ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಆಮ್ಲಜನಕ ಬ್ಯಾಂಕ್ ಆರಂಭ

Last Updated 25 ಮೇ 2021, 7:01 IST
ಅಕ್ಷರ ಗಾತ್ರ

ಚಿಂತಾಮಣಿ: ‘ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಅವಶ್ಯಕತೆ ಇದ್ದರೆ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುವುದು’ ಎಂದು ಅಖಿಲ ಭಾರತ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ಸತ್ಯನಾರಾಯಣ ಮಹೇಶ್ ತಿಳಿಸಿದರು.

ನಗರದ ವಾಸವಿ ರೀಜೆನ್ಸಿ ಬಳಿ ಸೋಮವಾರ ಟ್ರಸ್ಟ್‌ನಿಂದ ಆಮ್ಲಜನಕ ಸಿಲಿಂಡರ್‌ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಆಮ್ಲಜನಕದ ಸೌಲಭ್ಯವಿದೆ. ಆಸ್ಪತೆಯಲ್ಲಿ ಗುಣಮುಖರಾಗಿ ಮನೆಗೆ ತೆರಳಿದ ಕೆಲವರಿಗೆ ಆಮ್ಲಜನಕ ಅಗತ್ಯವಿದೆ ಎಂಬ ಬೇಡಿಕೆಗಳು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಮ್ಲಜನಕ ಬ್ಯಾಂಕ್ ಸ್ಥಾಪಿಸಲಾಗಿದೆ. ಕೊರತೆ ಇದ್ದವರು ಕೋರಿಕೆ ಸಲ್ಲಿಸಿದರೆ ತಕ್ಷಣ ಅವರ ಮನೆಗೆ ನಮ್ಮ ವಾಹನದ ಮೂಲಕ ಉಚಿತವಾಗಿ ಆಮ್ಲಜನಕ ಪೂರೈಸಲಾಗುವುದು ಎಂದರು.

ಬ್ಯಾಂಕಿನಲ್ಲಿ 20 ಸಿಲಿಂಡರ್‌ಗಳು ಸದಾ ಸಿದ್ಧವಾಗಿರುತ್ತವೆ. ಆರಂಭದಲ್ಲಿ ಆಸ್ಪತ್ರೆಗೆ ಸಿಲಿಂಡರ್‌ಗಳ ವ್ಯವಸ್ಥೆ ಮಾಡಲು ಆದ್ಯತೆ ನೀಡಲಾಗಿತ್ತು. ಈಗ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಿಲಿಂಡರ್‌ಗಳ ಕೊರತೆ ಇಲ್ಲ. ಮುಂದಿನ ಹಂತವಾಗಿ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದವರಿಗೆ ವೈದ್ಯರ ಸೂಚನೆ ಇದ್ದರೆ ಮಾತ್ರ ಉಚಿತವಾಗಿ ಆಮ್ಲಜನಕ ಸಿಲಿಂಡರ್ ನೀಡುತ್ತೇವೆ.
ಅವರು ಉಪಯೋಗಿಸಿಕೊಂಡು ಸಿಲಿಂಡರ್ ಹಿಂತಿರುಗಿಸಬೇಕು ಎಂದು ತಿಳಿಸಿದರು.

‘ಈ ವಿಚಾರವಾಗಿ ಚಿರಂಜೀವಿ ಬಳಿ ಮಾತನಾಡಿದಾಗ ನೆರೆಯ ಆಂದ್ರಪ್ರದೇಶದಲ್ಲಿ ಸಿಲಿಂಡರ್‌ಗಳನ್ನು ಈ ರೀತಿ ಪೂರೈಕೆ ಮಾಡುತ್ತಿರುವುದಾಗಿ ತಿಳಿಸಿದರು. ನಾವು ಕೂಡ ಮನೆಗೆ ಉಚಿತ ಸಿಲಿಂಡರ್ ಸರಬರಾಜು ಮಾಡುವ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ ಎಂದಾಗ ಅವರು ತುಂಬಾ ಸಂತೋಷಪಟ್ಟರು’ ಎಂದು ಸತ್ಯನಾರಾಯಣ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ ಮಾತನಾಡಿ, ‘ಚಿಕ್ಕಬಳ್ಳಾಪುರ, ಬೆಂಗಳೂರು ಎಂಬ ದೊಡ್ಡ ನಗರಗಳಲ್ಲಿ ಮನೆಗೆ ಆಮ್ಲಜನಕ ಸಿಲಿಂಡರ್ ಬಾಡಿಗೆಗೆ ನೀಡುತ್ತಾರೆ. ಚಿಂತಾಮಣಿಯಲ್ಲೂ ಈ ಯೋಜನೆಯನ್ನು ಉಚಿತವಾಗಿ ಆರಂಭಿಸಿರುವುದು ಉತ್ತಮ ಕಾರ್ಯಕ್ರಮವಾಗಿದೆ. ನಮ್ಮ ಆಸ್ಪತೆಗಳಲ್ಲಿ ಗುಣಮುಖರಾಗಿದ್ದರೂ ಆಮ್ಲಜನಕ ಅಗತ್ಯ ಇರುವುದರಿಂದ ಕೆಲವರು ಮನೆಗೆ ಹೋಗಲು ಭಯಪಡುತ್ತಿದ್ದರು. ಈಗ ಭಯ ಪಡುವ ಅಗತ್ಯವಿಲ್ಲ’ ಎಂದರು.

ತಹಶೀಲ್ದಾರ್ ಹನುಮಂತರಾಯಪ್ಪ ಮತ್ತು ಇನ್‌ ಸ್ಪೆಕ್ಟರ್ ಆನಂದ್ ಕುಮಾರ್ ಮಾತನಾಡಿ ಉತ್ತಮವಾದ ಕಾರ್ಯ ಎಂದು ಶ್ಲಾಘಿಸಿದರು.

ಕೋವಿಡ್ ನೋಡಲ್ ಅಧಿಕಾರಿ ಪ್ರಸಾದ್, ವಕೀಲರಾದ ನಾ.ಶಂಕರ್, ರಾಜೇಶ್, ಮಂಜುನಾಥರೆಡ್ಡಿ, ಮುಖಂಡರಾದ ಕವಾಲಿ ನಾಗರಾಜ್, ವೆಂಕಟರೆಡ್ಡಿ, ಮಂಜುನಾಥಚಾರಿ, ಸುನಿಲ್, ಸಿ.ಆರ್.ವೆಂಕಟೇಶ್, ಕಾಗತಿ ಎಂ.ಎನ್.ನಾಗರಾಜ್, ವಾಸವಿ ಸುರೇಶ್, ಆನಂದ್, ಬೂಸ ರಾಜೇಶ್, ಪೂಜಾರಿ ಸುರೇಶ್ ಹಾಗೂ ಚಿರಂಜೀವಿ ಅಭಿಮಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT