ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಬಾಹಿರವಾಗಿ ನೌಕರರ ವಜಾ

ಕೆಲಸದಿಂದ ತೆಗೆದುಹಾಕಿದ ಅಡುಗೆ ನೌಕರರನ್ನು ಪುನಃ ಕೆಲಸಕ್ಕೆ ನಿಯೋಜಿಸುವಂತೆ ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳ ಆಗ್ರಹ
Last Updated 5 ಸೆಪ್ಟೆಂಬರ್ 2018, 14:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ತಾಲ್ಲೂಕಿನ ಗವಿಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಮಾರ್ಗಸೂಚಿ, ನಿಯಮಾವಳಿಗಳನ್ನು ಗಾಳಿಗೆ ತೂರಿ, ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇಬ್ಬರು ಅಡುಗೆ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆಯಲಾಗಿದೆ’ ಎಂದು ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಆರ್.ಮಂಜುಳಾ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಹಲವು ಶಾಲೆಗಳಲ್ಲಿ ಬಿಸಿಯೂಟ ನೌಕರರ ಮೇಲೆ ನಿರಂತರವಾಗಿ ಶೋಷಣೆ, ದಬ್ಬಾಳಿಕೆ ನಡೆಯುತ್ತಲೇ ಇದೆ. ಅತಿ ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಯುವ ಬಿಸಿಯೂಟ ನೌಕರರ ಶ್ರಮವನ್ನು ಯಾರೊಬ್ಬರೂ ಪರಿಗಣಿಸುತ್ತಿಲ್ಲ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ಯಾವುದೇ ಶಾಲೆಯಲ್ಲಿ ಮಕ್ಕಳ ಸಂಖ್ಯೆ 25 ಕ್ಕಿಂತ ಕಡಿಮೆ ಇದ್ದರೆ ಬಿಸಿಯೂಟ ತಯಾರಿಸಲು ಒಬ್ಬ ಅಡುಗೆಯವರಿಗೆ ಮಾತ್ರ ಅವಕಾಶವಿರುತ್ತದೆ’ ಎಂದು ಹೇಳಿದರು.

‘2018-19 ನೇ ಸಾಲಿನಲ್ಲಿ ಶಾಲೆಯ ದಾಖಲಾತಿ ಕಡಿಮೆಯಾಗಿರುವುದು ನಿಜ. ಆದರೆ, ಇಲ್ಲಿನ ಮುಖ್ಯ ಶಿಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಎಸ್‌ಡಿಎಂಸಿ ಸದಸ್ಯರು ಏಕಪಕ್ಷೀಯ ತೀರ್ಮಾನ ತೆಗೆದುಕೊಂಡು ಅರ್ಹತೆ ಇಲ್ಲದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಆಗಸ್ಟ್ 15 ರಂದು ಸಭೆ ನಡೆಸಿ ಹಾಲಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರನ್ನು ಕೆಲಸದಿಂದ ತೆಗೆದಿದ್ದಾರೆ’ ಎಂದು ಆರೋಪಿಸಿದರು.

‘ಮಾರ್ಗಸೂಚಿಗಳ ಪ್ರಕಾರ ಮುಖ್ಯ ಅಡುಗೆಯವರು 7ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ವಿಧವೆಯರಿಗೆ ಆದ್ಯತೆ ನೀಡಬೇಕು ಎಂದಿದೆ. ಆದರೆ, ಗವಿಗಾನಹಳ್ಳಿ ಶಾಲೆಯಲ್ಲಿ ಈ ನಿಯಮವನ್ನು ಉಲ್ಲಂಘಿಸಿ ವಿದ್ಯಾರ್ಹತೆ ಇಲ್ಲದ ಅಂಗವಿಕಲರೊಬ್ಬರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಸಂಘದ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ ನಂತರ ಒಬ್ಬರನ್ನು ಕೆಲಸಕ್ಕೆ ತೆಗೆದುಕೊಂಡು ಮತ್ತೊಬ್ಬರನ್ನು ಕೈ ಬಿಡಲಾಗಿದೆ. ಅವರನ್ನು ಸಹ ಕೆಲಸಕ್ಕೆ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ವೆಂಕಟಲಕ್ಷ್ಮಿ, ಖಜಾಂಚಿ ಭಾರತಿ, ಪದಾಧಿಕಾರಿಗಳಾದ ಗಾಯಿತ್ರಿ, ಶೀಲವತಿ, ನಾರಾಯಣಮ್ಮ ಮತ್ತು ಚಿನ್ನಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT