ಸೋಮವಾರ, ನವೆಂಬರ್ 30, 2020
20 °C
ಗುಡಿಬಂಡೆ: ಪಿಂಚಣಿ ಅದಾಲತ್‌ನಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ ಸಲಹೆ

ಮಧ್ಯವರ್ತಿಗಳ ಮೊರೆ ಹೋಗದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ನೈಜ ಫಲಾನುಭವಿಗಳಿಗೆ ದೊರಕಿಸಿ ಕೊಡಲು ಪಿಂಚಣಿ ಅದಾಲತ್ ಮತ್ತು ಪೌತಿ ವಾರಸ್ಸು ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದರು.

ಅವರು ತಾಲೂಕಿನ ಚೆಂಡೂರು ಗ್ರಾಮದ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಪಿಂಚಣಿ ಅದಾಲತ್ ಮತ್ತು ಪೌತಿ ವಾರಸ್ಸು ಖಾತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಮಾಜಿಕ ಭದ್ರತಾ ಯೋಜನೆಗಳಾದ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗಬಾರದು. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಪಿಂಚಣಿ ಅದಾಲತ್‌ನಲ್ಲಿ ದಾಖಲೆಗಳನ್ನು ಪರಿಶೀಲನೆಗೆ ನೆರವಾಗಲು ಅಧಿಕಾರಿ ವರ್ಗ ನಿಮ್ಮೊಂದಿಗಿರುತ್ತದೆ. ಈ ಯೋಜನೆಗಳಲ್ಲಿ ನೋಂದಣಿಯಾಗಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ, ಆಧಾರ್‌ನಲ್ಲಿ ಲೋಪದೋಷಗಳಿದ್ದಲ್ಲಿ ಸೋಮೇನಹಳ್ಳಿ ನಾಡಕಚೇರಿಯಲ್ಲಿ ಸರಿಪಡಿಸಿಕೊಳ್ಳಬಹುದು’ ಎಂದರು.

ಜಮೀನಿನಲ್ಲಿ ಯಾವುದೇ ತಕರಾರು ಇಲ್ಲದ, ನ್ಯಾಯಾಲಯದಲ್ಲಿ ಪ್ರಕರಣಗಳು ಇರದಂತಹ, ಪಹಣಿಯಲ್ಲಿ ಮೃತಪಟ್ಟಿರುವ ಹೆಸರುಗಳು ಬರುತ್ತಿದ್ದರೆ ₹35 ರೂ ಶುಲ್ಕ ಪಾವತಿಸಿ ಪೌತಿ ವಾರಸ್ಸು ಖಾತೆ ಮಾಡಿಸಿಕೊಳ್ಳಬಹುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಯಾವುದೇ ತೊಂದರೆಯಿದ್ದರೂ ತಾಲ್ಲೂಕು ಕಚೇರಿಯಲ್ಲಿ ಮಧ್ಯಾಹ್ನ ಮೂರು ಗಂಟೆಯ ನಂತರ ಸಂಪರ್ಕಿಸಿ ಎಂದು ಸಲಹೆ ನೀಡಿದರು.

‘ಅಂಗವಿಕಲರು ಮತ್ತು ವೃದ್ಧರು ತಮ್ಮ ಸಂಬಂಧಿಕರನ್ನು ಕಳುಹಿಸಿಕೊಡಿ. ನಿಮಗೆ ಸೇವೆ ನೀಡಲು ಅಧಿಕಾರಿಗಳು ಸಿದ್ಧವಿರುತ್ತಾರೆ. ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹತೆಯುಳ್ಳವರು ಈ ಯೋಜನೆಯ ಲಾಭ ಪಡೆಯಿರಿ. ನಿಮಗೆ ತಿಳಿದಿದ್ದವರಿಗೂ ಈ ಯೋಜನೆಯ ಬಗ್ಗೆ ತಿಳಿಸಿ ಕಚೇರಿಗೆ ಕಳುಹಿಸಿಕೊಡಬೇಕು’ ಎಂದು ಹೇಳಿದರು.

ತಾ.ಪಂ. ಸದಸ್ಯ ರಾಮಾಂಜಿ, ಗ್ರಾಮದ ಮುಖಂಡರಾದ ಪಟೇಲ್ ವೆಂಟರೆಡ್ಡಿ, ಸಿ.ಎಲ್. ಆದಿನಾರಾಯಣಪ್ಪ, ಸಿ.ನಾರಾಯಣರೆಡ್ಡಿ, ತಿಪ್ಪಣ್ಣ, ನರಸಿಂಹಮೂರ್ತಿ, ಸಿಂಹಾದ್ರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.