ ಎಂದಿದ್ದಾರೆ.ಜಿಲ್ಲೆಯ ಗಡಿಭಾಗಕ್ಕೆ ಕೃಷ್ಣನೀರು ಬಂದಿದೆ. ಅದನ್ನು ಜಿಲ್ಲೆಗೆ ಹರಿಸುವ ವಿಚಾರವಾಗಿ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಅವೈಜ್ಞಾನಿಕವಾದುದು ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.