ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ನೀಲಗಿರಿ ತೆರವಿಗೆ ಜಿಲ್ಲಾಡಳಿತದ ಗಡುವು

ಜಲಮರುಪೂರಣಕ್ಕೆ ನೀರಾವರಿ ಹೋರಾಟಗಾರರ ಮನವಿ
Last Updated 27 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂತರ್ಜಲ ಕುಸಿತ ಕಂಡಿದೆ. ಈಗ ಜಿಲ್ಲಾಡಳಿತ ನೀಲಗಿರಿ ಮರಗಳ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಪ್ರತಿಯೊಂದು ತಾಲ್ಲೂಕುಗಳಲ್ಲಿಯೂ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ನೀಲಗಿರಿ ತೆರವುಗೊಳಿಸಬೇಕು ಎಂದು ಆದೇಶಿಸಿದೆ.

ಖಾಸಗಿ ಜಮೀನುಗಳಲ್ಲಿ ಬೆಳೆದಿರುವ ನೀಲಗಿರಿ ತೆರವಿಗೆ ಒಂದು ತಿಂಗಳು, ಸರ್ಕಾರಿ ಜಮೀನುಗಳಲ್ಲಿನ ನೀಲಗಿರಿ ತೆರವಿಗೆ ಎರಡು ತಿಂಗಳ ಗಡುವು ನೀಡಿದೆ. ಜಿಲ್ಲಾಡಳಿತ ಈ ನಿರ್ಧಾರ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.

ಒಂದೆಡೆ ನೀಲಗಿರಿ ತೆರವು ಮಾಡಲು ಆರ್ಥಿಕ ಚೈತನ್ಯ ಇಲ್ಲದ ರೈತರಿದ್ದರೆ, ಮತ್ತೊಂದೆಡೆ ನೀಲಗಿರಿಯನ್ನೇ ನಂಬಿ ಜೀವನ ನಡೆಸುತ್ತಿರುವವರೂ ಇದ್ದಾರೆ. ಖಾಸಗಿಯವರಿಗಿಂತ ಸರ್ಕಾರಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ನೀಲಗಿರಿ ಹೆಚ್ಚಾಗಿದೆ. ಅವುಗಳ ತೆರವಿಗೆ ಸಾಕಷ್ಟು ಅಡೆತಡೆಗಳಿವೆ.

ಅಂತರ್ಜಲದ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ನೀಲಗಿರಿ ಮತ್ತು ಅಕೇಶಿಯಾ ತೆರವು ಅನಿವಾರ್ಯ ಮತ್ತು ಸ್ವಾಗತಾರ್ಹ. ಆದರೆ ಇದೊಂದರಿಂದಲೇ ಅಂತರ್ಜಲ ವೃದ್ಧಿಯಾಗುವುದಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು, ಕೇಂದ್ರ ಅಂತರ್ಜಲ ಮಂಡಳಿ ಮತ್ತು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹತ್ತಾರು ವರ್ಷಗಳ ಹಿಂದೆಯೇ ಅಂತರ್ಜಲ ಅತೀ ಬಳಕೆ ವಲಯ ಎಂದು ಕಪ್ಪು ಪಟ್ಟಿಗೆ ಸೇರಿಸಿದೆ. ಅಂತರ್ಜಲ ಕುಸಿತಕ್ಕೆ ಮರಳು ನಿಕ್ಷೇಪಗಳು ಸಂಪೂರ್ಣ ಖಾಲಿ ಆಗಿದ್ದೂ ಕಾರಣ. ಈ ವೇಳೆ ಕಣ್ಣುಮುಚ್ಚಿ ಕುಳಿತಿದ್ದ ಅಧಿಕಾರಿಗಳು ಈಗ ನೀಲಗಿರಿಯ ತೆರವಿಗೆ ಮುಂದಾಗಿರುವುದು ಹಾಸ್ಯಾಸ್ಪದ ಎಂದರು.

ರೈತರು ಕಟ್ಟಿಸಿರುವ ಸಾವಿರಾರು ಕಲ್ಲು ಕಟ್ಟಡದ ಬಾವಿಗಳು ಮತ್ತು ಲಕ್ಷಾಂತರ ಕೊಳವೆಬಾವಿಗಳಿವೆ. ಅವುಗಳಲ್ಲಿ ಸಾವಿರಾರು ಕೊಳವೆ ಬಾವಿಗಳು ವಿಫಲವಾಗಿವೆ. ಇಂತಹ ಬಾವಿ ಮತ್ತು ಕೊಳವೆ ಬಾವಿಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಜಲ ಮರುಪೂರಣಗೊಳಿಸಬೇಕು. ಅದು ಈಗಿನ ತುರ್ತು ಕೆಲಸವಾಗಿದೆ ಎಂದರು.

ಬಿದಿರು ನಾಟಿ ಮಾಡಿ
ಜಿಲ್ಲಾಡಳಿತವು ನೀಲಗಿರಿ ನಿರ್ಮೂಲನೆಗೆ ಮುಂದಾಗಿರುವುದು ಉತ್ತಮ ನಿರ್ಧಾರ. ಮೊದಲು ಅರಣ್ಯ ಪ್ರದೇಶದಲ್ಲಿ ಇರುವ ನೀಲಗಿರಿಯನ್ನು ಸಂಪೂರ್ಣ ತೆಗೆದು ಮಾದರಿಯಾಗಬೇಕು. ನೀಲಗಿರಿ ತೆಗೆಯುವ ರೈತರಿಗೆ ಉಚಿತ ಸಸಿಗಳನ್ನು ನೀಡಿ ಹೆಚ್ಚಿನ ಪ್ರೋತ್ಸಾಹ ಧನ ನೀಡಿ ಉತ್ತೇಜಿಸಬೇಕು. ನೀಲಗಿರಿ ತೆಗೆದ ಜಾಗದಲ್ಲಿ ‘ನೀಲಗಿರಿ ತೆರೆವು-ಭೀಮ ಬಿದಿರು ತಳಿಯ ನಾಟಿ’ ಎಂಬ ಕಾರ್ಯಕ್ರಮ ಮಾಡಿದರೆ ರೈತರ ಸಹಕಾರವೂ ಸಿಗುತ್ತದೆ. ನೀಲಗಿರಿ ತೆರವುಗೊಳಿಸಲು ಆರ್ಥಿಕ ಚೈತನ್ಯವಿಲ್ಲದ ರೈತರೂ ಸಾಕಷ್ಟಿದ್ದಾರೆ.
–ವಿಜಯಭಾವರೆಡ್ಡಿ,ಯುವಶಕ್ತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT