ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ತೇನಹಳ್ಳಿಯಲ್ಲಿ ಮೊದಲ ಕೋವಿಡ್ ಕೇಂದ್ರ

ಚಿಂತಾಮಣಿ: 200 ಹಾಸಿಗೆಗಳ ಆರೈಕೆ ಕೇಂದ್ರದಲ್ಲಿ 65 ಮಂದಿಗೆ ಚಿಕಿತ್ಸೆ
Last Updated 10 ಆಗಸ್ಟ್ 2020, 4:33 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಮಸ್ತೇನಹಳ್ಳಿಯ ಅಲ್ಪಸಂಖ್ಯಾತ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 200 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ.

ತಾಲ್ಲೂಕಿನ ಮೊದಲ ಕೋವಿಡ್‌ ಆರೈಕೆ ಕೇಂದ್ರ ಇದಾಗಿದ್ದು, 65 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ದೃಢಪಟ್ಟು ಆದರೆ ಲಕ್ಷಣ ರಹಿತ ಅಥವಾ ಸಣ್ಣ, ಪುಟ್ಟ ಲಕ್ಷಣಗಳಿರುವವರಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹಾಗಾಗಿ ಆಮ್ಲಜನಕ ಪೂರೈಕೆ, ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಿಲ್ಲ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.

ಕೋವಿಡ್ ಕೇಂದ್ರದಲ್ಲಿ ಸಮರ್ಪಕ ಶೌಚಾಲಯ, ಸ್ನಾನಗೃಹ, ಬಿಸಿ ನೀರು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ಸಿಬ್ಬಂದಿ ‍ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸದ್ಯ ಒಂದು ಪಾಳಿಯಲ್ಲಿ ಒಬ್ಬರು ವೈದ್ಯರು, ಒಬ್ಬರು ಸ್ಟಾಫ್ ನರ್ಸ್ ಹಾಗೂ ‘ಡಿ’ ದರ್ಜೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೋವಿಡ್‌ ಕೇಂದ್ರದಲ್ಲಿ ದಾಖಲಾಗುವವರಿಗೆ 10 ದಿನಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಎನಿಸಿದರೆ ಜಿಲ್ಲಾ ಕೋವಿಡ್ ಅಸ್ಪತ್ರೆಗೆ ಕಳುಹಿಸಲಾಗುತ್ತದೆ. ಸೋಂಕಿತರಿಗೆ ಚಿಕಿತ್ಸೆ, ಊಟ, ಉಪಾಹಾರ ನೀಡುವ ಕೊರೊನಾ ವಾರಿಯರ್ಸ್‌ಗೆ ಪ್ರತ್ಯೇಕ ಕೊಠಡಿ ಮೀಸಲಿರಿಸಲಾಗಿದೆ. ತುರ್ತು ಸೇವೆಗಾಗಿ 24 ಗಂಟೆ ಆಂಬುಲೆನ್ಸ್‌ ನಿಯೋಜನೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಸೋಂಕಿತರಿಗಾಗಿ ‘ಎ’ ಮತ್ತು ‘ಬಿ’ ಎರಡು ರೀತಿಯ ಕೇಂದ್ರ ಸಿದ್ಧಪಡಿಸಲಾಗಿದೆ. ಎ ಕೇಂದ್ರ ತಕ್ಷಣ ರೋಗಿಗಳನ್ನು ದಾಖಲಿಸಿಕೊಳ್ಳಲು ಸಿದ್ಧವಾಗಿರುವ ಕೇಂದ್ರ. ಇಲ್ಲಿ 950 ಬೆಡ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಬಿ ಕೇಂದ್ರಗಳು ಎಂದರೆ ಭವಿಷ್ಯದಲ್ಲಿ ಅಗತ್ಯವಾದರೆ ಸಿದ್ಧಮಾಡಿಕೊಳ್ಳಬಹುದಾದ ಕೇಂದ್ರಗಳು. ಇವುಗಳಲ್ಲಿ 900 ಹಾಸಿಗೆಗಳ ಯೋಜನೆ ರೂಪಿಸಲಾಗಿದೆ. ಗಡಿಗವಾರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ರಾಗುಟ್ಟಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸೇರಿದಂತೆ ಸರ್ಕಾರಿ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಸಿದ್ಧಪಡಿಸಲು ಯೋಜಿಸಲಾಗಿದೆ ಎಂದು ತಹಶೀಲ್ದಾರ್ ಹನುಮಂತರಾಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT