ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಾವತಿಗೆ ಬಲ ತುಂಬಲು ಪಕ್ಷ ಸಂಘಟನೆಗೆ ಒತ್ತು ನೀಡಿ: ಎಚ್.ಆರ್.ರಾಜಶೇಖರ್

ದಾದಾಸಾಹೇಬ್ ಕಾನ್ಸಿರಾಂ ಅವರ 12ನೇ ಪರಿನಿಬ್ಬಾಣ ದಿನದ ಅಂಗವಾಗಿ ಬಿಎಸ್ಪಿ ವತಿಯಿಂದ ‘ಸಂಕಲ್ಪ ದಿವಸ’ ಕಾರ್ಯಕ್ರಮ
Last Updated 9 ಅಕ್ಟೋಬರ್ 2018, 11:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ನಾಯಕಿ ಮಯಾವತಿ ಅವರಿಗೆ ನಾವೆಲ್ಲ ಬಲ ತುಂಬಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಶ್ರಮಿಸಬೇಕು’ ಎಂದು ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ರಾಜಶೇಖರ್ ಹೇಳಿದರು.

ದಾದಾಸಾಹೇಬ್ ಕಾನ್ಸಿರಾಂ ಅವರ 12ನೇ ಪರಿನಿಬ್ಬಾಣ ದಿನದ ಅಂಗವಾಗಿ ಬಿಎಸ್ಪಿ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಂಕಲ್ಪ ದಿವಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ದೇಶ ಪ್ರಗತಿಯನ್ನು ಸಾಧಿಸಬೇಕಾದರೆ ಆ ದೇಶದ ಪ್ರಜೆಗಳ ಮನೋಭಾವ ಬದಲಾಗಬೇಕು. ಉನ್ನತ ಕನಸುಗಳನ್ನು ಕಾಣಬಲ್ಲ ಜನರು ಮಾತ್ರ ನಮ್ಮ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಲ್ಲರು. ಸಾವಿರಾರು ವರ್ಷಗಳ ಕಾಲ ಜಾತಿ ವ್ಯವ್ಯವಸ್ಥೆಗೆ ಸಿಕ್ಕಿ ನರಳುತ್ತಿದ್ದ ಭಾರತದ ಬಹುಜನರನ್ನು ಗುಲಾಮಗಿರಿಗೆ ಅಂತ್ಯ ಹಾಡಲು ಅಂಬೇಡ್ಕರ್ ಅವರು ಎಲ್ಲರಿಗೂ ಮತದಾನದ ಹಕ್ಕು ಕೊಡಿಸಿದ್ದಾರೆ. ಅದನ್ನು ವಿವೇಚನೆಯಿಂದ ಬಳಸಬೇಕಿದೆ’ ಎಂದು ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತರು ಮತ್ತು ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ಇದಕ್ಕೆ ಪ್ರತಿಯಾಗಿ ಮುಂದಿನ ಲೋಕಸಭೆ ಚನಾವಣೆಯಲ್ಲಿ ಕೋಮುವಾದಿ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು. ನಿಮಗೆ ಬೇಕಾದ ಜವಾಬ್ದಾರಿಯುತ ಸರ್ಕಾರ ಪಡೆದುಕೊಳ್ಳಬೇಕು’ ಎಂದರು.

‘ಇವತ್ತಿನ ರಾಜಕಾರಣಿಗಳು ದಲಿತರ ಮನೆಗೆ ಬಂದು ಊಟ ಮಾಡುವುದು, ಗ್ರಾಮ ವಾಸ್ತವ್ಯ ಹೂಡುವುದು ಇವೆಲ್ಲವೂ ಬರೀ ರಾಜಕೀಯ ನಾಟಕ. ಮೋದಿ ಸರ್ಕಾರ ಕಾರ್ಮಿಕರು, ಬಡವರಿಂದ ಹೆಚ್ಚು ತೆರಿಗೆ ವಸೂಲಿ ಮಾಡಲು ಮುಂದಾಗಿದೆ. ಪರಿಣಾಮ ದಿನ ಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗಿವೆ’ ಎಂದು ಹೇಳಿದರು.

‘ಮೋದಿ ಒಬ್ಬ ಸುಳ್ಳುಗಾರ. ಅವರ ಮಾತುಗಳಿಗೆ ಮರುಳಾಗಬೇಡಿ. ಅವರು ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡಿದ್ದಾರೆ. ಅದರಿಂದಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ರೂಪಾಯಿ ಮೌಲ್ಯ ಕುಸಿತಗೊಳ್ಳುತ್ತಿದೆ’ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ‘ಒಂದು ಓಟು ಕೊಡಿ, ಒಂದು ನೋಟು ಕೊಡಿ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಘಟಕ ಉಸ್ತುವಾರಿಗಳಾದ ಎಂ. ಮುನಿಕೃಷ್ಣಯ್ಯ, ಎಂ.ವಿ.ದ್ಯಾವಪ್ಪ, ಜಿಲ್ಲಾ ಘಟಕ ಖಜಾಂಚಿ ಗುರ್ರಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ರಾಮದಾಸ್, ಬಹುಜನ ವಾಲಂಟ್ರಿ ಫೋರ್ಸ್‌ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ಕುಮಾರ್, ಮುಖಂಡರಾದ ಆಂಜನೇಯ ರೆಡ್ಡಿ, ನಂಜುಂಡಪ್ಪ, ವೆಂಕಟೇಶ್, ಎಂ.ವೈ.ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT