ಬುಧವಾರ, ಮೇ 25, 2022
29 °C
ದ್ವಿಚಕ್ರ ವಾಹನ ಮುಟ್ಟಿದ ದಲಿತ ಯುವಕನ ಮೇಲೆ ನಡೆದ ಸಾಮೂಹಿಕ ಹಲ್ಲೆಗೆ ಸಮತಾ ಸೈನಿಕ ದಳ ಖಂಡನೆ

ದ್ವಿಚಕ್ರ ವಾಹನ ಮುಟ್ಟಿದ ದಲಿತ ಯುವಕನ ಮೇಲೆ ಹಲ್ಲೆ ಮಾಡಿದವರ ಗಡಿಪಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಮಿಣಜಗಿ ಗ್ರಾಮದಲ್ಲಿ ದ್ವಿಚಕ್ರ ವಾಹನ ಮುಟ್ಟಿದ ಕಾರಣಕ್ಕಾಗಿ ದಲಿತ ಯುವಕನನ್ನು ಮೇಲೆ ಸಾಮೂಹಿಕ ಹಲ್ಲೆ ಮಾಡಿದ ಆರೋಪಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಸಮತಾ ಸೈನಿಕ ದಳ ಕಾರ್ಯಕರ್ತರು ಬುಧವಾರ ಡಿವೈಎಸ್ಪಿ ಮೂಲಕ ಗೃಹ ಸಚಿವರು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ, ‘ಬೈಕ್ ಮುಗಿದ ಕಾರಣಕ್ಕೆ ಮಿಣಜಗಿಯ ಕಾಶೀನಾಥ ಯಂಕಪ್ಪ ತಳವಾರ ಅವರನ್ನು ಹಾಡುಹಗಲೇ ನಡುರಸ್ತೆಯಲ್ಲಿ ಬಟ್ಟೆ ಬಿಚ್ಚಿ ಹೀನಾಯವಾಗಿ ಹೊಡೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದಲಿತರನ್ನು ಬೆಚ್ಚಿ ಬೀಳಿಸಿದೆ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿಯ ಯುವಕನ ಮೇಲೆ 13 ಜನರ ಸವರ್ಣಿಯರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದೆ. ಇಂತಹ ಅಮಾನವೀಯ ಸಹಿಸಿಕೊಂಡು ದಲಿತರು ಇನ್ನು ಎಷ್ಟು ವರ್ಷ ಬದುಕಬೇಕು. ದೇಶದಲ್ಲಿ ನಿರಂತರವಾಗಿ ದಲಿತರ ಮೇಲೆ ದಬ್ಬಾಳಿಕೆ ಮುಂದುವರಿದಿವೆ. ಕೋಮುವಾದಿಗಳ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿಲ್ಲ’ ಎಂದು ತಿಳಿಸಿದರು.

‘ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಲ್ಲೆಕೋರರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಬೇಕು. ಅಷ್ಟು ಆದರೆ ಸಾಲದು ಅರೋಪಿಗಳನ್ನು ಗಡಿಪಾರು ಮಾಡುವ ಮೂಲಕ ಇಂತಹ ಕೃತ್ಯಗಳು ಮರುಕಳುಹಿಸದಂತೆ ಎಚ್ಚರಿಕೆ ಸಂದೇಶ ರವಾನಿಸಬೇಕಿದೆ‘ ಎಂದರು.

ಸಮತಾ ಸೈನಿಕ ದಳದ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕುಪ್ಪಳ್ಳಿ ಮುನಿರಾಜು, ಮುಖಂಡರಾದ ಮಹೇಶ್‌, ರಾಮು, ರಾಮಕೃಷ್ಣ ಅವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು