‘ಪರಿಸರ ಸ್ನೇಹಿ’ ಮಣ್ಣಿನ ಗಣಪತಿ ಸಿದ್ಧ: ಚಿನ್ನರ ಮುದಗೊಳಿಸಿದ ಮಣ್ಣಿನ ಬೆನಕ

7
ಬ್ಯಾಗ್ ರಹಿತ ದಿನವಾದ ಶನಿವಾರ ಶಾಲೆಗಳಲ್ಲಿ ಗಣಪತಿ ಸಿದ್ಧಪಡಿಸಿ ಸಂತಸ ಪಟ್ಟ ವಿದ್ಯಾರ್ಥಿಗಳು

‘ಪರಿಸರ ಸ್ನೇಹಿ’ ಮಣ್ಣಿನ ಗಣಪತಿ ಸಿದ್ಧ: ಚಿನ್ನರ ಮುದಗೊಳಿಸಿದ ಮಣ್ಣಿನ ಬೆನಕ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಬ್ಯಾಗ್ ರಹಿತ ದಿನ’ವಾದ ಶನಿವಾರ ಮಣ ಭಾರದ ಬ್ಯಾಗನ್ನು ಮನೆಯಲ್ಲಿಯೇ ಬಿಟ್ಟು ಜಿಂಕೆಯಂತೆ ಪುಟ ನೆಗೆಯುತ್ತ ಶಾಲೆಗೆ ಬಂದಿದ್ದ ಮಕ್ಕಳೆಲ್ಲ ಆವರಣದಲ್ಲಿ ಕುಳಿತು ಗುಡ್ಡೆ ಹಾಕಿದ ಮಣ್ಣನ್ನು ನೀರು ಬೆರೆಸಿ ಹದಗೊಳಿಸಿದರು. ಹಸಿ ಮುದ್ದೆಯಾದ ಮಣ್ಣಿನಲ್ಲಿ ಪುಟ್ಟ ಗಣೇಶನನ್ನು ಹೇಗೆ ತಯಾರಿಸಬಹುದು ಎಂದು ತೋರಿಸುವ ಮೂಲಕ ಶಿಕ್ಷಕರು ಮಕ್ಕಳನ್ನು ಮುದಗೊಳಿಸಿದರು.

ಪರಿಸರಕ್ಕೆ ಹಾನಿಕಾರಕವಾದ ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸದೆ, ‘ಪರಿಸರ ಸ್ನೇಹಿ’ಯಾದ ಮಣ್ಣಿನ ಗಣಪತಿ ಮೂರ್ತಿಗಳನ್ನು ಸ್ವಯಂ ಸಿದ್ಧಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಶಿಬಿರ ಆಯೋಜಿಸಿತ್ತು.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನಗರದ ಬಿ.ಬಿ.ರಸ್ತೆಯಲ್ಲಿರುವ ಸರ್ಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಆವಲಗುರ್ಕಿ, ನಂದಿ, ಪೆರೇಸಂದ್ರ ಸೇರಿದಂತೆ ಅನೇಕ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಣ್ಣಿನಲ್ಲಿ ಸರಳವಾಗಿ ಗಣೇಶನ ಮೂರ್ತಿಯನ್ನು ಸಿದ್ಧಪಡಿಸುವ ‘ಕರಕುಶಲ’ ಕಲೆಯನ್ನು ತೋರಿಸಿಕೊಟ್ಟು, ಖುಷಿ ಪಡಿಸಿದರು.

ಶಿಕ್ಷಕರು ತೋರಿಸಿಕೊಟ್ಟ ರೀತಿಯಲ್ಲೇ ಮಣ್ಣನ್ನು ಹದಗೊಳಿಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ, ಒಂದಕ್ಕೊಂದು ಜೋಡಿಸಿ, ತಿದ್ದಿತೀಡಿ ಪುಟಾಣಿ ವಿನಾಯಕನನ್ನು ಸೃಷ್ಟಿಸಿದ ವಿದ್ಯಾರ್ಥಿಗಳ ಮಂದಹಾಸ ಮನೆ ಮಾಡಿತ್ತು. ಅನೇಕ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಬೆನಕನ ಮೂರ್ತಿಯನ್ನು ತಮ್ಮೊಂದಿಗೆ ಮನೆಗೆ ತೆಗೆದುಕೊಂಡು ಹೋದರು.

ಬಿ.ಬಿ.ರಸ್ತೆಯಲ್ಲಿರುವ ಸರ್ಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ಶಿಕ್ಷಕ ಸತೀಶ್‌, ‘ಕೆರೆ, ಕುಂಟೆಯಂತ ಜಲಮೂಲಗಳಿಗೆ, ಜಲಚರಗಳಿಗೆ ಕಂಟಕವಾದ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ಪಿಒಪಿ ಮೂರ್ತಿಗಳಿಗೆ ಪರ್ಯಾಯವಾಗಿ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿ ತಯಾರಿಸಬಹುದು. ರಾಸಾಯನಿಕ ಬಣ್ಣಗಳ ಬದಲಾಗಿ ಎಲೆ, ಹೂವುಗಳಿಂದ ಸಿದ್ಧಪಡಿಸಿದ ನೈಸರ್ಗಿಕ ಬಣ್ಣಗಳನ್ನು ಲೇಪಿಸಿದರೆ ಜಲಮಾಲಿನ್ಯ ತಡೆಗಟ್ಟಬಹುದು’ಎಂದು ಹೇಳಿದರು.

‘ಪಿಒಪಿ ಮೂರ್ತಿಗಳನ್ನು ಕೆರೆ, ಬಾವಿಗಳಲ್ಲಿ ವಿಸರ್ಜಿಸಿದರೆ ಅವು ಕರಗುವುದಿಲ್ಲ. ಬದಲು ನೀರು ಮಲೀನಗೊಳ್ಳುವ ಜತೆಗೆ ಮೀನಿನಂತಹ ಜಲಚರಗಳಿಗೆ ಪ್ರಾಣಕ್ಕೆ ಸಂಚಕಾರ ಬರುತ್ತದೆ. ಅದೇ ಮಣ್ಣಿನ ಮೂರ್ತಿಗಳು ಬಹುಬೇಗ ನೀರಿನಲ್ಲಿ ಕರಗುತ್ತವೆ. ಪರಿಸರಕ್ಕೂ ಹಾನಿ ಉಂಟು ಮಾಡುವುದಿಲ್ಲ. ವಿಶೇಷವಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸುವಾಗಲೇ ಅದೊಳಗೆ ಬೀಜಗಳನ್ನು ಅಡಗಿಸಿಟ್ಟರೆ, ಮೂರ್ತಿಗಳನ್ನು ವಿಸರ್ಜನೆ ಮಾಡಿದಾಗ ಅಲ್ಲೊಂದು ಸಸಿ ಬೆಳೆದು ಹಸಿರು ಹೆಚ್ಚುತ್ತದೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !