ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಂಡ್ಲಿವಾರಹಳ್ಳಿಯ ‘ಚೊಕ್ಕ’ ಸರ್ಕಾರಿ ಶಾಲೆ

ಚಿಕ್ಕ ಶಾಲೆಯಲ್ಲಿ ಕಡಿಮೆ ಮಕ್ಕಳಿದ್ದರೂ, ಕಲಿಕೆಯಲ್ಲಿ ಮುನ್ನಡೆ
Published 9 ಸೆಪ್ಟೆಂಬರ್ 2023, 6:53 IST
Last Updated 9 ಸೆಪ್ಟೆಂಬರ್ 2023, 6:53 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಪೆಂಡ್ಲಿವಾರಹಳ್ಳಿಯ ಸರ್ಕಾರಿ ಶಾಲೆಯು ಚಿಕ್ಕದಾಗಿ ಮತ್ತು ಕಡಿಮೆ ವಿದ್ಯಾರ್ಥಿಗಳಿದ್ದರೂ, ಇತರೆ ಶಾಲೆಗಳಿಗಿಂತ ಯಾವುದೇ ವಿಚಾರದಲ್ಲಿ ಕಡಿಮೆ ಇಲ್ಲ ಎಂಬಂತಿದೆ. 

ಪೆಂಡ್ಲಿವಾರಹಳ್ಳಿ ಶಾಲೆಯು 1982ರಲ್ಲಿ ಆರಂಭವಾಗಿದ್ದು, ಪ್ರಸ್ತುತ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗಾಗಿ ನಿರಂತರ ನಡೆಯುವ ಹೊಸ ಕಾರ್ಯಕ್ರಮಗಳಿಂದಾಗಿ ಈ ಶಾಲೆಯು ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. 

ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ವಿಭಾಗದಲ್ಲಿ ಒಟ್ಟಾರೆ 10 ವಿಭಾಗಗಳಲ್ಲಿ ಆರು ಪ್ರಥಮ ಸ್ಥಾನವನ್ನು ಈ ಶಾಲೆಯೇ ಮುಡಿಗೇರಿಸಿಕೊಂಡಿದೆ. ಎರಡು ದ್ವಿತೀಯ ಸ್ಥಾನ ಹಾಗೂ ಹಿರಿಯರ ವಿಭಾಗದಲ್ಲೂ ಎರಡು ಪ್ರಥಮ ಸ್ಥಾನಗಳನ್ನು ಮುಡಿಗೇರಿಸಿಕೊಂಡಿದೆ. 

ಈ ಶಾಲೆಯಲ್ಲಿ ಕೇವಲ 15 ಮಕ್ಕಳಿದ್ದರೂ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಯಾರು ಬೇಕಾದರೂ ಪ್ರತಿಭೆ ಸಂಪಾದಿಸಬಹುದು ಎಂಬುದನ್ನು ಈ ಶಾಲೆ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ. 

ಲಘು ಸಂಗೀತ, ಭಗವದ್ಗೀತೆ, ಭಕ್ತಿಗೀತೆ, ಕಥೆ ಹೇಳುವುದರಲ್ಲಿ ‌ವಿದ್ಯಾರ್ಥಿಗಳು ಮುಂದಿದ್ದಾರೆ. 

ಗುಡ್ಡಗಾಡು, ಸರಿಯಾದ ರಸ್ತೆ ಮತ್ತು ಸಾರಿಗೆ ಸೌಲಭ್ಯವಿಲ್ಲದ ಕುಗ್ರಾಮದಲ್ಲಿದ್ದರೂ, ಈ ಶಾಲೆಯಲ್ಲಿ ಮೂಲ ಸೌಕರ್ಯ ಸೇರಿದಂತೆ ಸಕಲ ಸೌಕರ್ಯಗಳಿಂದ ಕೂಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಯಾವುದೇ ಕುಂದು ಕೊರತೆ ಇಲ್ಲದೆ ಓದು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂಬುದು ಶಾಲಾ ಶಿಕ್ಷಕರ ಅಂಬೋಣ. 

ಒಂದು ಶಾಲೆ ಬೆಳೆಯಲು ಸಮುದಾಯದ ‌ಪಾತ್ರ ಬಹುದೊಡ್ಡದು ಎಂಬುದಕ್ಕೆ ಈ ಶಾಲೆ ಉತ್ತಮ ಉದಾಹರಣೆ. ಶಾಲೆಗೆ ಸುಣ್ಣ ಬಣ್ಣಗಳಿಂದ ಹಿಡಿದು, ಒಂದು ಹೊಸ ಕೊಠಡಿ ನಿರ್ಮಾಣದವರೆಗೂ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ. ಹಿಂದೆ ಮಳೆಗೆ ಸೋರುತ್ತಿದ್ದ ಶಾಲೆಯಲ್ಲಿ ಇಂದು ಮೂರು ಸುಸಜ್ಜಿತವಾದ ಕೊಠಡಿಗಳು, ಟೈಲ್ಸ್, ಹೊರಗೆ ಪಾರ್ಕಿಂಗ್ ಟೈಲ್ಸ್‌ ಅಳವಡಿಸಿ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಹೇಳುವರು. 

ನಲಿಕಲಿ ಟೇಬಲ್, ಕಂಪ್ಯೂಟರ್, ಶುದ್ಧ ಕುಡಿಯುವ ನೀರು, ಬೀರೂಗಳು ಮುಂತಾದ ಪೀಠೋಪಕರಣ ಮತ್ತು ಭೌತಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ. ಮಕ್ಕಳಿಗೆ ಎರಡನೇ ಸಮವಸ್ತ್ರ, ಕಥೆಪುಸ್ತಕ, ಕ್ರೀಡಾಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಇದಕ್ಕೆ ವಾಟ್ಸ್ಆ್ಯಪ್ ಗ್ರೂಪ್  ಗೆಳೆಯರಿಂದ ಹಿಡಿದು, ಸಂಕಲ್ಪ ಟೀಮ್, ಪ್ರಣತಿ, ಗ್ರಾಮಾಂತರ, ಸಾಯಿ‌ರಾಂ ಟೀಮ್ ನಂಥ ಸಂಸ್ಥೆಗಳು ನೆರವು ನೀಡಿವೆ ಎನ್ನುತ್ತಾರೆ ಸಂದೀಪ್ ರೆಡ್ಡಿ. 

ನಿತ್ಯ ರುಚಿಕರ, ಪೋಷಕಾಂಶಯುಕ್ತ ಅಡುಗೆ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತದೆ. ಜತೆಗೆ ಸ್ಥಳೀಯವಾಗಿ ಸಿಗುವ ಸಾವಯವ ಮತ್ತು ಔಷಧೀಯ ಗುಣಗಳುಳ್ಳ ಕಾಯಿಪಲ್ಲೆಗಳನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಮಕ್ಕಳಿಗೆ ಶಾಲೆಯಲ್ಲೇ ಉಚಿತ ವೈದ್ಯಕೀಯ ತಪಾಸಣೆ, ಕಾರ್ಯಗಾರಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಆರೋಗ್ಯ ಕಾಳಜಿ ಮೂಡಿಸಲಾಗುತ್ತಿದೆ. 

ಈ ಶಾಲೆಯಲ್ಲಿ ಮಕ್ಕಳಿಗೆ ಪರಿಸರ ಕಾಳಜಿ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆಯಲ್ಲಿ ಸ್ಥಳಾವಕಾಶದ ಕೊರತೆಯಿದ್ದರೂ, ಇರುವ ಜಾಗ ಮತ್ತು ರಸ್ತೆ ಪಕ್ಕ ಸಸಿ ಮತ್ತು ಗಿಡಗಳನ್ನು ನೆಡಲಾಗಿದೆ. ಸಣ್ಣ ಸಸಿಗಳು ಈಗ ದೊಡ್ಡ ಮರಗಳಾಗಿ ಶಾಲೆ ಮುಂದೆ ಕಂಗೊಳಿಸುತ್ತಿವೆ.

ಪಾವನಿ
ಪಾವನಿ
ಗೋವಿಂದಪ್ಪ
ಗೋವಿಂದಪ್ಪ
ನಂದಿಶ್ರೀ
ನಂದಿಶ್ರೀ
ಚನ್ನಕೃಷ್ಣ
ಚನ್ನಕೃಷ್ಣ
ನಮಗೆ ಮನೆಗಿಂತ ಶಾಲೆಯೇ ಇಷ್ಟ. ಆಟ ಕ್ರಾಫ್ಟ್ ಹಾಡು ನೃತ್ಯ ಜತೆಗೆ ಮೊಬೈಲ್ ಕಂಪ್ಯೂಟರ್‌ನಲ್ಲಿ ಪಾಠ ಹೇಳಿಕೊಡುತ್ತಾರೆ. ಶಾಲೆಯಲ್ಲಿ ರುಚಿಯಾದ ಊಟವಿರುತ್ತದೆ
ಪಾವನಿ 3ನೇ ತರಗತಿ ವಿದ್ಯಾರ್ಥಿನಿ‌
ಈ ಶಾಲೆಯಲ್ಲಿ ಎಲ್ಲವೂ ಇದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗನಲ್ಲಿ ಉಂಟಾಗಿರುವ ಕಲಿಕಾ ಆಸಕ್ತಿ ಶ್ರದ್ಧೆ ಕೆಲಸದಲ್ಲಿ ನಾಯಕತ್ವ ವಹಿಸುವ ಗುಣಗಳ ಬಗ್ಗೆ ಹೆಮ್ಮೆಯಿದೆ. ಅದನ್ನು ಬೆಳೆಸುತ್ತಿರುವ ಶಿಕ್ಷಕರ ಬಗ್ಗೆ ಗೌರವವಿದೆ
ಗೋವಿಂದಪ್ಪ ಎಸ್‌ಡಿಎಂಸಿ ಅಧ್ಯಕ್ಷ
ಶಾಲೆಯಲ್ಲಿ ಪ್ರತಿನಿತ್ಯವೂ ಹೊಸ ರೀತಿಯ ಚಟುವಟಿಕೆಗಳಿರುತ್ತವೆ. ತರಗತಿಯಲ್ಲಿ ಯಾರೂ ಮೌನವಾಗಿ ಕೂರುವಂತಿಲ್ಲ. ಹೆಚ್ಚು ಪ್ರಶ್ನೆ ಕೇಳುವವರನ್ನು ನಮ್ಮ ಶಿಕ್ಷಕರು ಮೆಚ್ಚಿಕೊಳ್ಳುತ್ತಾರೆ
ನಂದಿಶ್ರೀ 5ನೇ ತರಗತಿ ವಿದ್ಯಾರ್ಥಿನಿ
ಶಿಸ್ತಿನ ಹೆಸರಿನಲ್ಲಿ ಮಕ್ಕಳನ್ನು ಕಟ್ಟಿಹಾಕಲ್ಲ. ಅವರು ಸ್ವತಂತ್ರವಾಗಿ ಮತ್ತು ಸಂತೋಷದಿಂದ ಅರಳಲು ಬೇಕಾದ ಸೂಕ್ತ ವಾತಾವರಣ ಕಲ್ಪಿಸಲು ಸದಾ ಪ್ರಯತ್ನಿಸುತ್ತೇವೆ. ಮಗುನಲ್ಲಿನ ಸಾಮರ್ಥ್ಯ ಗುರುತಿಸಿ ಪೋಷಿಸುತ್ತೇವೆ.
ಚನ್ನಕೃಷ್ಣ ಶಿಕ್ಷಕ

ಪ್ರತಿನಿತ್ಯವೂ ಹಾಡು ನೃತ್ಯ 2021–22ನೇ ಸಾಲಿನಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕಾರಕ್ಕೆ ಈ ಶಾಲೆಯ ಶಿಕ್ಷಕಿ ವಿ. ಉಷಾ ಭಾಜನರಾಗಿದ್ದರು. ಶಾಲೆ ಕುರಿತು ಪ್ರತಿಕ್ರಿಯಿಸಿದ ಅವರು ‘ನಮ್ಮ ಶಾಲೆಯಲ್ಲಿ ಹಾಡು ನೃತ್ಯ ಕಥೆ ಮತ್ತು ಕವನ ಹೇಳುವುದು ಕೇವಲ ಜುಲೈ ಆಗಸ್ಟ್ (ಪ್ರತಿಭಾ ಕಾರಂಜಿಗೆ) ತಿಂಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಇದು ನಿತ್ಯದ ಚಟುವಟಿಕೆಯಾಗಿದೆ.  ಇದೇ ಕಾರಣದಿಂದಾಗಿ ಮಕ್ಕಳು ಸರಾಗವಾಗಿ ಸುಶ್ರಾವ್ಯವಾಗಿ ಹಾಡುತ್ತಾರೆ ಮತ್ತು ಅಭಿನಯಿಸುತ್ತಾರೆ’ ಎನ್ನುತ್ತಾರೆ. ಆಂಗ್ಲಭಾಷೆ ಕಲಿಕೆಗೂ ಒತ್ತು ಅಂಗನವಾಡಿ ಕೇಂದ್ರದಿಂದಲೇ ಮಕ್ಕಳಿಗೆ ಆಂಗ್ಲಭಾಷೆಯ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಈ ಮೂಲಕ ಮೂಲಕ ಅದೊಂದು ಅಪರಿಚಿತ ಭಾಷೆಯಲ್ಲ ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಲಾಗುತ್ತಿದೆ. ಆಟ ಕಥೆ ನಾಟಕ ಸಂಭಾಷಣೆ ಫ್ಲಾಶ್ ಕಾರ್ಡ್ಸ್ ರೈಮ್ಸ್ ಫಜಲ್ಸ್‌ಗಳನ್ನು ಬಳಸಿ ಭಾಷಾ(ಕನ್ನಡ ಮತ್ತು ಇಂಗ್ಲೀಷ್) ಪ್ರೀತಿ ಬೆಳೆಸಲಾಗುತ್ತಿದೆ. ಜತೆಗೆ ಇದರಿಂದ ಕಲಿಕೆಯೂ ಸುಲಭವಾಗುತ್ತಿದೆ.  ಗಣಿತ ಮತ್ತು ವಿಜ್ಞಾನದ ವಿಷಯಗಳ ಪರಿಕಲ್ಪನೆಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪರಿಸರ ಭೇಟಿ ಮಾದರಿಗಳ ವೀಕ್ಷಣೆ ಪ್ರಯೋಗ ಅನ್ವೇಷಣೆಗಳನ್ನು ಮಾಡಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT