ಭಾನುವಾರ, ಸೆಪ್ಟೆಂಬರ್ 19, 2021
25 °C
ಹೈದರಾಬಾದ್ ಮಾರುಕಟ್ಟೆಗೂ ಹೂ ಪೂರೈಕೆ

ದೆಹಲಿಯಲ್ಲೂ ಗ್ಲಾಡಿಯಸ್ ಘಮ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ಗ್ಲಾಡಿಯಸ್ ಹೂವಿನ ಘಮ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹರಡಿದೆ. ಜಿಲ್ಲೆಯಲ್ಲಿ ಹೂ ಬೇಸಾಯ ಪ್ರಮುಖವಾಗಿದೆ. ಸೇವಂತಿಗೆ, ಗುಲಾಬಿ, ಗ್ಲಾಡಿಯಸ್ ಮತ್ತಿತರ ಹೂಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಕತ್ರಿಗುಪ್ಪೆ, ಮರಳುಕುಂಟೆ, ಅಂಗರೇಖನಹಳ್ಳಿ, ನಲ್ಲಿಮರದಹಳ್ಳಿ, ಹಿರೇನಹಳ್ಳಿ, ಕಾಡದಿಬ್ಬೂರು ಗ್ರಾಮಗಳಲ್ಲಿ ಬಹಳಷ್ಟು ರೈತರು ಗ್ಲಾಡಿಯಸ್ ಬೆಳೆಯುತ್ತಾರೆ.

ಗ್ಲಾಡಿಯಸ್ ಹೂವಿಗೆ ನವದೆಹಲಿಯಲ್ಲಿ ಉತ್ತಮ ಮಾರುಕಟ್ಟೆ ಇದೆ. ಜುಲೈನಿಂದ ಅಕ್ಟೋಬರ್‌ವರೆಗೆ ಗ್ಲಾಡಿಯಸ್ ಹೂವಿನ ಕಾಲ. ಈ ಅವಧಿಯಲ್ಲಿ ಸಮೃದ್ಧ ಫಸಲು ದೊರೆಯುತ್ತದೆ. ಕತ್ರಿಗುಪ್ಪೆ ಹಾಗೂ ಸುತ್ತಲಿನ ಹಳ್ಳಿಗಳ ಜನರು ಈ ಅವಧಿಯಲ್ಲಿ ಗ್ಲಾಡಿಯಸ್ ಹೂವನ್ನು ನವದೆಹಲಿಗೆ ಕಳುಹಿಸುವರು. ಉಳಿದ ಸಮಯದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಮಾರುಕಟ್ಟೆಯನ್ನು ರೈತರು ಅವಲಂಬಿಸಿದ್ದಾರೆ. ‌

‘ಕತ್ರಿಗುಪ್ಪೆಯಲ್ಲಿ ಸುಮಾರು 150 ಮನೆಗಳಿವೆ. ಶೇ 90ರಷ್ಟು ರೈತರು ಗ್ಲಾಡಿಯಸ್ ಹೂ ಬೆಳೆಯುವರು. 20 ಹೂಗಳ ಒಂದು ಕಂತೆ ಕಟ್ಟಲಾಗುವುದು. ಒಂದು ಬಾಕ್ಸ್‌ನಲ್ಲಿ 35ರಿಂದ 40 ಕಂತೆಗಳನ್ನು ಇರಿಸಿ ದೆಹಲಿಗೆ ಕಳುಹಿಸುತ್ತೇವೆ’ ಎಂದು ಕತ್ರಿಗುಪ್ಪೆಯ ರೈತ ರಾಮಾಂಜಿನಪ್ಪ ಮಾಹಿತಿ ನೀಡುತ್ತಾರೆ. 

‘ಗ್ಲಾಡಿಯಸ್‌ನಿಂದ ರೈತರಿಗೆ ಒಳ್ಳೆಯದಾಗಿದೆ. 1981ರಿಂದ ಈ ಹೂ ಬೆಳೆಯುತ್ತಿದ್ದೇವೆ. 1983ರಿಂದ ಮಾರುಕಟ್ಟೆ ಕಂಡುಕೊಂಡಿದ್ದೇನೆ. 20 ಗುಂಟೆಯ ತಾಕುಗಳನ್ನು ವಿಂಗಡಿಸಿ ಹಂತ ಹಂತವಾಗಿ ಹೂ ಬೆಳೆಯಲಾಗುತ್ತದೆ. ಗಡ್ಡೆಗಳನ್ನು ನಾವೇ ಸ್ವಂತ ಉತ್ಪಾದನೆ ಮಾಡಿಕೊಳ್ಳುತ್ತೇವೆ. ಮಾರುಕಟ್ಟೆಗೆ ತೊಂದರೆಯಿಲ್ಲ’ ಎಂದು ವಿವರಿಸಿದರು.

ಕೊಟ್ಟಿಗೆ ಗೊಬ್ಬರ, ಔಷಧಿ, ರಾಸಾಯನಿಕ ಗೊಬ್ಬರಕ್ಕೆ ವೆಚ್ಚವಾಗುತ್ತದೆ. ಇಷ್ಟೆಲ್ಲವಾದರೂ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಈ ಬೆಳೆ ಸಹಕಾರಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು