ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆಯ ನೌಕರರ ಮುಷ್ಕರ 10ನೇ ದಿನಕ್ಕೆ: ಬೇಡಿಕೆ ಈಡೇರುವವರೆಗೂ ಹೋರಾಟ

Last Updated 5 ಅಕ್ಟೋಬರ್ 2020, 3:29 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯದ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಗುತ್ತಿಗೆ ಮತ್ತುಹೊರ ಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಭಾನುವಾರವೂ ಮುಂದುವರೆದಿದ್ದು, 10ನೇ ದಿನಕ್ಕೆ ಕಾಲಿಟ್ಟಿದೆ.

ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಮುಂದೆ ಮುಷ್ಕರ ನಡೆಸುತ್ತಿದ್ದ ನೌಕರರು, ಭಾನುವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟಿಸಿದರು. ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.

‘15-20 ವರ್ಷಗಳಿಂದ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರೂ ಯಾವುದೇ ಸರ್ಕಾರಿ ಸೌಲಭ್ಯ ನೀಡಿಲ್ಲ. ಬೇಡಿಕೆಗಳನ್ನು ಈಡೇರಿಸಲು ಹಂತ ಹಂತವಾಗಿ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಾಂಕೇತಿಕವಾಗಿ ಹೋರಾಟಗಳನ್ನು ಮಾಡಲಾಗಿದೆ. ಆದರೂ ಸರ್ಕಾರದಿಂದ ಯಾವುದೇ ಸಹಕಾರ, ಸ್ಪಂದನೆ ದೊರೆತಿಲ್ಲ. ಕೋವಿಡ್ ಸಮಯದಲ್ಲಿ ಮನೆ, ಮಠ, ಕುಟುಂಬಗಳನ್ನು ತೊರೆದು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದರೂ ಸರ್ಕಾರ ನಮ್ಮ ತಾಳ್ಮೆ, ಸಹನೆಯನ್ನು ಪರೀಕ್ಷಿಸುತ್ತಿದೆ’ ಎಂದುಅಸಮಾಧಾನ ವ್ಯಕ್ತಪಡಿಸಿದರು.

‘ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಎಂದು ಮಾತ್ರ ಕೇಳುತ್ತಿದ್ದೇವೆ. ಕೆಲಸ ಮಾಡಬೇಕು ಎಂಬ ಕಾಳಜಿ ಇದೆ. ಬೇಡಿಕೆ ಈಡೇರಿಸಿದರೆ ತಕ್ಷಣ ಕೆಲಸಕ್ಕೆ ಹಾಜರಾಗುತ್ತೇವೆ’ ಎಂದು ಮುಖಂಡ ನಾಗರಾಜ್ ತಿಳಿಸಿದರು.

‘ಸರ್ಕಾರದ ಗೊಡ್ಡು ಬೆದರಿಕೆಗಳಿಗೆ ಬೆದರುವುದಿಲ್ಲ. ಕನಿಷ್ಠ ಪಕ್ಷ ನಮ್ಮ ಜೀವನ ಸುಧಾರಿಸುವ ಮಟ್ಟದ ಬೇಡಿಕೆಯನ್ನಾದರೂ ಈಡೇರಿಸದಿದ್ದರೆ ಮುಷ್ಕರ ವಾಪಸ್ ಪಡೆಯುವುದಿಲ್ಲ. ಇನ್ನೂ ಉಗ್ರವಾದ ಹೋರಾಟ ನಡೆಯುತ್ತದೆ. ಕೆಲಸ ಮಾಡುತ್ತಿರುವ ಎಲ್ಲರೂ ಕೂಡಿಕೊಳ್ಳುತ್ತಾರೆ’ ಎಂದು ತಿಳಿಸಿದರು.

ತಾಲ್ಲೂಕು ಅಧ್ಯಕ್ಷ ಡಾ.ಬಸವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಚೌಡಾರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ರಾಜ್ಯ ಪ್ರತಿನಿಧಿ ರುದ್ರೇಶ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜು ಹಾಗೂ ಇತರೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT