ಶನಿವಾರ, ಜುಲೈ 31, 2021
24 °C
ಗ್ರಾಮ ಪಂಚಾಯಿತಿ ನೌಕರರ ಬಾಕಿ ವೇತನ ನೀಡಲು ಆಗ್ರಹ

ಸಿಬ್ಬಂದಿ ವೇತನಕ್ಕಾಗಿ ₹382 ಕೋಟಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಗ್ರಾಮ ಪಂಚಾಯಿತಿ ನೌಕರರ ವೇತನಕ್ಕೆ ಬೇಕಾಗಿರುವ ಹಣವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಿರುವುದು ಸ್ವಾಗತಾರ್ಹ. ರಾಜ್ಯದ 6,024 ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 65 ಸಾವಿರ ಸಿಬ್ಬಂದಿಗೆ ಸುಮಾರು ₹900 ಕೋಟಿ ಬೇಕಾಗಿದೆ. ಆದರೆ ಹಣಕಾಸು ಇಲಾಖೆ ₹518 ಕೋಟಿಗೆ ಮಾತ್ರ ಮಂಜೂರಾತಿ ನೀಡಿದೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾರ್ಯನಿರ್ವಹಣಾಧಿಕಾರಿ ಮೂಲಕ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಕಳೆದ 2 ವರ್ಷಗಳಿಂದ ಸಿಬ್ಬಂದಿ ವೇತನ ಬಾಕಿ ಇದೆ. 3 ತಿಂಗಳಿಗೊಮ್ಮೆ ಬಿಡುಗಡೆ ಮಾಡುವ ಕಂತಿನ ಹಣ ಕೇವಲ 2 ತಿಂಗಳ ವೇತನಕ್ಕೆ ಸಾಕಾಗುತ್ತದೆ. ಹೀಗಾಗಿ 2 ವರ್ಷಗಳಿಂದ 8 ತಿಂಗಳ ವೇತನ ಬಾಕಿ ಇದೆ. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ವೇತನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

14ನೇ ಹಣಕಾಸು ಆಯೋಗದ ಶೇ 10ರಷ್ಟು ಆಡಳಿತ ವೆಚ್ಚವನ್ನು ವೇತನಕ್ಕೆ ಬಳಸಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಬಾಕಿ ಇರುವ ಪಂಚಾಯಿತಿಗಳಲ್ಲಿ ಹಣ ಪಾವತಿಸಲು ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ. 15ನೇ ಹಣಕಾಸು ಯೋಜನೆಯ ಆಡಳಿತ ವೆಚ್ಚದಲ್ಲಿ, ನರೇಗಾ ತೆರಿಗೆ ಸಂಗ್ರಹ ಇತ್ಯಾದಿಗಳಲ್ಲಿ ನೌಕರರಿಗೆ ವೇತನ ನೀಡಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು
ತಿಳಿಸಿದರು.

ಸಿಬ್ಬಂದಿಯ ವೇತನಕ್ಕಾಗಿ ₹382 ಕೋಟಿ ಮಂಜೂರು ಮಾಡಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ಮಾಡಬೇಕು. ಬಡ್ತಿಯ ಕೋಟಾ ಹೆಚ್ಚಿಸಬೇಕು. ಸಿಬ್ಬಂದಿಗೆ ವೈದ್ಯಕೀಯ ವೆಚ್ಚ, 15 ತಿಂಗಳ ಗ್ರಾಚ್ಯುಟಿ ಹಾಗೂ ನಿವೃತ್ತಿ ವೇತನ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು.

ಸಿಐಟಿಯು ರಾಜ್ಯ ಕಾರ್ಯದರ್ಶಿ ರಾಮಕೃಷ್ಣ, ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಗೌರವಾಧ್ಯಕ್ಷ ಫಯಾಜ್, ಪಾಪಣ್ಣ, ವಿ.ಶಂಕರಪ್ಪ, ವಿಜಯ್ ಕುಮಾರ್, ನರಸಿಂಹಪ್ಪ, ಗಂಗುಲಪ್ಪ, ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.