ಕೊನೆಗೂ ಆರಂಭವಾದ ನವೀಕರಣ ಕಾರ್ಯ!

7
ನನೆಗುದಿಗೆ ಬಿದ್ದ ಯೋಜನೆಗೆ ಎರಡು ವರ್ಷದ ನಂತರ ಚಾಲನೆ, ನವೆಂಬರ್‌ನಲ್ಲಿ ತಾಯಿ, ಮಗು ಆರೈಕೆ ಕೇಂದ್ರ ಕಾರ್ಯಾರಂಭ?, ಧೂಳು ತಿನ್ನುತ್ತಿದ್ದ ಕಟ್ಟಡದಲ್ಲಿ ಕಾಮಗಾರಿ ಸದ್ದು

ಕೊನೆಗೂ ಆರಂಭವಾದ ನವೀಕರಣ ಕಾರ್ಯ!

Published:
Updated:
ಜಿಲ್ಲಾ ಆಸ್ಪತ್ರೆ ಹಳೆ ಆಸ್ಪತ್ರೆಯಲ್ಲಿ ನವೀಕರಣಕ್ಕಾಗಿ ನೆಲಹಾಸು ಕಿತ್ತು ಹಾಕಿರುವುದು

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ₹ 4.50 ಕೋಟಿ ವೆಚ್ಚದಲ್ಲಿ 135 ಹಾಸಿಗೆಯುಳ್ಳ ತಾಯಿ ಮತ್ತು ಮಗು ಆರೈಕೆ ಕೇಂದ್ರ ನಿರ್ಮಿಸುವ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿ ಬರೋಬರಿ ಎರಡು ವರ್ಷಗಳು ಕಳೆದಿವೆ. ಇದೀಗ ಆರೈಕೆ ಕೇಂದ್ರ ತೆರೆಯುವುದಕ್ಕಾಗಿ ಜಿಲ್ಲಾ ಆಸ್ಪತ್ರೆ ಹಳೆ ಕಟ್ಟಡ ನವೀಕರಣಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ!

2016ರ ಜುಲೈ 2ರಂದು ಅದ್ದೂರಿಯಾಗಿ ನಡೆದ ಮುಖ್ಯಮಂತ್ರಿ ಅವರ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ವತಿಯಿಂದ ‘ಮುನ್ನಡೆಯತ್ತ ಚಿಕ್ಕಬಳ್ಳಾಪುರ’ ಎಂಬ ಹೊತ್ತಿಗೆ ಹಂಚಲಾಗಿತ್ತು. ಅದರಲ್ಲಿ ‘ಮುಂದಿನ ಹೆಜ್ಜೆಗಳು’ ಎಂಬ ಶೀರ್ಷಿಕೆಯಡಿ ಗ್ರಾಫಿಕ್ಸ್‌ನಲ್ಲಿ ಸಿದ್ಧಪಡಿಸಿದ ‘ಅಂದ’ವಾದ ಕಟ್ಟಡದ ಚಿತ್ರ ಮುದ್ರಿಸಿ, ₹ 4.50 ಕೋಟಿ ವೆಚ್ಚದ ತಾಯಿ ಮತ್ತು ಮಗು ಆರೈಕೆ ಕೇಂದ್ರದ ಶಂಕುಸ್ಥಾಪನೆ ಕಾಮಗಾರಿ ಎಂದು ತೋರಿಸಲಾಗಿತ್ತು. ಈವರೆಗೆ ಆ ಕೇಂದ್ರ ಎಲ್ಲಿದೆ ಎನ್ನುವುದೇ ನಾಗರಿಕರಿಗೆ ತಿಳಿದಿರಲಿಲ್ಲ.

ಆರಂಭದಲ್ಲಿ ಜಿಲ್ಲಾಡಳಿತದ ಹೊತ್ತಿಗೆಯಲ್ಲಿರುವ ಚಿತ್ರ ನೋಡಿದವರೆಲ್ಲ ಜಿಲ್ಲಾ ಕೇಂದ್ರದಲ್ಲಿ ಮತ್ತೊಂದು ಹೊಸ ಕಟ್ಟಡ ತಲೆ ಎತ್ತಲಿದೆ ಎಂದು ಭಾವಿಸಿದ್ದರು. ಆದರೆ ದಿನಕಳೆದಂತೆ ಆರೈಕೆ ಕೇಂದ್ರಕ್ಕಾಗಿ ಹೊಸ ಕಟ್ಟಡ ಕಟ್ಟುವುದಿಲ್ಲ. ಬದಲು ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡವನ್ನೇ ₹ 1.50 ಕೋಟಿ ವೆಚ್ಚದಲ್ಲಿ ನವೀಕರಿಸಿ, ಅದರಲ್ಲಿಯೇ 135 ಹಾಸಿಗೆಗಳ ಆರೈಕೆ ಕೇಂದ್ರ ಕಾರ್ಯಾರಂಭ ಮಾಡುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರು.

ಹಳೆಯ ಕಟ್ಟಡದಲ್ಲಿದ್ದ ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಒಂದು ವರ್ಷ ಮೂರು ತಿಂಗಳು ಕಳೆದರೂ ಈವರೆಗೆ ಆರೈಕೆ ಕೇಂದ್ರದ ಕಾಮಗಾರಿ ಮಾತ್ರ ಆರಂಭಗೊಂಡಿರಲಿಲ್ಲ. ಹೀಗಾಗಿ ಕಳೆದ 15 ತಿಂಗಳುಗಳಿಂದ ಹಳೆಯ ಕಟ್ಟಡ ಧೂಳು ತಿನ್ನುತ್ತಿತ್ತು. ವಾರದ ಹಿಂದಷ್ಟೇ ನವೀಕರಣ ಕಾಮಗಾರಿ ಆರಂಭಗೊಂಡಿದೆ.

ವಿ.ಮುರುಳಿ ಕೃಷ್ಣ ಎಂಬ ಗುತ್ತಿಗೆದಾರರು ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಸದ್ಯ ನೆಲಹಾಸು ತೆಗೆದು ಹಾಕಲಾಗುತ್ತಿದೆ. ನಾಲ್ಕು ತಿಂಗಳಲ್ಲಿ ಕಟ್ಟಡದ ಸೋರಿಕೆಗೆ ತೇಪೆ ಹಾಕುವುದು, ನೆಲ ಹಾಸು ಬದಲಾಯಿಸುವುದು, ಬಣ್ಣ ಬಳಿಯುವುದು, ವೈರಿಂಗ್, ಪ್ಲಬಿಂಗ್ ಮತ್ತಿತರ ಕಾಮಗಾರಿ ನಡೆಯಲಿವೆ.

‘ಜಿಲ್ಲಾ ಆಸ್ಪತ್ರೆ ಹಳೆ ಕಟ್ಟಡ ನವೀಕರಣ ಕಾಮಗಾರಿ ಆರಂಭಗೊಂಡಿದೆ. ಪೂರ್ಣಗೊಳಿಸಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಜಿಲ್ಲಾ ಆಸ್ಪತ್ರೆಯಿಂದ ನವೀಕೃತ ಕಟ್ಟಡಕ್ಕೆ ತಾಯಿ ಮತ್ತು ಮಗು ಆರೈಕೆ ವಿಭಾಗವನ್ನು ಸ್ಥಳಾಂತರಿಸುತ್ತೇವೆ. ಸದ್ಯ ನವೀಕರಣ ಕಾಮಗಾರಿಗಾಗಿ ₹ 1.50 ಕೋಟಿ ಮಂಜೂರಾಗಿದೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್‌.

ವರ್ಷಕ್ಕೂ ಹೆಚ್ಚು ವಿಳಂಬವಾಗಿ ನವೀಕರಣ ಕಾರ್ಯ ಆರಂಭಗೊಂಡಿದೆ. ಅದು ಮುಗಿದು ಆರೈಕೆ ಕೇಂದ್ರಕ್ಕೆ ಹೆಚ್ಚುವರಿ ಪ್ರಸೂತಿ, ಅರವಳಿಕೆ ಮತ್ತು ಮಕ್ಕಳ ತಜ್ಞರು ನೇಮಕ ಮಾಡಿಕೊಂಡು ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕಾದರೆ ಇನ್ನು ಎಷ್ಟು ದಿನ ಎದುರು ನೋಡಬೇಕು ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ.

ಗುಣಮಟ್ಟದ ನೆಲಹಾಸು ಕಿತ್ತರು!

ಹಳೆ ಕಟ್ಟಡದ ನೆಲಹಾಸು ಉತ್ತಮ ಗುಣಮಟ್ಟದಲ್ಲಿದ್ದರೂ ಅದನ್ನು ಕಿತ್ತು ಹಾಕುತ್ತಿರುವುದು ಅನೇಕ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಚೆನ್ನಾಗಿರುವ ನೆಲಹಾಸಿನ ಕಲ್ಲುಗಳನ್ನು ಕಿತ್ತು ಹಾಕಿ ಟೈಲ್ಸ್ ಅಳವಡಿಸಲು ಹೊರಟಿರುವುದು ನವೀಕರಣದ ಹೆಸರಿನಲ್ಲಿ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳಿಗೆ ಕಾರಣವಾಗಿದೆ. ಈ ಕುರಿತು ಕಾಮಗಾರಿ ಮೇಲ್ವಿಚಾರಣೆ ನಡೆಸುತ್ತಿದ್ದ ಎಂಜನಿಯರ್ ಲೋಕೇಶ್ ಅವರನ್ನು ವಿಚಾರಿಸಿದರೆ, ‘ನೆಲಹಾಸು ಚೆನ್ನಾಗಿದೆ ನಿಜ. ಆದರೆ ಹೊಸ ಆಸ್ಪತ್ರೆಗೆ ಗ್ರಾನೈಟ್, ಟೈಲ್ಸ್‌ ಅಳವಡಿಸಿದರೆ ಅಂದವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ನೆಲಹಾಸು ಬದಲಾಯಿಸಲು ನಿರ್ಧರಿಸಬಹುದು’ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಅವರಿಗೆ ಯಾರ ಭಯವೂ ಇಲ್ಲ. ಎರಡು ವರ್ಷಗಳ ನಂತರವಾದರೂ ಕಾಮಗಾರಿ ಆರಂಭವಾಯಿತಲ್ಲ ಸಮಾಧಾನಪಡಬೇಕು.
- ಪೃಥ್ವಿ, ವಾಪಸಂದ್ರ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !