ಸೋಮವಾರ, ಆಗಸ್ಟ್ 15, 2022
22 °C
ಮಾಜಿ ಸಂಸದ ಹಾಗೂ ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ ಆರ್.ಧ್ರುವನಾರಾಯಣ ಆರೋಪ

ನಿಷ್ಪ್ರಯೋಜಕ ವಿಷಯಗಳಿಗೆ ಸರ್ಕಾರಗಳ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ವಿಫಲವಾದ ರಾಜ್ಯ ಸರ್ಕಾರ ಸಿನಿಮಾ ನಟಿಯರನ್ನು ತೋರಿಸಿ ಕೋವಿಡ್ ನಿರ್ವಹಣೆಯಲ್ಲಿ ಆಗಿರುವ ವೈಫಲ್ಯಗಳನ್ನು ಬೆಳಕಿಗೆ ಬಾರದಂತೆ ನೋಡಿಕೊಳ್ಳುತ್ತಿದೆ’ ಎಂದು ಮಾಜಿ ಸಂಸದ ಹಾಗೂ ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ ಆರ್.ಧ್ರುವನಾರಾಯಣ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ನಿಯಂತ್ರಣದಲ್ಲಿ ಎಡವಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಧೋರಣೆಯಿಂದ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿದೆ. ಭಾರತ ಕೆಲವೇ ದಿನಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕಾ ಹಿಂದಿಕ್ಕಲಾಗಿದೆ. ಕೋವಿಡ್ ನಿಯಂತ್ರಿಸಬೇಕಾದ ಸಚಿವರು ಹೇಳಿಕೆಗಳಿಗೆ ಸೀಮಿತರಾಗಿದ್ದಾರೆ‘ ಎಂದು ಹೇಳಿದರು.

‘ಜನರನ್ನು ಬಾಧಿಸುವ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರ ಕಲ್ಪಿಸಬೇಕಾದವರು ನಿಷ್ಪ್ರಯೋಜಕ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆರ್ಥಿಕ ಸ್ಥಿತಿ ಹದಗೆಟ್ಟು ತಳ ಕಚ್ಚಿದರೂ, ನಿರುದ್ಯೋಗ ಸಮಸ್ಯೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚಿದರೂ ಬಿಜೆಪಿಯವರು ಭಂಡತನದಿಂದ ಆಡಳಿತ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಬೇಕಾದ ಜವಾಬ್ದಾರಿ ಕಾರ್ಯವನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮದಡಿ ರಾಜ್ಯ 224 ಕ್ಷೇತ್ರಗಳಲ್ಲಿಯೂ 15 ಸಾವಿರ ಕಾರ್ಯಕರ್ತರಿಗೆ ತರಬೇತಿ ನೀಡಿ, ಕೋವಿಡ್ ಹತೋಟಿ ತರಲು ಮುಂದಾಗಿದೆ. ರಾಜ್ಯದ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುವುದು’ ಎಂದರು.

‘ಆರೋಗ್ಯ ಹಸ್ತ ಕಾರ್ಯಕ್ರಮ ರಾಜ್ಯದಲ್ಲಿ ಒಂದು ತಿಂಗಳು ನಡೆಯಲಿದೆ. 350 ವೈದ್ಯರ ತಂಡ ವೈದ್ಯಕೀಯ ನೆರವಿಗೆ ಮುಂದೆ ಬಂದಿದೆ. ತರಬೇತಿ ಪಡೆದ ಕಾರ್ಯಕರ್ತರಿಗೆ ₹4,500 ರಿಂದ ₹8,500 ಮೌಲ್ಯದ ಆರೋಗ್ಯ ತಪಾಸಣಾ ಸಾಧನಗಳನ್ನು ವಿತರಿಸಲಾಗುತ್ತಿದೆ’ ಎಂದು ಹೇಳಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ‘ಬಿಜೆಪಿಯು ಪುಣ್ಯಕೋಟಿ ಕಥೆ ಹೇಳಿಕೊಂಡು ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿ ಬಳಿಕ ಜನರನ್ನು ಸಂಕಷ್ಟದತ್ತ ದೂಡಿದೆ. ಭೀಕರ ಪ್ರವಾಹ, ಕೋವಿಡ್ ಸಂಕಷ್ಟದ ಸಮಯದಲ್ಲೂ ರಾಜ್ಯಕ್ಕೆ ನ್ಯಾಯಯುತ ಅನುದಾನ ನೀಡದೆ ಮಲತಾಯಿ ಧೋರಣೆ ಮಾಡುತ್ತಿದೆ’ ಎಂದು ಆರೋಪಿಸಿದರು. 

‘ಕೋಮು ಗಲಭೆಗಳ ವೇಳೆ ಪ್ರತ್ಯಕ್ಷವಾಗುವ ರಾಜ್ಯದ 25 ಬಿಜೆಪಿ ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಚಕಾರ ಎತ್ತದೆ, ಮೌನಕ್ಕೆ ಶರಣಾಗಿರುವುದು ರಾಜ್ಯದ ಜನರ ದೌರ್ಭಾಗ್ಯ’ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ಜಿ.ಎಚ್.ನಾಗರಾಜ್, ಎಂ.ಆಂಜಿನಪ್ಪ, ಯಲುವಳ್ಳಿ ಎನ್.ರಮೇಶ್, ಅಡ್ಡಗಲ್ ಶ್ರೀಧರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಚಂಪಾ ಪ್ರಕಾಶ್, ಶ್ರೀನಿವಾಸ್ ಪಾಟೀಲ್, ವೈದ್ಯರಾದ ಡಾ.ರವಿ, ಡಾ.ಕಿಶೋರ್, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.