ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳು ಬಾಧೆ ಪರಿಶೀಲಿಸಿದ ತಜ್ಞರು

ಜಿಲ್ಲೆಯಲ್ಲಿ ಮುಸುಕಿನ ಜೋಳದ ಬೆಳೆಗೆ ದಾಳಿ ಇಟ್ಟ ಸೈನಿಕ ಹುಳು
Last Updated 22 ಜುಲೈ 2019, 19:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಸುಕಿನ ಜೋಳದ ಬೆಳೆಗೆ ಸೈನಿಕ ಹುಳು ಬಾಧೆ ಹೆಚ್ಚಾದ ಬೆನ್ನಲ್ಲೇ ಸೋಮವಾರ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ವಿಜ್ಞಾನಿಗಳು ಎರಡು ತಂಡಗಳಲ್ಲಿ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರಿಗೆ ಹುಳು ಬಾಧೆ ನಿಯಂತ್ರಣ ಕುರಿತು ಮಾಹಿತಿ ನೀಡಿದರು.

ಜಿಕೆವಿಕೆಯ ರೋಗಶಾಸ್ತ್ರಜ್ಞ ಎಸ್.ಎನ್.ಪಾಲಣ್ಣ ಹಾಗೂ ಕೀಟ ಶಾಸ್ತ್ರಜ್ಞ ಪ್ರಭು ಗಾಣಿಗೇರ ಅವರ ತಂಡ ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ ತಾಲ್ಲೂಕುಗಳಿಗೆ ಮತ್ತು ರೋಗಶಾಸ್ತ್ರಜ್ಞ ಮಂಜುಳಾ , ಕೀಟನಾಶಕ ತಜ್ಞ ಶ್ರೀನಿವಾಸರೆಡ್ಡಿ ಅವರ ತಂಡ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ತಾಲ್ಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮುಸುಕಿನ ಜೋಳದ ಬೆಳೆ ಪರಿಶೀಲನೆ ನಡೆಸಿತು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕೀಟ ಶಾಸ್ತ್ರಜ್ಞ ಪ್ರಭು ಗಾಣಿಗೇರ, ‘ಅಮೆರಿಕದಿಂದ ಭಾರತಕ್ಕೆ ವಲಸೆ ಬಂದಿರುವ ಸೈನಿಕ ಹುಳು ಮುಸುಕಿನ ಜೋಳದ ಬೆಳೆಗೆ ಹೆಚ್ಚಿನ ಹಾನಿ ಉಂಟು ಮಾಡುತ್ತದೆ. ಈ ಹುಳು ಮೊಟ್ಟೆಯಿಂದ ಹೊರಬಂದು ಮೊದಲು ಮೊಟ್ಟೆಯ ಸಿಪ್ಪೆಯನ್ನೆ ತಿಂದು ಬದುಕುತ್ತವೆ. ನಂತರ ಗೋವಿನ ಜೋಳದ ಸುಳಿಯಲ್ಲಿ ಉಳಿದುಕೊಂಡು ಸಸ್ಯಗಳ ಹರಿತ್ತನ್ನು ಕೆರೆದು ತಿನ್ನುತ್ತವೆ’ ಎಂದು ಹೇಳಿದರು.

‘ಸೈನಿಕ ಹುಳು ಬಾಧೆಗೆ ಒಳಗಾದ ಬೆಳೆಯಲ್ಲಿ ಎಲೆಗಳು ಜಾಳು ಜಾಳಾಗಿದ್ದು ಅಸ್ಥಿಪಂಜರದಂತೆ ಗೋಚರಿಸುತ್ತವೆ, ಎಲೆಗಳಲ್ಲಿ ದೊಡ್ಡ ದೊಡ್ಡ ರಂಧ್ರಗಳನ್ನು ಕೊರೆಯುತ್ತದೆ. ಕೀಟದ ಬಾಧೆ ತೀವ್ರವಾದಲ್ಲಿ ಬೆಳೆಯುತ್ತಿರುವ ಸುಳಿಯನ್ನೇ ತಿಂದು ಹಾಕಿ ಬೆಳೆಗೆ ಹಾನಿ ಮಾಡುತ್ತವೆ, ಆಗ ಬೆಳೆ ಸತ್ತುಹೋಗುತ್ತದೆ’ ಎಂದು ತಿಳಿಸಿದರು.

‘ಬೆಳೆಯಲ್ಲಿ ಸೈನಿಕ ಹುಳು ಕಂಡುಬಂದ ತಕ್ಷಣವೇ ರೈತರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಹೆಚ್ಚಿನ ಹಾನಿ ಅನುಭವಿಸಬೇಕಾಗುತ್ತದೆ. ಆರಂಭದಲ್ಲಿ ಮುಸುಕಿನ ಜೋಳದ ಬೆಳೆಯಲ್ಲಿ ಕಂಡುಬರುವ ಹುಳುಗಳ ಮೊಟ್ಟೆಗಳನ್ನು ಕೈಯಿಂದ ಆಯ್ದು ನಾಶಪಡಿಸಬೇಕು. ಮರಿ ಹುಳು ಕಂಡ ತಕ್ಷಣ ಬೇವಿನ ಮೂಲದ ಕಿಟನಾಶಕ ಅಜಾಡಿರಾಕ್ಟಿನ್ ಅನ್ನು ಒಂದು ಲೀಟರ್ ನೀರಿಗೆ 0.5 ಮಿ.ಲೀ ಬೆರೆಸಿ ಸಿಂಪರಣೆ ಮಾಡಬೇಕು’ ಎಂದರು.

‘ಕೀಟದ ಹಾನಿ ಕಂಡು ಬಂದಲ್ಲಿ ರೈತರು ಲ್ಯಾಮ್ದಾ ಸೈಹೆಲೋತ್ರಿನ್, ೦.5 ಮಿ.ಲೀ., ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ 0.4 ಗ್ರಾಂ ಅಥವಾ ಕ್ಲೋರ್‍ಯಾಂಟ್ರಿನಿಲಿಪ್ರೊಲ್ 18.5 ಎಸ್.ಸಿ. 0.2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು’ ಎಂದು ಹೇಳಿದರು.

‘ಸುಳಿ ಒಳಗೆ ಸೇರಿದ ಹುಳುಗಳು ಒಮ್ಮೊಮ್ಮೆ ಸಿಂಪರಣೆ ನಾಶವಾಗುವುದಿಲ್ಲ. ಅದಕ್ಕಾಗಿ ಪ್ರತಿ ಹೆಕ್ಟೇರಿಗೆ 50 ಕೆ.ಜಿ. ಭತ್ತ ಅಥವಾ ಗೋಧಿಯ ತೌಡಿನ ಮೇಲೆ 5 ಲೀಟರ್ ನೀರಿನಲ್ಲಿ 250 ಮಿ.ಲೀ. ಮೊನೊಕ್ರೋಟೋಫಾಸ್ 36 ಎಸ್.ಎಲ್. ಕೀಟನಾಶಕವನ್ನು 2 ಕೆ.ಜಿ. ಬೆಲ್ಲದೊಂದಿಗೆ ಬೆರೆಸಿ ತೌಡಿನ ಮೇಲೆ ಸಿಂಪರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಎರಡುದಿನ ಗೋಣಿ ಚೀಲದಲ್ಲಿ ಮುಚ್ಚಿಟ್ಟು, ಬಳಿಕ ಸಂಜೆ ವೇಳೆ ಬೆಳೆಗಳ ಮೇಲೆ ಈ ವಿಷ ಪಾಷಾಣ ಎರಚಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT