ಮಂಗಳವಾರ, ಫೆಬ್ರವರಿ 7, 2023
27 °C
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ‘ಪಂಚರತ್ನ’ ಯಾತ್ರೆಗೆ ಅದ್ದೂರಿ ಸ್ವಾಗತ

‘ಪಂಚರತ್ನ’ ಯಾತ್ರೆ: ಹಣದ ಆಮಿಷಕ್ಕೆ ಒಳಗಾಗಬೇಡಿ -ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ/ಮಂಚೇನಹಳ್ಳಿ: ಎಚ್‌.ಡಿ.ಕುಮಾರಸ್ವಾಮಿ ಅವರು ಹಮ್ಮಿಕೊಂಡಿರುವ ‘ಪಂಚರತ್ನ’ ರಥಯಾತ್ರೆಯು ಭಾನುವಾರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿತು. ಗೌರಿಬಿದನೂರು ತಾಲ್ಲೂಕಿನ ರಮಾಪುರದಿಂದ ಮಂಚೇನಹಳ್ಳಿಗೆ ಬಂದ ರಥಯಾತ್ರೆಯನ್ನು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. 

ಮಂಚೇನಹಳ್ಳಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತನಾಡಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ, ಜೆಡಿಎಸ್ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರ ಪರವಾಗಿ ಘೋಷಣೆಗಳನ್ನು ಕೂಗಿದರು. ಮಂಚೇನಹಳ್ಳಿಯಿಂದ ಪೋಶೆಟ್ಟಹಳ್ಳಿಗೆ ಯಾತ್ರೆ ಬಂದಿತು. ಅಲ್ಲಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಮುಸ್ಟೂರು, ಗೊಲ್ಲಹಳ್ಳಿ, ಪೆರೇಸಂದ್ರ, ಹುನೇಗಲ್, ದಿಬ್ಬೂರು, ನಾಯನಹಳ್ಳಿಯ ಮಾರ್ಗವಾಗಿ ಚಿಕ್ಕಬಳ್ಳಾಪುರವನ್ನು ಪಂಚರತ್ನ ರಥಯಾತ್ರೆ ಪ್ರವೇಶಿಸಿತು. ರಾತ್ರಿ ನಂದಿ ಗ್ರಾಮದಲ್ಲಿ ವಾಸ್ತವ್ಯ ಕುಮಾರಸ್ವಾಮಿ ವಾಸ್ತವ್ಯ ಹೂಡಿದರು. 

ರಥಯಾತ್ರೆ ಸಾಗಿದ ದಾರಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಸ್ವಾಗತ ಕೋರಿದರು. ಸೇಬಿನ ಹಾರ ಹಾಕಿದರು. ಪುಷ್ಪವೃಷ್ಟಿಗರೆದರು. ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

ಆಮಿಷಕ್ಕೆ ಒಳಗಾಗದಿರಿ: 2023ರ ಚುನಾವಣೆಯಲ್ಲಿ ಮತಕ್ಕಾಗಿ ನಿಮಗೆ ಹಣದ ಆಮಿಷ ಒಡ್ಡುವರು. ಈ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಕೈಮುಗಿದು ಕೇಳುವೆ. ಅದು ಇವರೇನೂ ಬೆವರು ಸುರಿಸಿ ದುಡಿದ ಹಣವಲ್ಲ. ಲೂಟಿ ಮಾಡಿದ ಹಣ. ಚಿಕ್ಕಬಳ್ಳಾಪುರ ಯುವಕರಿಗೆ ಉದ್ಯೋಗ ನೀಡಿಲ್ಲ. ಜನರ ಬದುಕಿನಲ್ಲಿ ಸುಧಾರಣೆ ಆಗಿಲ್ಲ. ಚುನಾವಣೆ ಸಂದರ್ಭದಲ್ಲಿ ಐದು ಸಾವಿರ, ಸೀರೆ, ಪಂಚೆ, ಕುಕ್ಕರ್, ಮಿಕ್ಸಿ ಹಂಚಲು ಬರುತ್ತಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

‘ಚಿಕ್ಕಬಳ್ಳಾಪುರ ನಗರಕ್ಕೆ ಜಕ್ಕಲಮಡಗು ನೀರು ಕೊಟ್ಟವರು ಯಾರು? ಜಿಲ್ಲೆ ಮಾಡಿದವರು ಯಾರು? ಈ ಕೆಲಸವನ್ನು ನಾನು ಮಾಡಿದ್ದೇನೆ. ನಿಮಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುತ್ತೇವೆ. ಸರ್ಕಾರಕ್ಕೆ ಹಣದ ಕೊರತೆ ಇಲ್ಲ. ಆದರೆ ಬಿಜೆಪಿ ಸರ್ಕಾರ ತೆರಿಗೆ ಹಣ ಲೂಟಿ ಮಾಡಿ ಹಂಚುತ್ತಿದೆ’ ಎಂದು ದೂರಿದರು.

ಚುನಾವಣೆಗೆ ಕೆಲವು ತಿಂಗಳು ಇವೆ. ಇಂತಹ ಸಂದರ್ಭದಲ್ಲಿ ಈ ಸರ್ಕಾರ ಮಂಚೇನಹಳ್ಳಿಗೆ ಸರ್ಕಾರದಲ್ಲಿ ಯಾವ ಬಂಡವಾಳ ಹಾಕಲ್ಲ. ಮಂಚೇನಹಳ್ಳಿ ಈ ಹಿಂದೆ ಜನತಾದಳದ ಭದ್ರ ಕೋಟೆಯಾಗಿತ್ತು. ಬಚ್ಚೇಗೌಡರ ಬಳಿ ಹಣ ಇಲ್ಲದಿರಬಹುದು. ಬಚ್ಚೇಗೌಡರು ಪ್ರಾಮಾಣಿಕರು. ಒಳ್ಳೆಯ ಹೆಸರಿದೆ. ನನ್ನ ಆರೋಗ್ಯ ಲೆಕ್ಕಿಸದೆ ಓಡಾಟ ನಡೆಸಿದ್ದೇನೆ. ಈ ಚುನಾವಣೆಯಲ್ಲಿ ನಿಮ್ಮ ಬಚ್ಚೇಗೌಡರಿಗೆ ಎಲ್ಲ ರೀತಿಯ ಶಕ್ತಿ ತುಂಬಬೇಕು ಎಂದು ಮನವಿ ಮಾಡುವೆ ಎಂದರು.

‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಮುಸ್ಲಿಮರಿಗೆ ಇದೆ. ಮುಸ್ಲಿಮರ ಗುರುತಿನ ಕಾರ್ಡ್ ಪಡೆದು, ಮತದಾನ ಮಾಡದಂತೆ ತಡೆಯುತ್ತಿದ್ದಾರೆ. ಇಂಥದ್ದು ನಡೆಯಬಾರದು. ನಿಮಗೆ ಹಣ ಕೊಡುವರು. ಇಂತಹದ್ದು ನಡೆಯಬಾರದು’ ಎಂದು ಹೇಳಿದರು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ಜನ ಸಾಮಾನ್ಯರ ಬದುಕು ಹಸನಾಗಬೇಕು ಎಂದರೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಆರೋಗ್ಯ, ಶಿಕ್ಷಣ, ವಸತಿ, ಮಹಿಳೆಯರು ಮತ್ತು ಯುವ ಸಮುದಾಯದ ಸಬಲೀಕರಣ. ರೈತರ ಬದುಕು ಉತ್ತಮಗೊಳ್ಳಬೇಕು ಎನ್ನುವುದು ಕುಮಾರಸ್ವಾಮಿ ಅವರ ಆಶಯವಾಗಿದೆ. ಮತದಾರರು ಜೆಡಿಎಸ್ ಅನ್ನು ಮತ್ತಷ್ಟು ಬಲಪಡಿಸಿ’ ಎಂದು ಕೋರಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ. ಮುನೇಗೌಡ ಮಾತನಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿದೆ. 2023ರ ಚುನಾವಣೆಗೆ ಎಲ್ಲರ ಸಹಕಾರ ಸಹ ಇದೇ ರೀತಿಯಲ್ಲಿ ಇರಲಿ. ಪಂಚರತ್ನ ರಥಯಾತ್ರೆ ಕಾರ್ಯಕ್ರಮಗಳನ್ನು ಪಕ್ಷದ ಮುಖಂಡರು ಕಾರ್ಯಕರ್ತರು ಮನೆ ಮನೆಗೂ ತಿಳಿಸುತ್ತೇವೆ ಎಂದರು. 

ಶಾಸಕ ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ, ಬಾಲಕುಂಟಹಳ್ಳಿ ಮುನಿಯಪ್ಪ, ಪ್ರಭಾ, ನಾರಾಯಣಗೌಡ, ನರಸಿಂಹಮೂರ್ತಿ, ಶ್ರೀಧರಗೌಡ ಹಾಗೂ ಮುಖಂಡರು ಇದ್ದರು.

‘ಚಿಕ್ಕಬಳ್ಳಾಪುರ ಮರೆಯುವುದಿಲ್ಲ’

‘ಚಿಕ್ಕಬಳ್ಳಾಪುರ ಜಿಲ್ಲೆಯನ್ನು ನನ್ನ ಕೊನೆಯ ಉಸಿರು ಇರುವವರೆಗೂ ಮರೆಯುವುದಿಲ್ಲ. ಇದು ನಿಮ್ಮನ್ನು ಮೆಚ್ಚಿಸುವ ಮಾತಲ್ಲ. ಹೃದಯದಿಂದ ಹೇಳುತ್ತಿರುವ ಮಾತು. 2009ರ ಲೋಕಸಭೆ ಚುನಾವಣೆಯಲ್ಲಿ ಕೊನೆಯಲ್ಲಿ ನಾನು ನಾಮಪತ್ರ ಸಲ್ಲಿಸಿದ್ದೆ. ಆಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರ ಲೀಡ್ ಕೊಟ್ಟಿದ್ದರು. ಇದನ್ನು ಜೀವನದಲ್ಲಿ ಮರೆಯುವುದಿಲ್ಲ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಮನೆ ಮನೆಗೆ ಬಚ್ಚೇಗೌಡರ ಭೇಟಿ’

‘ಬಚ್ಚೇಗೌಡರು ನಾಳೆಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರತಿ ಹಳ್ಳಿಯ ಮನೆ ಮನೆಗೆ ಭೇಟಿ ನೀಡುವಂತೆ ಹೇಳಿದ್ದೇನೆ. ಬಚ್ಚೇಗೌಡರ ಹಿಂದೆ ನಾನು ಇದ್ದೇನೆ. ಮುಂದೆ ನೀವು (ಜನರು) ಇದ್ದೀರಿ. ನಾವೂ ನೀವು ಎಲ್ಲರೂ ಸೇರಿ ಬಚ್ಚೇಗೌಡರನ್ನು ಗೆಲ್ಲಿಸೋಣ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ಬಚ್ಚೇಗೌಡರ ಬಳಿ ಹಣ ಇಲ್ಲದಿದ್ದರೂ ಅವರ ತಂದೆ ಪಿಳ್ಳಪ್ಪ ಅವರ ಕಾಲದಿಂದ ಈ ಕುಟುಂಬ ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಬಡವರ ಹಣವನ್ನು ಲೂಟಿ ಮಾಡಿಲ್ಲ. ನಿಮ್ಮ ಕುಟುಂಬಗಳು ಇನ್ನೊಬ್ಬರ ಬಳಿ ಕೈಚಾಚದೆ ಬದುಕು ಕಟ್ಟಿಕೊಳ್ಳಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು